
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಐಐಟಿಯನ್ ಬಾಬಾ ಎಂದೇ ಖ್ಯಾತಿ ಗಳಿಸಿದ್ದ ಅಭಯ್ ಸಿಂಗ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕಾರಣ ಅವರ ಬದಲಾದ ನೋಟ. ಐಐಟಿಯನ್ ಬಾಬಾ ಅಭಯ್ ಸಿಂಗ್ ತಮ್ಮ ಗಡ್ಡ ಮೀಸೆ ಎಲ್ಲವನ್ನು ತೆಗೆದು ಕ್ಲೀನ್ ಶೇವ್ ಮಾಡಿಕೊಂಡಿದ್ದು, ಅವರ ಹೊಸ ಲುಕ್ ವೈರಲ್ ಆಗುತ್ತಿದೆ. ಕ್ಲೀನ್ ಶೇವ್‌ನಲ್ಲಿ ಅವರು ಹೀರೋ ರೀತಿ ಕಾಣಿಸುತ್ತಿದ್ದಾರೆ. ಐಐಟಿಯನ್ ಬಾಬಾ ಅಭಯ್ ಸಿಂಗ್ ಮೊದಲ ಬಾರಿಗೆ ಮಾಧ್ಯಮಗಳಲ್ಲಿ ಅವರ ಉನ್ನತವಾದ ಶಿಕ್ಷಣ, ವೃತ್ತಿಪರ ಹಿನ್ನೆಲೆಯ ಕಾರಣಕ್ಕೆ ಕುಂಭಮೇಳದ ಆರಂಭವಾದ ಸಂದರ್ಭದಲ್ಲಿ ವ್ಯಾಪಕವಾಗಿ ಸುದ್ದಿಯಾಗಿ ಸಂಚಲನ ಸೃಷ್ಟಿಸಿದವರು. ಸಾಮಾನ್ಯವಾಗಿ ಸನ್ಯಾಸಿಯಾದವರು ಗಡ ಮೀಸೆಗಳನ್ನು ತೆಗೆಯುವುದು ತೀರಾ ಕಡಿಮೆ ಒಂದೊಂದು ಸಮುದಾಯದ ಸನ್ಯಾಸಿಗಳಿಗೆ ಒಂದೊಂದು ರೀತಿಯ ವೇಷಭೂಷಣವಿದೆ. ಅದೇ ರೀತಿ ಅಭಯ್ ಸಿಂಗ್ ಅವರು ಮೊದಲಿಗೆ ಮಾಧ್ಯಮಗಳಲ್ಲಿ ಸುದ್ದಿಯಾದಾಗ ಅವರು ಮಾಮೂಲಿ ಸನ್ಯಾಸಿಗಳಂತೆ ಗಡ್ಡ ಬಿಟ್ಟುಕೊಂಡಿದ್ದರು. ಹೀಗಾಗಿ ಅವರ ಈ ಬದಲಾವಣೆಯ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದು ಕೇಳಿದಾಗ ಅವರು ಏನು ಹೇಳಿದ್ದಾರೆ ನೋಡಿ...
ಅಭಯ್ ಸಿಂಗ್ ಬಾಬಾ ಗಡ್ಡ ಮೀಸೆ ತೆಗೆದಿದ್ದು, ಈಗ ಕ್ಲೀನ್ ಶೇವ್ ಮಾಡಿಕೊಂಡಿದ್ದಾರೆ. ಆದರೆ, ಅವರು ತಮ್ಮ ಉದ್ದನೆಯ ಕೂದಲನ್ನು ಉಳಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ಪ್ರಶ್ನೆ ಕೇಳಿದಾಗ, ನಾನು ಇದನ್ನು ಮೊದಲಿನಿಂದಲೂ ಮಾಡುತ್ತಲೇ ಇದ್ದೇನೆ ಎಂದು ಅಭಯ್ ಸಿಂಗ್ ಹೇಳಿದ್ದಾರೆ. ಎರಡು ಮೂರು ತಿಂಗಳಲ್ಲಿ ನನ್ನ ಗಡ್ಡ ಬೆಳೆಯುತ್ತದೆ, ನಾನು ಅದನ್ನು ಕತ್ತರಿಸುತ್ತೇನೆ. ನಾಳೆ ಕ್ಷೌರ ಮಾಡ್ತೀನಿ ಛಾಯಾಗ್ರಹಣ ಮಾಡ್ತೀನಿ ಅಂತ ರಾತ್ರಿಯಲ್ಲೇ ಮಹದೇವ್ (ಶಿವ) ಗೆ ಹೇಳಿದ್ದೆ, ಇವತ್ತೇ ಮಾಡಿ ಮುಗಿಸಿದೆ ಎಂದು ಹೇಳಿದ್ದಾರೆ. ಅಭಯ್ ಸಿಂಗ್ ಬಾಬಾ.
