
ನಮ್ಮ ದೇಶದಲ್ಲಿ ಯಾರೇ ಮದುವೆ ಮಾಡಿಕೊಳ್ಳುವ ಮುನ್ನ ಹುಡುಗಿ ನೋಡುವ ಶಾಸ್ತ್ರವನ್ನು ಮಾಡಿದ ನಂತರ ಒಪ್ಪಿಗೆಯಾದರೆ ಮಾತ್ರ ಮದುವೆ ಮಾಡಲಾಗುತ್ತದೆ. ಆದರೆ, ಇಲ್ಲೊಬ್ಬ ವ್ಯಕ್ತಿ ತಾನೇ ಒಪ್ಪಿಕೊಂಡು ಮದುವೆ ಮಾಡಿಕೊಂಡ ಹೆಂಡತಿಯ ಕಣ್ಣುಗಳು ಇಷ್ಟವಾಗುತ್ತಿಲ್ಲ ಎಂದು ಕ್ಯಾತೆ ತೆಗೆದಿದ್ದಾನೆ. ನಂತರ, ಆತ ಹೆಂಡತಿಗೆ ಮಾಡಬಾರದ ಕೆಲಸ ಮಾಡಿ ಇದೀಗ ಕಂಬಿ ಎಣಿಸುತ್ತಿದ್ದಾನೆ.
ಈ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ನಡೆದಿದೆ. ಪಾಲಿಯ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು 7 ವರ್ಷಗಳ ಹಳೆಯ ಕೊಲೆ ಪ್ರಕರಣದಲ್ಲಿ ತೀರ್ಪು ನೀಡಿದ್ದು, ಆರೋಪಿ ಸುನಿಲ್ ತನ್ನ ಪತ್ನಿ ಗಂಗಾಳನ್ನು ಕೊಂದಿರುವ ತಪ್ಪಿತಸ್ಥ ಎಂದು ತೀರ್ಪು ನೀಡಿದೆ. ನ್ಯಾಯಾಧೀಶ ಶರದ್ ತನ್ವರ್ ಸುನಿಲ್‌ಗೆ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಈ ತೀರ್ಪನ್ನು ಜನವರಿ 16, 2025 ರಂದು ನೀಡಲಾಯಿತು. ನಿನ್ನೆ ತಡರಾತ್ರಿ ಎಲ್ಲಾ ಕ್ರಮಗಳ ನಂತರ ಅವರನ್ನು ಜೈಲಿಗೆ ಕಳುಹಿಸಲಾಗಿದೆ. ಆರೋಪಿ ತನ್ನ ಹೆಂಡತಿಯ ಕಣ್ಣುಗಳು ಇಷ್ಟವಿಲ್ಲದ ಕಾರಣ ಅವಳನ್ನು ಕೊಂದಿದ್ದಾನೆ ಎಂಬ ಸತ್ಯಾಂಶ ಇಡೀ ಸಮಾಜವನ್ನೇ ಬೆಚ್ಚಿ ಬೀಳಿಸಿದೆ.
