ಪೌರತ್ವ ಕಾಯ್ದೆ ಸಮೀಕ್ಷೆ: ತೀವ್ರ ಪ್ರತಿಭಟನೆಯ ನಡುವೆಯೂ ಅಚ್ಚರಿಯ ಜನಮತ!

By Suvarna NewsFirst Published Dec 23, 2019, 11:52 AM IST
Highlights

ಪೌರತ್ವ ಕಾಯ್ದೆ ಪರ ಶೇ.62 ಜನಮತ-ಸಮೀಕ್ಷೆ| ಶೇ.36ರಷ್ಟುಜನರಿಂದ ಕಾಯ್ದೆಗೆ ವಿರೋಧ| ಐಎಎನ್‌ಎಸ್‌ ಮತ್ತು ಸಿ ವೋಟರ್‌ ಸಮೀಕ್ಷೆ| ದೇಶಾದ್ಯಂತ ಎನ್‌ಆರ್‌ಸಿ ಜಾರಿಗೂ ಒಲವು| ಪೌರತ್ವ ಕಾಯ್ದೆ ಪರ ಶೇ.62| ಪೌರತ್ವ ಕಾಯ್ದೆ ವಿರುದ್ಧ ಶೇ.36| ಎನ್‌ಆರ್‌ಸಿ ಪರ ಶೇ.65.4| ಎನ್‌ಆರ್‌ಸಿ ವಿರುದ್ಧ ಶೇ.28.3

ನವದೆಹಲಿ[ಡಿ.23]: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ವ್ಯಾಪಕ ಹಿಂಸಾಚಾರ ನಡೆಯುತ್ತಿರುವಾಗಲೇ, ದೇಶದ ಶೇ.62ರಷ್ಟುಜನ ಈ ಕಾಯ್ದೆ ಪರ ಒಲವು ಹೊಂದಿದ್ದಾರೆ ಎಂಬ ಕುತೂಹಲಕರ ಮಾಹಿತಿ ಸಮೀಕ್ಷೆಯೊಂದರಿಂದ ತಿಳಿದುಬಂದಿದೆ.

"

ಇದೇ ವೇಳೆ, ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ)ಯನ್ನು ದೇಶವ್ಯಾಪಿ ಜಾರಿಗೆ ತರಬೇಕು ಎಂದು ಶೇ.65.4ರಷ್ಟುಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪೌರತ್ವ ಕಾಯ್ದೆ ತಿದ್ದುಪಡಿ ಹಾಗೂ ಎನ್‌ಆರ್‌ಸಿ ಎರಡೂ ಅಕ್ರಮ ವಲಸಿಗರ ವಿರುದ್ಧ ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಕ್ರಮಗಳಾಗಿವೆ ಎಂದು ಶೇ.55.9ರಷ್ಟುಜನರು ಹೇಳಿದ್ದಾರೆ ಎಂದು ಸುದ್ದಿಸಂಸ್ಥೆಯಾಗಿರುವ ಐಎಎನ್‌ಎಸ್‌ ಮತ್ತು ಸಿ ವೋಟರ್‌ ನಡೆಸಿರುವ ಸಮೀಕ್ಷೆ ತಿಳಿಸಿದೆ.

ಅಸ್ಸಾಂನಲ್ಲಿ ಎನ್‌ಆರ್‌ಸಿಗೆ ಜನರು ಭಾರಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಪೌರತ್ವ ತಿದ್ದುಪಡಿ ಕಾಯ್ದೆಗೆ ತೀವ್ರ ವಿರೋಧ ಮಾಡಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಪೌರತ್ವ ಕಾಯ್ದೆಗೆ ಜೈ:

ಸಮೀಕ್ಷೆಯಲ್ಲಿ ಭಾಗಿಯಾದ ಜನರ ಪೈಕಿ ಶೇ.62.1ರಷ್ಟುಜನ ಪೌರತ್ವ ಕಾಯ್ದೆ ತಿದ್ದುಪಡಿಗೆ ತಮ್ಮ ಬೆಂಬಲವಿದೆ ಎಂದು ಹೇಳಿದ್ದಾರೆ. ಆದರೆ ಶೇ.36.8ರಷ್ಟುಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಪೂರ್ವ ಭಾರತದಲ್ಲಿ ಶೇ.57.3, ಪಶ್ಚಿಮ ಭಾರತದಲ್ಲಿ ಶೇ.64.2, ಉತ್ತರ ಭಾರತದಲ್ಲಿ ಶೇ.67.7 ಹಾಗೂ ದಕ್ಷಿಣ ಭಾರತದಲ್ಲಿ ಶೇ.58.5ರಷ್ಟುಮಂದಿ ಕಾಯ್ದೆ ಪರ ಬೆಂಬಲ ಸೂಚಿಸಿದ್ದಾರೆ.

