
ನವದೆಹಲಿ: ವಿಶೇಷ ಮತಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಸ್ವತಃ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ವಾದ ಮಂಡಿಸಿದ ಅಪರೂಪದ ಘಟನೆಗೆ ಸುಪ್ರೀಂಕೋರ್ಟ್ ಬುಧವಾರ ಸಾಕ್ಷಿಯಾಯಿತು. ಜೊತೆಗೆ, ದೇಶದ ಇತಿಹಾಸದಲ್ಲೇ ಮುಖ್ಯಮಂತ್ರಿಯೊಬ್ಬರು ನ್ಯಾಯಾಲಯದಲ್ಲಿ ವಾದ ಮಂಡಿಸಿದ ಮೊದಲ ಘಟನೆಯೂ ಇದೆಂಬ ದಾಖಲೆಯೂ ಸೃಷ್ಟಿಯಾಯಿತು.
ಚುನಾವಣೆ ಆಯೋಗದ ವಿರುದ್ಧ ಹಲವು ತಿಂಗಳಿನಿಂದ ಎಸ್‌ಐಆರ್ ವಿಷಯದಲ್ಲಿ ಸತತ ವಾಗ್ದಾಳಿ ನಡೆಸುತ್ತಿದ್ದ ಮಮತಾ, ಈ ವಿಷಯದಲ್ಲಿ ಸುಪ್ರೀಂಕೋರ್ಟ್ ಮತ್ತು ದೇಶದ ಗಮನ ಸಳೆಯಲೋ ಎಂಬಂತೆ ಬುಧವಾರ ಸ್ವತಃ ತಾವೇ ವಾದ ಮಂಡಿಸಲು ಹಾಜರಾಗಿದ್ದರು. ಕಾನೂನು ಪದವಿ ಪಡೆದು, ದಶಕಗಳ ಹಿಂದೆ ವಕೀಲಿಕೆಯ ಅನುಭವ ಪಡೆದಿದ್ದ ಮಮತಾ ತಮ್ಮ ಎಂದಿನ ಶೈಲಿಯಾದ ಬಿಳಿಯ ಸೀರೆ ಉಟ್ಟು ಅದರ ಮೇಲೆ ಕರಿಕೋಟು ಹೋಲುವ ರೀತಿಯ ಉದ್ದನೆಯ ಶಾಲು ಧರಿಸಿ ನ್ಯಾಯಾಲಯಕ್ಕೆ ಆಗಮಿಸಿದ್ದರು.
ಝಡ್ ಪ್ಲಸ್ ಭದ್ರತೆ ಹೊಂದಿರುವ ಮಮತಾ ಅವರು ನ್ಯಾಯಾಲಯದ ಕಾರಿಡಾರ್‌ನಲ್ಲಿ ನಡೆದು ಬರುತ್ತಿರುವಾಗ ಅಲ್ಲಿದ್ದವರು ಅವರಿಗೆ ನಮಸ್ಕರಿಸಿದರು. ಹಲವು ಮಂದಿ ಫೋಟೋ ತೆಗೆದುಕೊಳ್ಳಲು ಮುಗಿಬಿದ್ದರು. ನಮಸ್ಕಾರ ಮಾಡುತ್ತಾ ಕೋರ್ಟ್ ಹಾಲ್ ಪ್ರವೇಶಿಸಿದ ಮಮತಾ ಅವರು ಮುಂದಿನ ಸಾಲಿನಲ್ಲಿ ಕೂರಬೇಕಿತ್ತು. ಆದರೆ ಪ್ರೇಕ್ಷಕರ ಗ್ಯಾಲರಿಗೆ ಹೋಗಿ ಕುಳಿತರು. ಅವರ ಫೋಟೋ ತೆಗೆದುಕೊಳ್ಳಲು ಜನರು ಮುಗಿಬಿದ್ದಾಗ, ಭದ್ರತಾ ಸಿಬ್ಬಂದಿ ಮೊಬೈಲ್ ವಶಕ್ಕೆ ಪಡೆದರು.
