
ಚಂಡೀಗಢ (ಫೆ.25): ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನ ಚಂಡೀಗಢ ಶಾಖೆಯಲ್ಲಿ ನಡೆದ ₹590 ಕೋಟಿ ವಂಚನೆಯ ಹಿಂದೆ ಅದೇ ಬ್ಯಾಂಕ್‌ನ ಮಾಜಿ ಮ್ಯಾನೇಜರ್ ಮಾಸ್ಟರ್ ಪ್ಲಾನ್ ಇರುವುದು ಪತ್ತೆಯಾಗಿದೆ. ಹರಿಯಾಣ ಸರ್ಕಾರದ ಇಲಾಖೆಗಳ ಖಾತೆಯಲ್ಲಿದ್ದ ಹಣವನ್ನು ಮ್ಯಾನೇಜರ್ ತನ್ನ ಪತ್ನಿ ಮತ್ತು ಭಾವನಿಗೆ ಸೇರಿದ ಕಂಪನಿಗೆ ಅಕ್ರಮವಾಗಿ ವರ್ಗಾಯಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಹರಿಯಾಣದ ಭ್ರಷ್ಟಾಚಾರ ವಿರೋಧಿ ದಳ (ACB) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಬ್ರಾಂಚ್ ಮ್ಯಾನೇಜರ್ ರಿಭವ್ ರಿಷಿ, ಮಾಜಿ ರಿಲೇಶನ್‌ಶಿಪ್ ಮ್ಯಾನೇಜರ್ ಅಭಯ್, ರಿಭವ್ ಪತ್ನಿ ಸ್ವಾತಿ ಸಿಂಗ್ಲಾ ಮತ್ತು ಆಕೆಯ ಸಹೋದರ ಅಭಿಷೇಕ್ ಸಿಂಗ್ಲಾ ಅವರನ್ನು ಬಂಧಿಸಿದೆ.
ಹಗರಣದ ಒಟ್ಟು ಮೊತ್ತದಲ್ಲಿ ಸುಮಾರು ₹300 ಕೋಟಿ ಹಣವನ್ನು 'ಸ್ವಸ್ತಿಕ್ ದೇಶ್ ಪ್ರಾಜೆಕ್ಟ್ಸ್' ಎಂಬ ಕಂಪನಿಗೆ ವರ್ಗಾಯಿಸಲಾಗಿತ್ತು. ಈ ಕಂಪನಿಯಲ್ಲಿ ರಿಭವ್ ಪತ್ನಿ ಸ್ವಾತಿ ಶೇ. 75 ಮತ್ತು ಆಕೆಯ ಸಹೋದರ ಅಭಿಷೇಕ್ ಶೇ. 25 ರಷ್ಟು ಪಾಲುದಾರಿಕೆ ಹೊಂದಿದ್ದಾರೆ.
ಮುಖ್ಯ ಆರೋಪಿಗಳಾದ ರಿಭವ್ ಮತ್ತು ಅಭಯ್ ಸುಮಾರು ಆರು ತಿಂಗಳ ಹಿಂದೆಯೇ ಬ್ಯಾಂಕ್ ಕೆಲಸಕ್ಕೆ ರಾಜೀನಾಮೆ ನೀಡಿದ್ದರು ಎಂದು ಎಸಿಬಿ ಮಹಾನಿರ್ದೇಶಕ ಎ.ಎಸ್. ಚಾವ್ಲಾ ತಿಳಿಸಿದ್ದಾರೆ.