ನಾನು ಇದನ್ನು ಮಾಡುತ್ತಲೇ ಇದ್ದೇನೆ, ಹಿಂದೆಯೂ ಮಾಡಿದ್ದೇನೆ. ನಾನು ಈ ಪ್ರಯಾಣಕ್ಕೆ ಬಂದಾಗ ಮಹದೇವ್ ನನಗೆ ಹೇಳಿದ್ದು ಎರಡೇ ಎರಡು ವಿಷಯಗಳು ಒಂದು ರಾತ್ರಿ ಒಂದೇ ಸ್ಥಳದಲ್ಲಿ ಉಳಿಯುವುದು ಮತ್ತು ಮುಂದೆ ಹೋಗುವುದು ಮಾತ್ರ ಒಂದು ಕಿಲೋಮೀಟರ್, ಎರಡು ಕಿಲೋಮೀಟರ್ ನಡೆಯಿರಿ. ಎರಡು-ಮೂರು ತಿಂಗಳು ಕಳೆದವು, ಗಡ್ಡ ಬೆಳೆದಿದೆ, ನಾನು ಬೋಳಿಸಿಕೊಂಡಿದ್ದೇನೆ, ನಾನು ಅದನ್ನು ಮೊದಲೇ ಮಾಡುತ್ತಿದ್ದೆ ಎಂದು ಉತ್ತರಿಸಿದ್ದಾರೆ.
ಇದೇ ವೇಳೆ ಅವರು ತಾವು ಕಿವಿಯೋಲೆ ಧರಿಸುತ್ತಿರುವುದಕ್ಕೂ ಕಾರಣ ಹೇಳಿದ್ದಾರೆ. ನಾನು ಈ ಎಲ್ಲಾ ಕೆಲಸಗಳನ್ನು ಕೆಲವು ಸನ್ಯಾಸಿಗಳು ಮಾಡುವ ಕಾರಣಕ್ಕೆ ಮಾಡುತ್ತಿರುವುದಲ್ಲ, ಈ ಸಾಧನಗಳನ್ನು ಆಧ್ಯಾತ್ಮಿಕತೆಯಲ್ಲಿ ಬಳಸುವುದರಿಂದ ನಾನು ಬಳಸುತ್ತೇನೆ. ಮಾಲೆಯನ್ನು ಧರಿಸುವುದು, ತಿಲಕವನ್ನು ಹಚ್ಚುವುದು ಅಥವಾ ಧೋತಿಯನ್ನು ಧರಿಸುವುದು ನನಗೆ ಇದೆಲ್ಲವೂ ಕ್ರಿಯಾತ್ಮಕವಾಗಿದೆ, ಆದ್ದರಿಂದ ನಾನು ಅದನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ.
