ಮನ್ ಕೀ ಬಾತ್‌ ಮಾಡಲು ಬಂದಿಲ್ಲ, ನಿಮ್ಮೊಂದಿಗೆ ಸಂಬಂಧ ಬೆಳೆಸಲು ಬಂದಿದ್ದೇನೆ: ಮೋದಿ ವಿರುದ್ಧ ರಾಹುಲ್‌ ವ್ಯಂಗ್ಯ

By BK Ashwin  |  First Published Jun 6, 2023, 4:06 PM IST

ಭಾರತದಲ್ಲಿ ಎರಡು ಸಿದ್ಧಾಂತಗಳ ನಡುವೆ ಹೋರಾಟ ನಡೆಯುತ್ತಿದೆ. ಒಂದೆಡೆ ಆರೆಸ್ಸೆಸ್ ಮತ್ತು ಹಿಂದುತ್ವದ ಸಿದ್ಧಾಂತಗಳು ಜನರನ್ನು ನಿರ್ಬಂಧಗಳಲ್ಲಿ ಬಂಧಿಸಲು ಪ್ರಯತ್ನಿಸುತ್ತಿದ್ದರೆ, ಮತ್ತೊಂದೆಡೆ ಸಮಗ್ರ ಅಭಿವೃದ್ಧಿಯನ್ನು ಪ್ರತಿಪಾದಿಸುವ ಗಾಂಧಿ ಸಿದ್ಧಾಂತವಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.


ನವದೆಹಲಿ (ಜೂನ್ 6, 2023): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೆಲ ದಿನಗಳಿಂದ ಅಮೆರಿಕ ಪ್ರವಾಸದಲ್ಲಿದ್ದು, ಅಲ್ಲಿ ಆಗಾಗ್ಗೆ ಪ್ರಧಾನಿ ಮೋದಿ, ಕೇಂದ್ರ ಸರ್ಕಾರ ಹಾಗೂ ಆರ್‌ಎಸ್‌ಎಸ್‌ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ನಾನಾ ವಿಷಯಗಳ ಬಗ್ಗೆ ಪ್ರಸ್ತಾಪಿಸಿ ಅವರು ಮೋದಿ ಸರ್ಕಾರದ ವಿರುದ್ಧ ಆರೋಪಿಸುತ್ತಲೇ ಇರುತ್ತಾರೆ.

ಇದೇ ರೀತಿ, ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಎರಡು ಸಿದ್ಧಾಂತಗಳ ನಡುವೆ ಹೋರಾಟ ನಡೆಯುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಒಂದೆಡೆ ಆರೆಸ್ಸೆಸ್ ಮತ್ತು ಹಿಂದುತ್ವದ ಸಿದ್ಧಾಂತಗಳು ಜನರನ್ನು ನಿರ್ಬಂಧಗಳಲ್ಲಿ ಬಂಧಿಸಲು ಪ್ರಯತ್ನಿಸುತ್ತಿದ್ದರೆ, ಮತ್ತೊಂದೆಡೆ ಸಮಗ್ರ ಅಭಿವೃದ್ಧಿಯನ್ನು ಪ್ರತಿಪಾದಿಸುವ ಗಾಂಧಿ ಸಿದ್ಧಾಂತವಿದೆ. ನಾವು ಮತ್ತು ನಮ್ಮ ಪಕ್ಷ ನಿರಂತರವಾಗಿ ಗಾಂಧಿ ಸಿದ್ಧಾಂತವನ್ನು ಪ್ರತಿಪಾದಿಸುತ್ತೇವೆ, ಆದರೆ ಬಿಜೆಪಿ ಅದನ್ನು ಇಷ್ಟಪಡುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ.

