
ನವದೆಹಲಿ: ಭಾರತ ಮತ್ತು ಅಮೆರಿಕ ನಡುವೆ ವಿಶೇಷ ಬಾಂಧವ್ಯವಿದೆ ಎಂಬ ಟ್ರಂಪ್ ಅವರ ಹೇಳಿಕೆಗೆ ಪ್ರಧಾನಿ ಮೋದಿ ಕೂಡ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಅಮೆರಿಕ ಅಧ್ಯಕ್ಷರ ಭಾವನೆಯನ್ನು ಗೌರವಿಸುತ್ತೇನೆ, ಇದೇ ಭಾವನೆ ನನ್ನದೂ ಆಗಿದೆ ಎಂದು ಹೇಳಿದ್ದಾರೆ.
ಟ್ರಂಪ್ ಹೇಳಿಕೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಮೋದಿ ಅವರು, ಭಾರತ ಮತ್ತು ಅಮೆರಿಕದ ನಡುವೆ ಧನಾತ್ಮಕ ಮತ್ತು ದೂರಾಲೋಚನೆಯ ಸಮಗ್ರ ಮತ್ತು ಅಂತಾರಾಷ್ಟ್ರೀಯ ವ್ಯೂಹಾತ್ಮಕ ಸಹಭಾಗಿತ್ವ ಇದೆ. ಎರಡೂ ದೇಶಗಳ ನಡುವಿನ ಸಂಬಂಧ ಕುರಿತ ಟ್ರಂಪ್ ಅವರ ಧನಾತ್ಮಕ ಮೌಲ್ಯಮಾಪನವನ್ನು ಹಾಗೂ ಅವರ ಭಾವನೆಯನ್ನು ನಾನೂ ಗೌರವಿಸುತ್ತೇನೆ ಮತ್ತು ಇದೇ ರೀತಿಯ ಭಾವನೆ ನನ್ನದೂ ಕೂಡ ಆಗಿದೆ ಎಂದು ಮೋದಿ ಹೇಳಿದ್ದಾರೆ.
ಜಿಎಸ್ಟಿ ಸ್ತರ ಪರಿಷ್ಕರಣೆಗಾಗಿ ಮೋದಿಗೆ ಬಿಜೆಪಿ ಸನ್ಮಾನ
ನವದೆಹಲಿ: ಜಿಎಸ್ಟಿ ಸ್ತರವನ್ನು ನಾಲ್ಕರಿಂದ 2ಕ್ಕೆ ಪರಿಷ್ಕರಣೆ ಮತ್ತು ಬಹುತೇಕ ದಿನ ಬಳಕೆ ವಸ್ತುಗಳು ಮತ್ತು ಸೇವೆಗಳ ದರ ಇಳಿಕೆ ಮಾಡಿದ್ದಕ್ಕಾಗಿ ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಭಾನುವಾರ ಮತ್ತು ಸೋಮವಾರ ಬಿಜೆಪಿ 2 ದಿನದ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಇದರಲ್ಲಿ ಪಕ್ಷದ ಏಳಿಗೆ, ಉತ್ತಮ ಸಾಧನೆಗಾಗಿ ಪಾಠಗಳನ್ನು ಪಕ್ಷ ಹಮ್ಮಿಕೊಂಡಿದೆ. ಈ ವೇಳೆ ಬಿಜೆಪಿ ಸಂಸದರು ಮೋದಿ ಅವರನ್ನು ಸನ್ಮಾನಿಸಲಿದ್ದಾರೆ.
ತೆರಿಗೆ ಗದ್ದಲದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತ ಪ್ರಧಾನಿ ಮೋದಿ ನಡುವಿನ ಮಾತುಕತೆ ಬಹುತೇಕ ಸ್ಥಗಿತಗೊಂಡಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾ ತೈಲ ಖರೀದಿ ವಿಚಾರವಾಗಿ ಪದೇ ಪದೆ ಹೇಳಿಕೆ ನೀಡುತ್ತಿದ್ದರೂ ಪ್ರಧಾನಿ ಮೋದಿ ಅವರು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಜೂ.17ರ ಬಳಿಕ ಎರಡೂ ಮುಖಂಡರ ನಡುವಿನ ಮಾತುಕತೆ ಸಂಪೂರ್ಣ ಸ್ಥಗಿತಗೊಂಡಿತ್ತು. ಆ ಬಳಿಕ ಟ್ರಂಪ್ ಹೇಳಿಕೆಗೆ ಮೋದಿ ಪ್ರತಿಕ್ರಿಯೆ ನೀಡುತ್ತಿರುವುದು ಇದೇ ಮೊದಲ ಬಾರಿ ಆಗಿದೆ.