ಕ್ಲೀನ್ ಶೇವ್ ಗೆಟಪ್ ಯಾಕೆ ಅಳವಡಿಸಿಕೊಂಡಿದ್ದೀರಿ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಭಯ್ ಸಿಂಗ್, ನನಗೆ ಗಡ್ಡ ಮೀಸೆ ಇತ್ತು ಹಾಗಾಗಿ ಜನ ನನ್ನನ್ನು ಐಐಟಿ ವಾಲೆ ಬಾಬಾ ಎಂದು ಕರೆಯುತ್ತಿದ್ದರು. ಭಗವಾನ್ ಶಂಕರ ಮತ್ತು ಶ್ರೀಕೃಷ್ಣ ಕೂಡ ಗಡ್ಡವನ್ನು ಇಟ್ಟುಕೊಂಡಿರಲಿಲ್ಲ ಆದರೆ ಯಾರೂ ಅವರನ್ನು ಶ್ರೀ ಕೃಷ್ಣ ಬಾಬಾ' ಎಂದು ಕರೆಯುವುದಿಲ್ಲ. ಅದಕ್ಕೇ ಕ್ಲೀನ್ ಶೇವ್ ಮಾಡಿಕೊಂಡೆ. ಅದೇನೇ ಇರಲಿ, ದೇವರು ನಮ್ಮೆಲ್ಲರೊಳಗಿದ್ದಾನೆ ಎಂದು ಶಂಕರಾಚಾರ್ಯರ 'ಅಹಂ ಬ್ರಹ್ಮಾಸ್ಮಿ' ಬಗ್ಗೆಯೂ ಉಲ್ಲೇಖಿಸಿದ್ದಾರೆ.
ಕೆಲ ದಿನಗಳ ಹಿಂದೆ ಈ ಐಐಟಿಯನ್ ಬಾಬಾ ಅವರನ್ನು ಅವರಿದ್ದ ಜುನಾ ಅಖಾರದಿಂದ ಕಿತ್ತು ಹಾಕಲಾಗಿತ್ತು. ಅಭಯ್ ಸಿಂಗ್ ತಮ್ಮ ಗುರು ಮಹಂತ್ ಸೋಮೇಶ್ವರ ಪುರಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದ್ದು, ಇದೇ ಕಾರಣಕ್ಕೆ ಅವರನ್ನು ಹೊರ ಹಾಕಲಾಗಿದೆ ಎಂದು ವರದಿಯಾಗಿದ್ದವು. ಈ ವಿಚಾರಕ್ಕೆ ಸಂಬಂಧಿಸಿದಂತೆ ಜುನಾ ಅಖಾರದ ಮುಖ್ಯ ಪೋಷಕ ಮಹಂತ್ ಹರಿ ಗಿರಿ ಅಂಗ್ಲ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಅಭಯ್ ಅವರ ವರ್ತನೆಯೂ ಗುರು ಶಿಷ್ಯ ಪರಂಪರೆ ಹಾಗೂ ಸನ್ಯಾಸಿಗಳ ತತ್ವಕ್ಕೆ ವಿರುದ್ಧವಾಗಿದೆ. ಗುರುಗಳನ್ನು ಅಗೌರವದಿಂದ ಕಾಣುವುದು ಹಾಗೂ ಸನಾತನ ಧರ್ಮ ಮತ್ತು ಅಖಾಡದ ಬಗ್ಗೆ ಗೌರವದ ಕೊರತೆಯನ್ನು ತೋರಿಸುತ್ತದೆ. ಜುನಾ ಅಖಾಡದಲ್ಲಿ ಶಿಸ್ತು ಅತ್ಯಂತ ಮಹತ್ವದ್ದಾಗಿದೆ ಮತ್ತು ಯಾರೂ ಅದಕ್ಕಿಂತ ಮೇಲಲ್ಲ ನಾನು ಕೂಡ ಮೇಲಲ್ಲ, ಹಾಗೆಯೇ ಅಭಯ್ ಸಿಂಗ್‌ನಂತಹ ಯಾರೂ ಕೂಡ ಅಲ್ಲ ಎಂದು ಮಹಂತ್ ಹರಿ ಗಿರಿ ಹೇಳಿದ್ದರು. ಅಭಯ್ ಸಿಂಗ್ ತನ್ನ ಗುರುಗಳನ್ನು ಗೌರವಿಸಲು ಮತ್ತು ಅದರ ಶಿಸ್ತನ್ನು ಪಾಲಿಸಲು ಕಲಿಯುವವರೆಗೆ ಅಖಾಡದಿಂದ ಅವರನ್ನು ನಿಷೇಧಿಸಲಾಗುವುದು ಎಂದು ಅಖಾಡ ಸ್ಪಷ್ಟಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