ಬೇರೆ ಕೇಸ್ ವಿಚಾರಣೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಎರಡೂವರೆ ಗಂಟೆ ಕಾಲ ತಾಳ್ಮೆಯಿಂದ ಅವರು ಕಾದು ಕುಳಿತಿದ್ದರು. ತಮ್ಮ ಸರದಿ ಬಂದಾಗಿ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಮುಂದೆ 5 ನಿಮಿಷ ವಾದ ಮಂಡನೆಗೆ ಅವಕಾಶ ಕೋರಿದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯೆ ನೀಡಿದ ಸಿಜೆಐ, ಐದೇಕೆ, 15 ನಿಮಿಷ ಕೊಡುತ್ತೇವೆ ಎಂದು ಹೇಳಿದರು. ಬಳಿಕ ಸಮರ್ಥವಾಗಿ ವಾದ ಮಂಡಿಸಿ ನ್ಯಾಯಾಲಯ ಗಮನ ಸೆಳೆದರು.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಹೆಸರಲ್ಲಿ ಪಶ್ಚಿಮ ಬಂಗಾಳವನ್ನು ಗುರಿ ಮಾಡಲಾಗುತ್ತಿದೆ, ಜನರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ. ಹೀಗಾಗಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು, ಪ್ರಜಾಪ್ರಭುತ್ವವನ್ನು ಉಳಿಸಬೇಕು ಎಂದು ಮಮತಾ ಬ್ಯಾನರ್ಜಿ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದರು.
‘58 ಲಕ್ಷ ಮಂದಿ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ ಮಾಡಲಾಗುತ್ತಿದೆ. ಚುನಾವಣಾ ಆಯೋಗ... ಕ್ಷಮಿಸಿ, ವಾಟ್ಸಪ್ ಆಯೋಗ ಇದನ್ನೆಲ್ಲ ಮಾಡುತ್ತಿದೆ. ಪಶ್ಟಿಮ ಬಂಗಾಳವನ್ನು, ರಾಜ್ಯದ ಜನರನ್ನು ಟಾರ್ಗೆಟ್ ಮಾಡಲಾಗುತ್ತಿದೆ’ ಎಂದು ಕಿಡಿಕಾರಿದರು.
ಈ ವೇಳೆ ಚುನಾವಣಾ ಆಯೋಗ ಮತ್ತು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ ಅವರಿಂದ ಈ ಸಂಬಂಧ ಫೆ.9ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿ ಪೀಠ ನೋಟಿಸ್ ನೀಡಿತು.
ಬಳಿಕ ಮಮತಾ ಸರ್ಕಾರದ ಪರವಾಗಿ ವಾದಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್, ಚುನಾವಣಾ ಆಯೋಗವು ಈವರೆಗೆ 1.36 ಕೋಟಿ ಮಂದಿಗೆ ತಾರ್ಕಿಕ ವ್ಯತ್ಯಾಸದ ಉಲ್ಲಂಘನೆ ಹೆಸರಿನಲ್ಲಿ ನೋಟಿಸ್ ಜಾರಿ ಮಾಡಿದೆ. ಇವುಗಳಲ್ಲಿ ಕೆಲ ಪ್ರಕರಣಗಳಲ್ಲಿ ಅಕ್ಷರ ತಪ್ಪಾಗಿ ಯಡವಟ್ಟಾಗಿದೆ. ಅದನ್ನು ಸುಲಭವಾಗಿ ಸರಿಪಡಿಸಬಹುದಾಗಿದೆ ಎಂದು ವಾದಿಸಿದರು.