ಅಸ್ಸಾಂನಲ್ಲಿ ಶೇ.68.1 ರಷ್ಟುಮಂದಿ ಪೌರತ್ವ ಕಾಯ್ದೆಯನ್ನು ವಿರೋಧಿಸಿದ್ದಾರೆ. ಶೇ.31ರಷ್ಟುಮಂದಿ ಬೆಂಬಲಿಸಿದ್ದಾರೆ. ದೇಶಾದ್ಯಂತ ಶೇ.63.5ರಷ್ಟುಮುಸ್ಲಿಮರು ಕಾಯ್ದೆಯನ್ನು ವಿರೋಧಿಸಿದ್ದರೆ, ಶೇ.35.5ರಷ್ಟುಮಂದಿ ಬೆಂಬಲಿಸಿದ್ದಾರೆ. ಹಿಂದುಗಳ ಪೈಕಿ ಶೇ.66.7ರಷ್ಟುಮಂದಿ ಬೆಂಬಲ ನೀಡಿದ್ದರೆ, ಶೇ.32.3ರಷ್ಟುಮಂದಿ ವಿರೋಧ ಮಾಡಿದ್ದಾರೆ ಎಂದು ಸಮೀಕ್ಷೆ ವಿವರಿಸಿದೆ.

ಶೇ.73ರಷ್ಟುಮುಸ್ಲಿಮರು ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಜನಸಂಖ್ಯೆ ಹೆಚ್ಚುತ್ತದೆ. ಇದರಿಂದ ಆರ್ಥಿಕ ಭಾರವಾಗುತ್ತದೆ ಎಂದು ಹೇಳಿದ್ದಾರೆ. ಶೇ.63 ಹಿಂದೂಗಳು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೆ ಶೇ.47.1 ಭಾರತೀಯರು ಮಾತ್ರ ಈ ಕಾಯ್ದೆ ಮೂಲಕ ಭಾರತೀಯ ಸಂವಿಧಾನದ ಆಶಯವನ್ನು ಉಲ್ಲಂಘಿಸಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದರೆ, ಶೇ.47.4ರಷ್ಟುಜನ ಸಂವಿಧಾನದ ಉಲ್ಲಂಘನೆ ಆಗಿಲ್ಲ ಎಂದಿದ್ದಾರೆ. ಉಳಿದ ಶೇ.5.5 ಜನರು ಏನೂ ಹೇಳಬಯಸಿಲ್ಲ.

ಎನ್‌ಆರ್‌ಸಿ ಜಾರಿ ಮಾಡಿ ಎಂದ ಜನ:

ಸಮೀಕ್ಷೆಯಲ್ಲಿ ಭಾಗಿಯಾದ ಶೇ.65.4ರಷ್ಟುಜನ ದೇಶಾದ್ಯಂತ ಎನ್‌ಆರ್‌ಸಿ ಜಾರಿಯಾಗಬೇಕು ಎಂದು ಹೇಳಿದ್ದರೆ, ಶೇ.28.3ರಷ್ಟುಜನ ಎನ್‌ಆರ್‌ಸಿ ಬೇಡ ಎಂದಿದ್ದಾರೆ. ಅಸ್ಸಾಂನಲ್ಲಿ ಶೇ.76.9ರಷ್ಟುಜನ ಎನ್‌ಆರ್‌ಸಿ ಇರಲಿ ಎಂದು ತಿಳಿಸಿದ್ದಾರೆ. ಆದರೆ, ಶೇ.66ರಷ್ಟುಮುಸ್ಲಿಮರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆ ವಿವರಿಸಿದೆ.

ಮತ್ತೊಂದೆಡೆ ಶೇ.55.9ರಷ್ಟುಜನರು ಪೌರತ್ವ ಕಾಯ್ದೆ ತಿದ್ದುಪಡಿ ಹಾಗೂ ಎನ್‌ಆರ್‌ಸಿ ಎರಡೂ ಅಕ್ರಮ ವಲಸಿಗರ ವಿರುದ್ಧದ ಕ್ರಮಗಳಾಗಿವೆ ಎಂದು ತಿಳಿಸಿದ್ದಾರೆ.

ಡಿ.17ರಿಂದ 19ರವರೆಗೆ ದೇಶಾದ್ಯಂತ ಸುಮಾರು 3000 ನಾಗರಿಕರನ್ನು ಸಂದರ್ಶಿಸಿ ಈ ಸಮೀಕ್ಷೆ ನಡೆಸಲಾಗಿದೆ. ಅಸ್ಸಾಂ, ಈಶಾನ್ಯ ಭಾರತ ಹಾಗೂ ಮುಸಲ್ಮಾನ ಸಮುದಾಯದ ತಲಾ 500 ಜನರನ್ನು ಹೆಚ್ಚುವರಿಯಾಗಿ ಮಾತನಾಡಿಸಲಾಗಿದೆ ಎಂದು ಸಮೀಕ್ಷೆ ಹೇಳಿದೆ.

ಡಿಸೆಂಬರ್ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!