ಹರಿಯಾಣ ಸರ್ಕಾರದ ಇಲಾಖೆಯೊಂದು ತನ್ನ ಖಾತೆಯನ್ನು ಮುಚ್ಚಿ, ಹಣವನ್ನು ಬೇರೆ ಬ್ಯಾಂಕಿಗೆ ವರ್ಗಾಯಿಸಲು ಐಡಿಎಫ್‌ಸಿ ಬ್ಯಾಂಕಿಗೆ ಕೋರಿಕೆ ಸಲ್ಲಿಸಿತ್ತು. ಈ ಪ್ರಕ್ರಿಯೆಯ ವೇಳೆ ಬ್ಯಾಂಕ್ ದಾಖಲೆಗಳಲ್ಲಿರುವ ಮೊತ್ತ ಮತ್ತು ವಾಸ್ತವವಾಗಿ ಖಾತೆಯಲ್ಲಿರುವ ಬಾಕಿ ನಡುವೆ ಭಾರಿ ವ್ಯತ್ಯಾಸವಿರುವುದು ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ಬಂದಿದೆ. ಇದೇ ರೀತಿಯ ವ್ಯತ್ಯಾಸಗಳು ಹರಿಯಾಣ ಸರ್ಕಾರದ ಇತರ ಖಾತೆಗಳಲ್ಲೂ ಪತ್ತೆಯಾದಾಗ ಹಗರಣದ ಗಂಭೀರತೆ ಅರಿವಿಗೆ ಬಂದಿದೆ.
"ರಿಭವ್ ಮತ್ತು ಅಭಯ್ ಈ ಇಡೀ ಹಗರಣದ ರೂವಾರಿಗಳು. ₹300 ಕೋಟಿ ಹಣವು ಸ್ವಸ್ತಿಕ್ ದೇಶ್ ಪ್ರಾಜೆಕ್ಟ್ಸ್ ಕಂಪನಿಗೆ ವರ್ಗಾವಣೆಯಾಗಿ ಅಲ್ಲಿಂದ ಬೇರೆಡೆಗೆ ಹೋಗಿದೆ. ಹರಿಯಾಣದ ಸರ್ಕಾರಿ ಇಲಾಖೆಗಳ ಖಾತೆಯನ್ನು ರಾಜ್ಯದ ವ್ಯಾಪ್ತಿಯ ಹೊರಗೆ (ಚಂಡೀಗಢ) ತೆರೆಯಲು ಹಿರಿಯ ಮ್ಯಾನೇಜ್‌ಮೆಂಟ್ ಹೇಗೆ ಅನುಮತಿ ನೀಡಿತು ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ," ಎಂದು ಚಾವ್ಲಾ ತಿಳಿಸಿದ್ದಾರೆ. ವಂಚನೆಯ ಹಣವನ್ನು ಮೊಹಾಲಿಯಲ್ಲಿರುವ ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಶಾಖೆಗೆ ವರ್ಗಾಯಿಸಲಾಗಿತ್ತು.
ತನಿಖೆ ಪ್ರಗತಿಯಲ್ಲಿರುವಾಗಲೇ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮಹತ್ವದ ನಿರ್ಧಾರ ಕೈಗೊಂಡಿದೆ. ಹರಿಯಾಣ ಸರ್ಕಾರದ ಇಲಾಖೆಗಳು ಕ್ಲೈಮ್ ಮಾಡಿದ ಪೂರ್ಣ ಮೊತ್ತವನ್ನು (ಅಸಲು ಮತ್ತು ಬಡ್ಡಿ ಸೇರಿ ಒಟ್ಟು ₹583 ಕೋಟಿ) ಬ್ಯಾಂಕ್ ಈಗಾಗಲೇ ಮರುಪಾವತಿಸಿದೆ.
ಬ್ಯಾಂಕ್ ಹೇಳಿಕೆ: "ತನಿಖೆ ಪೂರ್ಣಗೊಳ್ಳುವವರೆಗೆ ನಾವು ಹಣವನ್ನು ತಡೆಹಿಡಿಯಲಿಲ್ಲ. ನಮ್ಮ 'ಗ್ರಾಹಕರಿಗೆ ಮೊದಲ ಆದ್ಯತೆ' (Customer First) ಎಂಬ ತತ್ವದ ಅಡಿಯಲ್ಲಿ ಈ ನಿರ್ಧಾರ ಕೈಗೊಂಡಿದ್ದೇವೆ. ಬ್ಯಾಂಕಿನ ಈ ವೃತ್ತಿಪರ ಮತ್ತು ತ್ವರಿತ ಸ್ಪಂದನೆಗೆ ಹರಿಯಾಣ ಸರ್ಕಾರವು ಮೆಚ್ಚುಗೆ ವ್ಯಕ್ತಪಡಿಸಿದೆ," ಎಂದು ಬ್ಯಾಂಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