
ನವದೆಹಲಿ (ಅ.26) ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಹಲೆವೆಡೆ ಪ್ರವಾಹಗಳು ಸಷ್ಟಿಯಾಗಿದೆ. ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಹಲೆವೆಡೆ ಅನಾಹುತಗಳೇ ಸಂಭವಿಸಿದೆ. ಮಳೆ ಪ್ರಮಾಣ ಕಡಿಮೆಯಾಗುತ್ತಿದೆ ಅನ್ನೋವಷ್ಟರಲ್ಲೇ ಇದೀಗ ಹವಾಮಾನ ಇಲಾಖೆ ಮಹತ್ವದ ಎಚ್ಚರಿಕೆ ನೀಡಿದೆ. ಅಕ್ಟೋಬರ್ 28ಕ್ಕೆ ಮೊಂಥ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಹೀಗಾಗಿ ಮತ್ತೆ ಕರ್ನಾಟಕ ಸೇರಿದಂತೆ ಕೆಲ ರಾಜ್ಯದಲ್ಲಿ ಭಾರಿ ಮಳೆ ಅಬ್ಬರ ಆರಂಭಗೊಳ್ಳಲಿದೆ ಎಂದು ಐಎಂಡಿ ಎಚ್ಚರಿಸಿದೆ.
ಅಕ್ಟೋಬರ್ 28 ರಂದು ಆಂಧ್ರ ಪ್ರದೇಶ ಕರಾವಳಿ ತೀರ ಪ್ರದೇಶಕ್ಕೆ ಮೊಂಥ ಚಂಡಮಾರುತ ಅಪ್ಪಳಿಸಲಿದೆ. 90 ರಿಂದ 100 ಕಿಲೋಮೀಟರ್ ವೇಗದಲ್ಲಿ ಮೊಂಥ ಚಂಡಮಾರುತ ಅಪ್ಪಳಿಸುತ್ತಿದೆ. ಅತೀ ವೇಗದಲ್ಲಿ ಅಪ್ಪಳಿಸುವ ಕಾರಣ ಮಳೆ ಪ್ರಮಾಣವೂ ಹೆಚ್ಚಾಗಲಿದೆ ಎಂದು ಐಎಂಡಿ ಎಚ್ಚರಿಸಿದೆ.
ಮೊಂಥ ಚಂಡಮಾರುತದಿಂದ ಮೂರು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಭಾರಿ ಮಳೆಯಾಗಲಿದೆ ಎಂದಿದೆ. ಆಂಧ್ರ ಪ್ರದೇಶ, ಒಡಿಶಾ, ತಮಿಳು ರಾಜ್ಯಗಳ ಜೊತೆ, ಪುದುಚೇರಿಯಲ್ಲೂ ಭಾರಿ ಮಳೆಯಾಗಲಿದೆ ಎಂದಿದೆ. ಇದೇ ವೇಳೆ ಈ ರಾಜ್ಯಗಳ ಸುತ್ತ ಮುತ್ತಲಿನ ಪ್ರದೇಶಗಳಲ್ಲೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಕರ್ನಾಟಕದಲ್ಲಿ ಅಕ್ಟೋಬರ್ 26ರಿಂದಲೇ ಮಳೆ ಹೆಚ್ಚಾಗಲಿದೆ. ಅಕ್ಟೋಬರ್ 27 ಹಾಗೂ 28ಕ್ಕೆ ಮಳೆ ಪ್ರಮಾಣ ಹೆಚ್ಚಾಗಲಿದೆ. ಕರ್ನಾಟದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ. ಈಗಾಗಲೇ ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಬೆಂಗಳೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲೂ ಮತ್ತೆ ಮಳೆ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಚಂಡ ಮಾರುತ ಅಪ್ಪಳಿಸುವ ಮುನ್ನಚ್ಚರಿಕೆಯಿಂದ ಆಂಧ್ರ ಪ್ರದೇಶ, ತಮಿಳುನಾಡು, ಒಡಿಶಾದಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ರಕ್ಷಣಾ ತಂಡಗಳು ಕಾರ್ಯಾಚರಣೆಗೆ ಸಜ್ಜಾಗಿದೆ. ಸರ್ವಸನ್ನದ್ಧವಾಗಿರುವ ಈ ತಂಡಗಳನ್ನು ಈಗಾಗಲೇ ಕರಾವಳಿ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಈಗಾಗಲೇ ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಒಡಿಶಾದಲ್ಲಿ ರಕ್ಷಣಾ ತಂಡಗಳ ಕಾರ್ಯಾಚರಣೆ ಮಾಡುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