ಆರು ಟ್ರಂಕ್‌ಗಳಲ್ಲಿ ರಾಜ್ಯದಿಂದ ತಮಿಳುನಾಡಿಗೆ ತಲುಪಲಿದೆ ಜಯಲಲಿತಾಗೆ ಸೇರಿದ ಚಿನ್ನಾಭರಣ, ಸೀರೆ, ಚಪ್ಪಲಿ

By Suvarna NewsFirst Published Feb 20, 2024, 10:45 AM IST
Highlights

ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಕರ್ನಾಟಕ ಸರ್ಕಾರದ ಸ್ವಾಧೀನದಲ್ಲಿದ್ದ ತಮಿಳುನಾಡಿನ ಮಾಜಿ ಮುಖ್ಯ ಮಂತ್ರಿ ದಿ. ಜೆ. ಜಯಲಲಿತಾ ಅವರಿಗೆ
ಸೇರಿದ್ದ ಚಿನ್ನಾಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಬರುವ ಮಾ.6 ಮತ್ತು 7ರಂದು ನಡೆಸಲು ನಗರದ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಮಾನಿಸಿದೆ.

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಕರ್ನಾಟಕ ಸರ್ಕಾರದ ಸ್ವಾಧೀನದಲ್ಲಿದ್ದ ತಮಿಳುನಾಡಿನ ಮಾಜಿ ಮುಖ್ಯ ಮಂತ್ರಿ ದಿ. ಜೆ. ಜಯಲಲಿತಾ ಅವರಿಗೆ
ಸೇರಿದ್ದ ಚಿನ್ನಾಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಬರುವ ಮಾ.6 ಮತ್ತು 7ರಂದು ನಡೆಸಲು ನಗರದ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಮಾನಿಸಿದೆ.  ಅಲ್ಲದೇ ಈ ಪ್ರಕರಣದಲ್ಲಿ ಕರ್ನಾಟಕ ಸರ್ಕಾರಕ್ಕೆ ತಗಲುವ ವೆಚ್ಚಕ್ಕಾಗಿ ತಮಿಳುನಾಡು ಸರ್ಕಾರ ಕರ್ನಾಟಕಕ್ಕೆ 5 ಕೋಟಿ ಪರಿಹಾರ ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ

ಆರ್‌ಟಿಐ ಕಾರ್ಯಕರ್ತ ಟಿ. ನರಸಿಂಹ ಮೂರ್ತಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನಗರದ 36ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಈ ನಿರ್ಧಾರ ಕೈಗೊಂಡಿದೆ. ಅಲ್ಲದೆ, ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲು ಅಧಿಕೃತವಾಗಿ ನೇಮಕಗೊಂಡಿರುವ ವ್ಯಕ್ತಿ, ತಮಿಳುನಾಡು ಸರ್ಕಾರದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಪೊಲೀಸ್ ಇಲಾಖೆಯ ಐಜಿಪಿ ಅವರೊಂದಿಗೆ ಬರಬೇಕು. ಈ ವೇಳೆ ಛಾಯಾಗ್ರಾಹಕರು, ವಿಡಿಯೋಗ್ರಾಫರ್‌ ಮತ್ತು ಆರು ದೊಡ್ಡ ಪೆಟ್ಟಿಗೆಗಳನ್ನು (ಟ್ರಂಕ್) ಅಗತ್ಯ ಭದ್ರತೆಯೊಂದಿಗೆ ತಂದು, ಚಿನ್ನಾಭರಣಗಳನ್ನು ಪಡೆದುಕೊಳ್ಳಬೇಕು. ಈ ವಿಚಾರವನ್ನು ತಮಿಳುನಾಡು ಡಿವೈಎಸ್‌ಪಿ ಅವರು ಅಲ್ಲಿನ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಗಮನಕ್ಕೆ ತರಬೇಕು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ನಿರ್ದೇಶಿಸಿದೆ.

ದೇಶದ ಶ್ರೀಮಂತ ಕನ್ನಡ ನಟಿ ಬಳಿಯಿತ್ತು 10 ಸಾವಿರ ಸೀರೆಗಳು, 800 ಕೆಜಿ ಬೆಳ್ಳಿ, 28 ಕೆಜಿ ಚಿನ್ನ,ಇಡೀ ದೇಶವೇ ಶಾಕ್!

1996ರಲ್ಲಿ ದಾಖಲಾದ ಪ್ರಕರಣ

1996ರಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ಇಲಾಖೆ ಪ್ರಕರಣ ದಾಖಲಿಸಿತು. ಜಯಲಲಿತಾ ಅವರ ಬೋಯಸ್ ಗಾರ್ಡನ್ ನಿವಾಸದ ಮೇಲೆ ನಡೆದ ದಾಳಿ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ, ವಜ್ರಾಭರಣಗಳು, ಬೆಳ್ಳಿ ವಸ್ತುಗಳು ಹಾಗೂ ಕೈಗಡಿಯಾರಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣವೂ ಬೆಂಗಳೂರು ನ್ಯಾಯಾಲಯದಲ್ಲಿ ನಡೆಯುತ್ತಿದ್ದಿದ್ದರಿಂದ ವಶಪಡಿಸಿಕೊಂಡ ಚಿನ್ನಾಭರಣ ಸೇರಿದಂತೆ ಎಲ್ಲ ವಸ್ತುಗಳನ್ನು ಇಲ್ಲಿನ ಖಜಾನೆಯಲ್ಲಿ ಇಡಲಾಗಿತ್ತು. 2016 ರಲ್ಲಿ ಅನಾರೋಗ್ಯದಿಂದ ಜಯಲಲಿತಾ ನಿಧನರಾದರು.