Tap to resize

Latest Videos

ಇದನ್ನು ಓದಿ: ಮೋದಿ ಹಿಂಬದಿ ಮಿರರ್‌ ಮಾತ್ರ ನೋಡೋದ್ರಿಂದ ಕಾರು ಅಪಘಾತವಾಗಿದೆ: ಒಡಿಶಾ ರೈಲು ದುರಂತದ ಬಗ್ಗೆ ರಾಹುಲ್‌ ಗಾಂಧಿ ವ್ಯಾಖ್ಯಾನ..

ಇದೇ ವೇಳೆ ಕರ್ನಾಟಕದಲ್ಲಿ ಬಿಜೆಪಿ ಸೋಲಿನ ಬಗ್ಗೆಯೂ ರಾಹುಲ್ ಗಾಂಧಿ ಪ್ರಸ್ತಾಪಿಸಿದ್ದು, ಇದೇ ರೀತಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಗೆ ಸೋಲಿನ ರುಚಿ ನೀಡಲಿದೆ ಎಂದೂ ಹೇಳಿದ್ದಾರೆ. ಅದೇ ಸಮಯದಲ್ಲಿ, ಮೋದಿಯ ಮನ್ ಕೀ ಬಾತ್ ಕಾರ್ಯಕ್ರಮವನ್ನು ಉಲ್ಲೇಖಿಸಿ ವ್ಯಂಗ್ಯವಾಡಿದ್ದಾರೆ.   

ಮನ್ ಕೀ ಬಾತ್‌ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೇನು?
ಪ್ರಧಾನಿಯವರ ಮಾಸಿಕ ರೇಡಿಯೋ ಭಾಷಣ 'ಮನ್ ಕೀ ಬಾತ್' ಅನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿಯನ್ನು ಗುರಿಯಾಗಿಸಿದ್ದಾರೆ. ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು, 'ನಾನು ಇಲ್ಲಿಗೆ ಮನ್ ಕೀ ಬಾತ್‌ ಮಾಡಲು ಬಂದಿಲ್ಲ, ಬದಲಿಗೆ ನಿಮ್ಮೊಂದಿಗೆ ಸಂಬಂಧ ಬೆಳೆಸಲು ಬಂದಿದ್ದೇನೆ. ಎರಡೂ ದೇಶಗಳ ಪ್ರಗತಿಗೆ ಕಾರಣವಾಗಬಹುದಾದ ಸಂಬಂಧ. ಎರಡೂ ದೇಶಗಳಿಗೆ ಹೊಸ ಎತ್ತರವನ್ನು ನೀಡಬಲ್ಲ ಸಂಬಂಧ. ನಾನು ನಿಮ್ಮ ಮಾತು ಕೇಳಲು ಬಂದಿದ್ದೇನೆಯೇ ಹೊರತು ನಿಮ್ಮ ಮನಸಿನ ಬಗ್ಗೆ ಮಾತನಾಡಲು ಅಲ್ಲ ಎಂದು ಕಾಂಗ್ರೆಸ್ ಮುಖಂಡ ಹೇಳಿದ್ದಾರೆ. 

ಇದನ್ನೂ ಓದಿ: ಪ್ರಧಾನಿ ಮೋದಿ ಜಗತ್ತಿನ ಎಲ್ಲೆಡೆ ಗೌರರ್ವಕ್ಕೆ ಅರ್ಹರು; ಆ ಬಗ್ಗೆ ಹೆಮ್ಮೆ ಇದೆ: ಕಾಂಗ್ರೆಸ್‌ ನಾಯಕನ ಅಚ್ಚರಿಯ ಹೇಳಿಕೆ

ಜತೆಗೆ, ನನ್ನ ಸಿದ್ಧಾಂತ ಏನು ಅಥವಾ ಯಾವುದೇ ವಿಷಯದ ಬಗ್ಗೆ ನಾನು ಏನು ಯೋಚಿಸುತ್ತೇನೆ ಎಂದು ಹೇಳಲು ನಾನು ಬಂದಿಲ್ಲ, ಬದಲಿಗೆ, ನಾನು ನಿಮ್ಮ ಮಾತನ್ನು ಕೇಳಲು ಬಂದಿದ್ದೇನೆ, ಇದರಿಂದ ಎರಡೂ ದೇಶಗಳ ನಡುವಿನ ಸಂಬಂಧಗಳು ಗಟ್ಟಿಯಾಗುತ್ತವೆ. ನಾನು ನಿಮ್ಮ ಮನಸ್ಸನ್ನು ತಿಳಿದುಕೊಳ್ಳಲು ಬಯಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದರು. 

