
ಚೆನ್ನೈ (ಮೇ.31): ಕನ್ನಡ ಭಾಷೆಯು ಹುಟ್ಟಿದ್ದು ತಮಿಳಿನಿಂದ ಎಂಬ ತಮ್ಮ ಇತ್ತೀಚಿನ ಹೇಳಿಕೆಗೆ ಕ್ಷಮೆ ಯಾಚಿಸಲು ಮತ್ತೆ ನಿರಾಕರಿಸಿರುವ ಹಿರಿಯ ತಮಿಳು ನಟ ಕಮಲ್ ಹಾಸನ್, ‘ನನ್ನ ಹೇಳಿಕೆ ತಪ್ಪಾಗಿದ್ದರೆ ಮಾತ್ರ ಕ್ಷಮೆ ಯಾಚಿಸುತ್ತೇನೆ. ಇಲ್ಲದಿದ್ದರೆ ಇಲ್ಲ’ ಎಂದಿದ್ದಾರೆ. ಇದಲ್ಲದೆ, ತಮ್ಮ ಚಿತ್ರಗಳ ಮೇಲೆ ನಿಷೇಧ ವಿಧಿಸುವ ಕರ್ನಾಟಕದಲ್ಲಿನ ಎಚ್ಚರಿಕೆಗಳನ್ನೂ ನಿರ್ಲಕ್ಷಿಸಿರುವ ಅವರು, ‘ಈ ಹಿಂದೆಯೂ ನನಗೆ ಬೆದರಿಕೆ ಹಾಕಲಾಗಿತ್ತು’ ಎಂದಿದ್ದಾರೆ. ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನನ್ನ ಹೇಳಿಕೆಯು ಒಂದು ವಿವಾದವೇ ಅಲ್ಲ. ಅದು ನನ್ನ ಜೀವನ ವಿಧಾನ. ಇದರಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು’ ಎಂದರು.
‘ನಾನು ತಪ್ಪಾಗಿದ್ದರೆ ಕ್ಷಮೆಯಾಚಿಸುತ್ತೇನೆ. ತಪ್ಪಲ್ಲ ಎಂದರೆ ಕ್ಷಮೆ ಯಾಚಿಸಲ್ಲ. ಇದು ನನ್ನ ಜೀವನಶೈಲಿ, ದಯವಿಟ್ಟು ಇದರಲ್ಲಿ ಮಧ್ಯಪ್ರವೇಶ ಬೇಡ’ ಎಂದರು. ‘ಭಾರತವು ಪ್ರಜಾಪ್ರಭುತ್ವ ರಾಷ್ಟ್ರ ಮತ್ತು ನಾನು ಕಾನೂನು ಮತ್ತು ನ್ಯಾಯವನ್ನು ನಂಬುತ್ತೇನೆ. ಕರ್ನಾಟಕ, ಆಂಧ್ರಪ್ರದೇಶ, ಕೇರಳವನ್ನು ನಾನು ಪ್ರೀತಿಸುತ್ತೇನೆ. ಅಜೆಂಡಾ ಹೊಂದಿರುವ ವ್ಯಕ್ತಿಗಳನ್ನು ಬಿಟ್ಟು ಆ ರಾಜ್ಯದ ಮಿಕ್ಕೆಲ್ಲ ಜನ ನನ್ನ ಪ್ರೇಮದ ಮೇಲೆ ಸಂದೇಹ ಪಡುವುದಿಲ್ಲ’ ಎಂದು ಅವರು ಹೇಳಿದರು.
‘ನಿಮ್ಮ ಕ್ಷಮೆಗೆ ಕರ್ನಾಟಕ ಸರ್ಕಾರ ಹಾಗೂ ಅಲ್ಲಿನ ಚಲನಚಿತ್ರ ವಾಣಿಜ್ಯ ಮಂಡಳಿ ಒತ್ತಾಯಿಸಿವೆ. ಇಲ್ಲದಿದ್ದರೆ ನಿಮ್ಮ ಥಗ್ ಲೈಫ್ ಚಿತ್ರದ ಮೇಲೆ ನಿಷೇಧ ಹೇರುವ ಎಚ್ಚರಿಕೆ ನೀಡಿವೆ’ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ‘ನನಗೆ ಈ ಹಿಂದೆಯೂ ಬೆದರಿಕೆ ಹಾಕಲಾಗಿತ್ತು’ ಎಂದು ಸರಳವಾಗಿ ಪ್ರತಿಕ್ರಿಯಿಸಿದರು.
ದಕ್ಷಿಣ ಭಾರತ ಕಲಾವಿದರ ಸಂಘ ಬೆಂಬಲ: ಈ ನಡುವೆ, ದ.ಭಾರತ ಕಲಾವಿದರ ಸಂಘ ಕಮಲ ಹಾಸನ್ ಅವರನ್ನು ಬೆಂಬಲಿಸಿದ್ದು, ‘ಕೆಲವರು ನಟನ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಖಂಡಿಸಿದೆ. ‘ಕನ್ನಡ ತಮಿಳಿನಿಂದ ಹುಟ್ಟಿದೆ’ ಎಂದು ನಟ-ರಾಜಕಾರಣಿ ಕಮಲ್ ಹಾಸನ್ ಇತ್ತೀಚೆಗೆ ತಮ್ಮ ಮುಂಬರುವ ಚಿತ್ರ ’ಥಗ್ ಲೈಫ್’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಹೇಳಿದ್ದರು. ಇದು ಕರ್ನಾಟಕದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ, ಕನ್ನಡ ಪರ ಗುಂಪುಗಳು, ಸಾಂಸ್ಕೃತಿಕ ಸಂಘಟನೆಗಳು ಮತ್ತು ಹಲವಾರು ರಾಜಕೀಯ ನಾಯಕರು ನಟನನ್ನು ಗುರಿಯಾಗಿಸಿಕೊಂಡು ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.
ಕಮಲ್ ಹಾಸನ್ ಅವರು ಸಿನಿಮಾ ಪ್ರಚಾರಕ್ಕಾಗಿ ಕನ್ನಡಕ್ಕೆ ಅವಮಾನವಾಗುವಂತೆ ಮಾತನಾಡಿದ್ದಾರೆ. ಕಮಲ್ ಚಲಾವಣೆಯಲ್ಲಿಲ್ಲದ ನಾಣ್ಯ. ಹೀಗಾಗಿ ಅವರಿಗೆ ಬೆಲೆ ಕೊಡುವ ಅಗತ್ಯವಿಲ್ಲ.
- ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