ಉಕ್ರೇನ್ ಸಂಘರ್ಷ ಅಂತ್ಯಕ್ಕೆ ಮ್ಯಾಕ್ರನ್ ಜತೆ ಮೋದಿ ಚರ್ಚೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಶನಿವಾರ ಫ್ರಾನ್ಸ್ ಅಧ್ಯಕ್ಷ ಎಮ್ಯಾನುವಲ್ ಮ್ಯಾಕ್ರನ್ ಜೊತೆ ದೂರವಾಣಿ ಸಂಭಾಷಣೆ ನಡೆಸಿ, ಉಕ್ರೇನ್ ಸಂಘರ್ಷವನ್ನು ಶೀಘ್ರವಾಗಿ ಕೊನೆಗೊಳಿಸಲು ನಡೆಯುತ್ತಿರುವ ಪ್ರಯತ್ನಗಳ ಕುರಿತು ಚರ್ಚಿಸಿದ್ದಾರೆ. ಜೊತೆಗೆ, ಶಾಂತಿಯನ್ನು ಶೀಘ್ರವಾಗಿ ಪುನಃಸ್ಥಾಪಿಸಲು ಭಾರತ ಬದ್ಧವಾಗಿರುವುದಾಗಿ ಪುನರುಚ್ಚರಿಸಿದ್ದಾರೆ. ಇತ್ತೀಚೆಗೆ ಸ್ವತಃ ಪುಟಿನ್ ಜೊತೆಗೂ ಮೋದಿ ಇದೇ ವಿಷಯ ಪ್ರಸ್ತಾಪಿಸಿದ್ದರು. ಪುಟಿನ್ ಭೇಟಿಗೂ ಮುನ್ನ ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ಮೋದಿಗೆ ಕರೆ ಮಾಡಿ ಯುದ್ಧ ಸ್ಥಗಿತಕ್ಕೆ ನೆರವಾಗುವಂತೆ ಕೋರಿದ್ದರು.
ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿರುವ ಪ್ರಧಾನಿ, ‘ಅಧ್ಯಕ್ಷ ಮ್ಯಾಕ್ರನ ಜೊತೆ ಅತ್ಯುತ್ತಮ ಮಾತುಕತೆ ನಡೆಯಿತು. ಉಕ್ರೇನ್‌ನಲ್ಲಿನ ಸಂಘರ್ಷವನ್ನು ಶೀಘ್ರವಾಗಿ ಕೊನೆಗೊಳಿಸುವ ಪ್ರಯತ್ನಗಳು ಸೇರಿದಂತೆ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡೆವು. ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರದಲ್ಲಿನ ಪ್ರಗತಿಯನ್ನು ಪರಿಶೀಲಿಸಿ, ಸಕಾರಾತ್ಮಕವಾಗಿ ನಿರ್ಣಯಿಸಿದ್ದೇವೆ’ ಎಂದಿದ್ದಾರೆ.ಇತ್ತೀಚೆಗೆ ಸಂಘರ್ಷ ಕೊನೆಗಾಣಿಸುವ ಪ್ರಯತ್ನವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿಯವರೊಂದಿಗೆ ಮಾತುಕತೆ ನಡೆಸುವ ವೇಳೆ, ಹಲವು ಯುರೋಪಿಯನ್ ನಾಯಕರ ಜೊತೆ ಮ್ಯಾಕ್ರನ್ ಸಹ ಉಪಸ್ಥಿತರಿದ್ದರು.
ವಿಶ್ವಸಂಸ್ಥೆ ಸಾಮಾನ್ಯ ಸಭೆಗೆ ಮೋದಿ ಗೈರು
ವಿಶ್ವಸಂಸ್ಥೆ: ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಗೈರಾಗಲು ನಿರ್ಧರಿಸಿದ್ದಾರೆ. ಅವರ ಬದಲು ವಿದೇಶಾಂಗ ಸಚಿವ ಎಸ್.ಜೈಶಂಕರ್ ಭಾರತವನ್ನು ಪ್ರತಿನಿಧಿಸಲಿದ್ದಾರೆ.ಈ ಮೊದಲಿನ ನಿರ್ಧಾರದ ಪ್ರಕಾರ ಮೋದಿ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಬೇಕಿತ್ತು. ಇದೇ ವೇಳೆ ಅವರು ಟ್ರಂಪ್‌ರನ್ನೂ ಭೇಟಿ ಮಾಡಿ ವ್ಯಾಪಾರ ಮಾತುಕತೆ ಬಿಕ್ಕಟ್ಟು ಇತ್ಯರ್ಥಕ್ಕೆ ಪ್ರಯತ್ನಿಸಲಿದ್ದಾರೆ ಎನ್ನಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಮೋದಿ- ಟ್ರಂಪ್ ಸಂಬಂಧ ಭಾರೀ ಹಳಸಿದ ಹಿನ್ನೆಲೆಯಲ್ಲಿ ಅಮೆರಿಕ ಪ್ರವಾಸವನ್ನು ಮೋದಿ ರದ್ದುಗೊಳಿಸಿದ್ದಾರೆ ಎನ್ನಲಾಗಿದೆ.ವಿಶ್ವಸಂಸ್ಥೆಯ 80ನೇ ಸಾಮಾನ್ಯ ಸಭೆ ಸೆ.9ರಿಂದ ಆರಂಭವಾಗಲಿದೆ. ವಿವಿಧ ದೇಶಗಳ ಮುಖ್ಯಸ್ಥರ ಉನ್ನತ ಮಟ್ಟದ ಚರ್ಚೆ ಸೆ.23-29ರವರೆಗೆ ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