ಫಟಾಫಟ್‌ ಕೊರೋನಾ ಪರೀಕ್ಷೆಗೆ ಆ್ಯಂಟಿಜೆನ್‌ ಕಿಟ್‌ ಬಳಸಲು ಸಮ್ಮತಿ!

By Kannadaprabha NewsFirst Published Jun 16, 2020, 11:33 AM IST
Highlights

ಫಟಾಫಟ್‌ ಕೊರೋನಾ ಪರೀಕ್ಷೆಗೆ ಆ್ಯಂಟಿಜೆನ್‌ ಕಿಟ್‌ ಬಳಸಲು ಸಮ್ಮತಿ| 500 ರು.ಗೆ ಪರೀಕ್ಷೆ, ಅರ್ಧತಾಸಲ್ಲಿ ಫಲಿತಾಂಶ| ಕೊರೋನಾ ಪರೀಕ್ಷೆಗೆ ಸಿಗಲಿದೆ ಭಾರಿ ವೇಗ

ನವದೆಹಲಿ(ಜೂ.16): ಯಾವುದೇ ವ್ಯಕ್ತಿ ಕೊರೋನಾ ವೈರಸ್‌ ಸೋಂಕಿಗೆ ತುತ್ತಾಗಿದ್ದಾನೆಯೆ ಎಂಬುದನ್ನು ಅತ್ಯಂತ ಕಡಿಮೆ ದರದಲ್ಲಿ ಹಾಗೂ ಪ್ರಯೋಗಾಲಯದ ನೆರವಿಲ್ಲದೇ ಬಹುಬೇಗನೆ ತಿಳಿಸುವ ಆ್ಯಂಟಿಜೆನ್‌ (ಪ್ರತಿಜನಕ) ಆಧರಿತ ಪರೀಕ್ಷಾ ಕಿಟ್‌ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಅನುಮತಿ ನೀಡಿದೆ.

ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ಪರೀಕ್ಷೆಗಳು ನಡೆಯುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿರುವಾಗಲೇ, ಐಸಿಎಂಆರ್‌ ಹೊಸ ಮಾದರಿಯ ಪರೀಕ್ಷಾ ಕಿಟ್‌ಗೆ ನಿಶಾನೆ ತೋರಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಕೊರೋನಾ ಪರೀಕ್ಷೆಗಳು ನಡೆಯುವ ನಿರೀಕ್ಷೆ ಇದೆ.

ಆ್ಯಂಟಿಜೆನ್‌ ಆಧರಿತ ಪರೀಕ್ಷಾ ಕಿಟ್‌ಗೆ ಕೇವಲ 500 ರು. ಇದೆ. ಪರೀಕ್ಷೆ ನಡೆಸಿದ ಅರ್ಧತಾಸಿನಲ್ಲಿ ಫಲಿತಾಂಶ ಕೈಗೆ ಸಿಗಲಿದೆ. ಮೂಗಿನಿಂದ ಸಂಗ್ರಹಿಸಲಾದ ಸ್ವಾ್ಯಬ್‌ ಬಳಸಿ ಎಲ್ಲಿ ಬೇಕಾದರೂ ಪರೀಕ್ಷೆ ನಡೆಸಬಹುದು. ಸ್ಯಾಂಪಲ್‌ ಅನ್ನು ಪ್ರಯೋಗಾಲಯಕ್ಕೇ ರವಾನಿಸಬೇಕು ಎಂದಿಲ್ಲ. ಈ ಪರೀಕ್ಷೆ ಮೂಲಕ ಸೋಂಕಿತ ವ್ಯಕ್ತಿಯ ರೋಗ ನಿರೋಧಕ ವ್ಯವಸ್ಥೆ ಸಕ್ರಿಯಗೊಳಿಸುವ ರೋಗಾಣುವಿನ ಕಣವನ್ನು ಶೋಧಿಸಬಹುದಾಗಿದೆ. ಆ ಕಣ ಇದ್ದರೆ ವ್ಯಕ್ತಿಗೆ ಸೋಂಕು ತಗುಲಿದೆ, ಆತನ ರೋಗ ನಿರೋಧಕ ವ್ಯವಸ್ಥೆ ಹೋರಾಡುತ್ತಿದೆ ಎಂಬುದರ ದ್ಯೋತಕವಾಗಿದೆ. ಎಸ್‌ಡಿ ಬಯೋಸೆನ್ಸರ್‌ ಎಂಬ ಜೈವಿಕ ತಂತ್ರಜ್ಞಾನ ಕಂಪನಿ ಈ ಕಿಟ್‌ ಅಭಿವೃದ್ಧಿಪಡಿಸಿದೆ.

ಸದ್ಯ ಕೊರೋನಾ ಪರೀಕ್ಷೆಗೆ ಕೇಂದ್ರ ಸರ್ಕಾರ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಮೊರೆ ಹೋಗಿದೆ. ಪ್ರತಿನಿತ್ಯ 1.5 ಲಕ್ಷ ಪರೀಕ್ಷೆಗಳು ಈ ವಿಧಾನದಡಿ ನಡೆಯುತ್ತಿವೆ. ಆದರೆ ಒಂದು ಪರೀಕ್ಷಾ ಕಿಟ್‌ಗೆ 2500 ರು. ಬೆಲೆ ಇರುವುದು ಹೊರೆಯಾಗಿದೆ. ಜತೆಗೆ ಸ್ಯಾಂಪಲ್‌ ಸಂಗ್ರಹಿಸಿ, ಅದನ್ನು ಪ್ರಯೋಗಾಲಯಕ್ಕೆ ರವಾನಿಸಬೇಕು. ಲ್ಯಾಬ್‌ ತಲುಪಿದ 3ರಿಂದ 4 ಗಂಟೆ ಬಳಿಕ ಫಲಿತಾಂಶ ಕೈಗೆ ಸಿಗಲಿದೆ.

click me!