ಇದಾದ ನಂತರ ಆಸ್ತಿ ಸಂಗ್ರಹ ಪ್ರಕರಣದಲ್ಲಿ ಶಶಿಕಲಾ, ಇಳವರಸಿ ಮತ್ತು ಸುಧಾಕರನ್ ತಪ್ಪಿತಸ್ಥರೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು ಮತ್ತು ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯಿತು. ಇದಾದ ಬಳಿಕ ಶಶಿಕಲಾ ಸೇರಿದಂತೆ ಮೂವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದರು. ಈ ನಡುವೆ ಸಾಮಾಜಿಕ ಕಾರ್ಯಕರ್ತ ನರಸಿಂಹ ಮೂರ್ತಿ ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಜಯಲಲಿತಾ ಅವರ ವಸ್ತುಗಳನ್ನು ಹರಾಜು ಹಾಕಿ ಅದರಿಂದ ಬಂದ ಹಣವನ್ನು ಕಲ್ಯಾಣ ಯೋಜನೆಗಳಿಗೆ ಬಳಸಬೇಕು ಎಂದು ಆಗ್ರಹಿಸಿದರು.

ಆಭರಣಗಳ ಮೇಲೆ ಹಕ್ಕು ಚಲಾಯಿಸಲು ಬಂದ ಸೊಸೆ

ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸೊಸೆ ಜೆ.ದೀಪಾ ಅವರು ಸರ್ಕಾರ ಜಪ್ತಿ ಮಾಡಿರುವ ಜಯಲಲಿತಾ ಅವರ ಆಸ್ತಿಗಳ ಮೇಲೆ ತನಗೆ ಹಕ್ಕಿದೆ ಮತ್ತು ಅವುಗಳನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದರು. ಆದರೆ ಅವರ ಅರ್ಜಿಯನ್ನು ವಜಾಗೊಳಿಸಲಾಯಿತು. ಈ ಎಲ್ಲಾ ಆಭರಣಗಳು ಈಗ ಕರ್ನಾಟಕದ ಖಜಾನೆಯಲ್ಲಿವೆ. ಇತ್ತೀಚೆಗೆ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಜಯಲಲಿತಾ ಅವರಿಗೆ ಸೇರಿದ ವಸ್ತುಗಳಿಗೆ ಸಂಬಂಧಿಸಿದ ಪ್ರಕರಣ ವಿಚಾರಣೆಗೆ ಬಂದಾಗ ಆಭರಣಗಳನ್ನು ಹರಾಜು ಮಾಡುವ ಬದಲು ತಮಿಳುನಾಡು ಸರ್ಕಾರದ ಗೃಹ ಇಲಾಖೆಯ ಮೂಲಕ ತಮಿಳುನಾಡಿಗೆ ವರ್ಗಾಯಿಸುವುದು ಉತ್ತಮ ಎಂಬ ತೀರ್ಮಾನಿಸಲಾಯಿತು.

ತಮಿಳುನಾಡು ವಿಧಾನಸಭೆಯಲ್ಲಿ 'ಜಯಾ ಪ್ರತಿಜ್ಞೆ' ನೆನೆದ ನಿರ್ಮಲಾ ಸೀತಾರಾಮನ್: ಅಂದು ಆಗಿದ್ದೇನು?

ಇದಕ್ಕಾಗಿ ತಮಿಳುನಾಡು ಸರ್ಕಾರವು ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಯನ್ನು ನೇಮಿಸಿತು ಮತ್ತು ಆಭರಣಗಳನ್ನು ಸಂಗ್ರಹಿಸಲು ಪೊಲೀಸರೊಂದಿಗೆ ಬರುವಂತೆ ಆದೇಶಿಸಿತು. ಈ ಪ್ರಕರಣದಲ್ಲಿ ತಮಿಳುನಾಡು ಗೃಹ ಕಾರ್ಯದರ್ಶಿ ಖುದ್ದು ಹಾಜರಾಗಿ ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಚಿನ್ನಾಭರಣವನ್ನು ಮಾರ್ಚ್ 6 ಮತ್ತು 7ರಂದು ಪಡೆಯಬಹುದು ಎಂದು ನ್ಯಾಯಾಲಯ ಹೇಳಿದೆ. ಚಿನ್ನಾಭರಣ ಪಡೆಯುವ ದಿನದಂದು ಅಗತ್ಯ ಭದ್ರತಾ ವ್ಯವಸ್ಥೆ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.

ಜಯಲಿಲಿತಾ ಅವರ ಒಡವೆಗಳ ಮೌಲ್ಯವೆಷ್ಟು?

ಅದರಂತೆ ಬೆಂಗಳೂರಿನಿಂದ 6 ಟ್ರಂಕ್‌ಗಳಲ್ಲಿ ಜಯಲಲಿತಾ ಅವರಿಗೆ ಸೇರಿದ 28 ಕೆಜಿ ಚಿನ್ನ, ವಜ್ರಾಭರಣಗಳು, 800 ಕೆಜಿ ಬೆಳ್ಳಿ ಆಭರಣಗಳು, 11,344 ದುಬಾರಿ ರೇಷ್ಮೆ ಸೀರೆಗಳು ಮತ್ತು 740 ದುಬಾರಿ ಚಪ್ಪಲಿಗಳು ತಮಿಳುನಾಡಿಗೆ ತಲುಪಲಿವೆ. ಇವುಗಳ ಮೌಲ್ಯ ಹಲವು ಕೋಟೆಗಳಿರಬಹುದು ಎಂದು ಅಂದಾಜಿಸಲಾಗಿದ್ದು, ಅವುಗಳನ್ನು ತಮಿಳುನಾಡು ಸರ್ಕಾರದ ಖಜಾನೆಯಲ್ಲಿ ಇರಿಸಲಾಗುತ್ತದೆ. 

click me!