ಗ್ರಾಹಕ ಕಾಯ್ದೆ ರದ್ದು: ಸರ್ಕಾರಕ್ಕೆ ಸುಪ್ರೀಂ ಎಚ್ಚರಿಕೆ!

By Suvarna NewsFirst Published Oct 23, 2021, 9:50 AM IST
Highlights

* ಗ್ರಾಹಕ ಆಯೋಗದಲ್ಲಿ ಖಾಲಿ ಹುದ್ದೆ ಭರ್ತಿ ವಿಳಂಬಕ್ಕೆ ಆಕ್ರೋಶ

* ಕೂಡಲೇ ಗ್ರಾಹಕರ ಆಯೋಗದ ಸಿಬ್ಬಂದಿ ನೇಮಕಕ್ಕೆ ತಾಕೀತು

* ಗ್ರಾಹಕ ಕಾಯ್ದೆ ರದ್ದು: ಸರ್ಕಾರಕ್ಕೆ ಸುಪ್ರೀಂ ಎಚ್ಚರಿಕೆ

ನವದೆಹಲಿ(ಅ.23): ಗ್ರಾಹಕರ ದೂರು ಪರಿಹಾರ ಆಯೋಗದ ರಾಜ್ಯ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದಿರುವುದಕ್ಕೆ ಸುಪ್ರೀಂಕೋರ್ಟ್‌(Supreme Court) ಅಸಮಾಧಾನ ವ್ಯಕ್ತಪಡಿಸಿದೆ. ಸರ್ಕಾರಕ್ಕೆ ಪ್ರಾಧಿಕಾರಗಳು ಬೇಕಿಲ್ಲದಿದ್ದಲ್ಲಿ ಗ್ರಾಹಕರ ರಕ್ಷಣಾ ಕಾಯ್ದೆಯನ್ನೇ(Consumer Protection Act) ರದ್ದು ಮಾಡುವುದುದಾಗಿ ಶುಕ್ರವಾರ ಎಚ್ಚರಿಸಿದೆ.

ನ್ಯಾಯಮೂರ್ತಿಗಳಾದ ಎಸ್‌.ಕೆ. ಕೌಲ್‌(SK Paul) ಮತ್ತು ಎಂ.ಎಂ.ಸುಂದರೇಶ್‌ ನೇತೃತ್ವದ ದ್ವಿಸದಸ್ಯ ಪೀಠ, ಪ್ರಾಧಿಕಾರದಲ್ಲಿ ‘ಖಾಲಿ ಹುದ್ದೆಗಳು ಭರ್ತಿ ಆಗಿವೆಯೋ ಇಲ್ಲವೋ ಎಂಬುದನ್ನು ಕೋರ್ಟ್‌ ಪರೀಕ್ಷಿಸಬೇಕಾಗಿ ಬಂದಿರುವುದು ದುರದೃಷ್ಟಕರ. ಒಂದು ವಾರದೊಳಗೆ ಖಾಲಿ ಹುದ್ದೆಗಳ ವಿವರ ಸಲ್ಲಿಸಬೇಕು’ ಎಂದು ಸೂಚಿಸಿತು.

ಈ ಕುರಿತ ಸ್ವಯಂಪ್ರೇರಿತ ಅರ್ಜಿ ವಿಚಾರಣೆ ನಡೆಸಿದ ಪೀಠ, ‘ದೇಶಾದ್ಯಂತ ಖಾಲಿ ಇರುವ ರಾಜ್ಯ ಮತ್ತು ಜಿಲ್ಲಾ ಗ್ರಾಹಕರ ಪರಿಹಾರ ಆಯೋಗದ ವೇದಿಕೆಯ ಅಧ್ಯಕ್ಷರು, ಸದಸ್ಯರು ಮತ್ತು ಸಿಬ್ಬಂದಿಯನ್ನು ನೇಮಕ ಮಾಡಬೇಕು’ ಎಂದು ಸರ್ಕಾರಕ್ಕೆ ತಾಕೀತು ಮಾಡಿತು.

‘ಸಿಬ್ಬಂದಿ ನೇಮಕ ವಿಳಂಬವಾಗುತ್ತಿರುವುದರಿಂದ ಗ್ರಾಹಕರು ಪರಿಹಾರಕ್ಕಾಗಿ ಪರದಾಡುವಂತಾಗಿದೆ. ಗ್ರಾಹಕರ ವ್ಯಾಜ್ಯ ಬಗೆಹರಿಸಲು ಶಾಶ್ವತ ಆಯೋಗ ಬೇಕು. ನಿಮಗೆ ಆಗದಿದ್ದರೆ ಹೇಳಿ, ನಾವು ನಮ್ಮ ನ್ಯಾಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತೇವೆ. ಜಿಲ್ಲಾ ಕೇಂದ್ರಗಳಲ್ಲಿ ಗ್ರಾಹಕರ ಪರಿಹಾರ ಆಯೋಗದ ಬದಲು ಗ್ರಾಹಕರ ಕೋರ್ಟ್‌ ಸ್ಥಾಪಿಸಿ ನ್ಯಾಯಾಧೀಶರನ್ನು ನೇಮಕ ಮಾಡುತ್ತೇವೆ’ ಎಂದು ಕಿಡಿಕಾರಿತು.

ಇನ್ನು ಸಿಬ್ಬಂದಿ ನೇಮಕಾತಿ ವಿಚಾರದಲ್ಲಿ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ನೀಡಿದ್ದ ಆದೇಶವನ್ನೂ ಸರ್ಕಾರ ಪಾಲನೆ ಮಾಡಿಲ್ಲವೆಂದು, ಅಮಿಕಸ್‌ ಕ್ಯೂರಿ ಗೋಪಾಲ್‌ ಶಂಕರ್‌ನಾರಾಯಣನ್‌ ನ್ಯಾಯಪೀಠದ ಗಮನಕ್ಕೆ ತಂದರು.

ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಹಾಯಕ ಸಾಲಿಸಿಟರ್‌ ಜನರಲ್‌ ಅಮನ್‌ ಲೇಖಿ, ಬಾಂಬೆ ಹೈಕೋರ್ಟ್‌ ಆದೇಶದಂತೆ ಸರ್ಕಾರ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆದಿದೆ ಎಂದರು.

click me!