ಅಲ್ಲದೆ, ನಾವು ಹೇಗೆ ಮುಂದುವರಿಯಬಹುದು ಅಥವಾ ನಮ್ಮ ದೇಶವನ್ನು ಹೇಗೆ ಮುಂದಕ್ಕೆ ಕೊಂಡೊಯ್ಯಬಹುದು ಎಂಬ ನಿಮ್ಮ ಅಭಿಪ್ರಾಯವನ್ನು ನಾನು ತಿಳಿಯಲು ಬಯಸುತ್ತೇನೆ ಎಂದೂ ಹೇಳಿದರು. ವಯನಾಡು ಮಾಜಿ ಸಂಸದ ರಾಹುಲ್ ಗಾಂಧಿ ಈ ವಿಷಯಗಳನ್ನು ಪ್ರಸ್ತಾಪಿಸಿದ ನಂತರ ಸಭೆಯಲ್ಲಿದ್ದ ಜನರು ಜೋರಾಗಿ ಚಪ್ಪಾಳೆ ತಟ್ಟಿದರು.

ಇದನ್ನೂ ಓದಿ: ಟ್ರಕ್‌ನಲ್ಲಿ ರಾಹುಲ್‌ ಗಾಂಧಿ ಪ್ರಯಾಣ: ಕಾಂಗ್ರೆಸ್‌ ಸರ್ಕಾರ ಬಂದ್ರೆ ಲಾರಿ ಚಾಲಕರ ಸಮಸ್ಯೆ ಬಗೆಹರಿಸುವ ಭರವಸೆ
 
ಬ್ರಿಟನ್‌ನಲ್ಲೂ ಮೋದಿ ಸರ್ಕಾರ ಟಾರ್ಗೆಟ್ ಮಾಡಿದ್ದ ರಾಹುಲ್‌
ಈ ಮೊದಲು ರಾಹುಲ್ ಗಾಂಧಿ ಅವರು ಬ್ರಿಟನ್ ಪ್ರವಾಸದ ಸಂದರ್ಭದಲ್ಲೂ ಮೋದಿ ನೇತೃತ್ವದ ಕೇಂದ್ರದ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದರು ಎಂಬುದನ್ನು ಗಮನಿಸಬೇಕು. ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದೂ ಈ ವೇಳೆ ಹೇಳಿದ್ದರು. ಇದಕ್ಕೆ ಬಿಜೆಪಿ ರಾಹುಲ್‌ ಗಾಂಧಿ ವಿರುದ್ಧ ತೀವ್ರ ಪ್ರತಿಕ್ರಿಯೆಯನ್ನು ನೀಡಿತ್ತು. ಹೊರ ದೇಶದಲ್ಲಿ ಅನಿಯಂತ್ರಿತ ಹೇಳಿಕೆ ನೀಡುವ ಮೂಲಕ ರಾಹುಲ್‌ ಗಾಂಧಿ ದೇಶಕ್ಕೆ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ಹೇಳಿತ್ತು.

ಇದನ್ನೂ ಓದಿ: ಕೊನೆಗೂ ರಾಹುಲ್‌ ಗಾಂಧಿಗೆ ಸಿಕ್ತು ಸಾಮಾನ್ಯ ಪಾಸ್‌ಪೋರ್ಟ್: ಇಂದು ಅಮೆರಿಕ ಪ್ರವಾಸಕ್ಕೆ 'ಕೈ' ನಾಯಕ

click me!