ಆಗ ಪೀಠವು, ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ. ಯಾವುದೇ ಪ್ರಾಮಾಣಿಕ ವ್ಯಕ್ತಿಯು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನಾವು ನೋಡಿಕೊಳ್ಳಬೇಕು. ಅಲ್ಲದೆ ಸಣ್ಣಪುಟ್ಟ ವ್ಯತ್ಯಾಸಗಳಿಗೂ ಜನರಿಗೆ ನೋಟಿಸ್ ನೀಡಿದಂತೆ ನಿಮ್ಮ ಅಧಿಕಾರಿಗಳಿಗೆ ತಿಳಿಸಿ ಎಂದು ಚುನಾವಣ ಆಯೋಗಕ್ಕೆ ಸೂಚಿಸಿತು.
ಈ ವೇಳೆ, ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮೈಕ್ರೋ ಅಬ್ಸರ್ವರ್‌ಗಳೇ ಮಹತ್ವದ ಪಾತ್ರವಹಿಸುತ್ತಿದ್ದಾರೆ. ಇಂಥ 3,800 ಮೈಕ್ರೋ ಅಬ್ಸರ್ವರ್‌ಗಳಲ್ಲಿ ಹೆಚ್ಚಿನವರು ಬಿಜೆಪಿ ಆಡಳಿತವಿರುವ ರಾಜ್ಯಗಳಿಂದ ನಿಯೋಜಿಸಲ್ಪಟ್ಟವರಾಗಿದ್ದಾರೆ ಎಂದು ಆರೋಪಿಸಿದರು.
ಇದಕ್ಕೆ ತಿರುಗೇಟು ನೀಡಿದ ಚುನಾವಣಾ ಆಯೋಗದ ಹಿರಿಯ ವಕೀಲ ರಾಕೇಶ್ ದ್ವಿವೇದಿ, ಎಸ್‌ಐಆರ್‌ಗೆ ಪಶ್ಚಿಮ ಬಂಗಾಳ ಸರ್ಕಾರದಿಂದ ಸಹಕಾರ ಸಿಗುತ್ತಿಲ್ಲ. ಕೇವಲ 80 ಮಂದಿ ಗ್ರೇಡ್ 2 ಅಧಿಕಾರಿಗಳನ್ನು, ಅಂಗನವಾಡಿ ನೌಕರರಂಥ ಕೆಳಹಂತದ ನೌಕರರನ್ನು ನಿಯೋಜಿಸಿದೆ. ಅವರಿಗೆ ದಾಖಲೆಗಳನ್ನು ಪರಿಶೀಲಿಸುವ ಯಾವುದೇ ಅಧಿಕಾರವೇ ಇಲ್ಲ ಎಂದು ತಿಳಿಸಿದರು.
- ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಮಮತಾ
- ಆ ವಿಷಯದ ಗಂಭೀರತೆ ಬಗ್ಗೆ ಸುಪ್ರೀಂಕೋರ್ಟ್ ಹಾಗೂ ದೇಶದ ಗಮನ ಸೆಳೆಯಲು ಖುದ್ದು ವಾದ ಮಂಡನೆ
- ಝಡ್ ಪ್ಲಸ್ ಭದ್ರತೆಯೊಂದಿಗೆ, ಹತ್ತಾರು ವಕೀಲರ ಜತೆ ಸುಪ್ರೀಂಕೋರ್ಟ್‌ಗೆ ಆಗಮಿಸಿದ ಬಂಗಾಳ ಸಿಎಂ
- ಕಾರಿಡಾರ್‌ನಲ್ಲಿ ಮಮತಾ ಕಂಡು ವಕೀಲರು, ಜನರಿಗೆ ತೀವ್ರ ಅಚ್ಚರಿ. ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದ ಜನ
- ಕೋರ್ಟ್ ಹಾಲ್‌ಗೆ ಹೋಗಿ, ಹಿಂದಿನ ಸಾಲಿನಲ್ಲಿ ಕುಳಿತ ಮಮತಾ. ಎರಡೂವರೆ ತಾಸು ಕಾದು ವಾದ ಮಂಡನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