2018 ರಂದು ಮದುವೆಯಾಗಿತ್ತು: ಈ ದುರ್ಘಟನೆ 2018ರ ಸೆಪ್ಟೆಂಬರ್ 3 ರಂದು ನಡೆದಿದೆ. ರೋಹತ್ ಪೊಲೀಸ್ ಠಾಣೆಯಲ್ಲಿ ಗಂಗಾಳ ಚಿಕ್ಕಪ್ಪ ಗೋಪಾಲಾಲ್ ದೂರು ದಾಖಲಿಸಿದ್ದರು. ವರದಿಯ ಪ್ರಕಾರ, ಗಂಗಾಳ ಮದುವೆ 2018ರ ಏಪ್ರಿಲ್ 29 ರಂದು ಧುಂಧನಿ ಗ್ರಾಮದ ಸುನಿಲ್ ಜೊತೆ ನಡೆದಿತ್ತು. ಗಂಗಾ ಒಂದು ಕಣ್ಣಿನಿಂದ ಸ್ವಲ್ಪ ಓರೆಯಾಗಿ ನೋಡುತ್ತಿದ್ದಳು. ಈ ಬಗ್ಗೆ ಮದುವೆಗೆ ಮೊದಲು ಸುನಿಲ್ ಮತ್ತು ಅವರ ಕುಟುಂಬಕ್ಕೆ ತಿಳಿಸಲಾಗಿತ್ತು. ಅದರ ನಂತರವೂ ಸುನಿಲ್ ಮದುವೆಗೆ ಒಪ್ಪಿಕೊಂಡಿದ್ದನು. ಹಾಗಾಗಿ ಎರಡೂ ಕುಟುಂಬಗಳು ಸಂತೋಷವಾಗಿದ್ದವು. ಆದರೆ, ಮದುವೆಯಾದ ಕೆಲವು ತಿಂಗಳ ನಂತರ ಸುನಿಲ್ ಗಂಗಾಳನ್ನು ಅವಮಾನಿಸಲು ಪ್ರಾರಂಭಿಸಿದನು. ಜೊತೆಗೆ, ಅವಳ ದೇಹ ನನಗೆ ಇಷ್ಟವಾಗಿದೆ, ಆದರೆ ಆಕೆಯ ಕಣ್ಣುಗಳು ತನಗೆ ಇಷ್ಟವಿಲ್ಲ ಎಂದು ಹೇಳಿದನು. ಜಗಳ ಹೆಚ್ಚಾದಾಗ ಸುನಿಲ್ ಒಂದು ದಿನ ಗಂಗಾಳಿಗೆ ಊಟದಲ್ಲಿ ನಿದ್ರೆ ಮಾತ್ರೆಗಳನ್ನು ಹಾಕಿ ನುಂಗಿಸಿದ್ದಾನೆ. ನಂತರ, ಅವಳು ಪ್ರಜ್ಞಾಹೀನಳಾದಾಗ ಅವಳ ಕತ್ತು ಹಿಸುಕಿ ಕೊಂದಿದ್ದಾನೆ.
ಇದನ್ನೂ ಓದಿ: ದೇವದುರ್ಗ: ಮೂತ್ರ ವಿಸರ್ಜನೆಗೆ ಹೋಗಿದ್ದ ಬಾಲಕಿಯನ್ನ ಹಿಂಬಾಲಿಸಿ ಬಲತ್ಕಾರಕ್ಕೆ ಯತ್ನಿಸಿದ ಕಾಮುಕ!
ಅಂತ್ಯಕ್ರಿಯೆಯ ಸಮಯದಲ್ಲಿ ರಹಸ್ಯ ಬಯಲು: ಸುನೀಲ್ ತನ್ನ ಹೆಂಡತಿಯನ್ನು ಕೊಲೆ ಮಾಡಿದ ನಂತರ ಕೊಲೆಯನ್ನು ಆತ್ಮಹತ್ಯೆ ಎಂದು ತೋರಿಸಲು ಮುಂದಾಗಿದ್ದಾನೆ. ಇದಕ್ಕಾಗಿ ಸುನೀಲ್, ಗಂಗಾಳ ಕುಟುಂಬಕ್ಕೆ ಫೋನ್ ಮಾಡಿ ಗಂಗಾಳಿಗೆ ಹಾವು ಕಚ್ಚಿದೆ ಎಂದು ಹೇಳಿದ್ದಾನೆ. ಗಂಗಾಳ ಸಂಬಂಧಿಕರು ಅತ್ತೆ ಮನೆಗೆ ಬಂದಾಗ, ಅಂತ್ಯಕ್ರಿಯೆಯ ತಯಾರಿ ನಡೆಯುತ್ತಿತ್ತು. ಗಂಗಾಳ ದೇಹದ ಮೇಲೆ ಕತ್ತು ಹಿಸುಕಿದ ಗುರುತುಗಳನ್ನು ನೋಡಿ ಸಂಬಂಧಿಕರಿಗೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದರು.
ಹೆಂಡತಿ ಕಣ್ಣುಗಳ ಕಾರಣದಿಂದ ಜೈಲುವಾಸ: ಇನ್ನು ಸುನೀಲ್‌ನಲ್ಲಿ ಪೊಲೀಸರು ನಿರಂತರ ವಿಚಾರಣೆ ನಡೆಸಿ ತನಿಖೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದನ್ನು ಬಾಯಿ ಬಿಟ್ಟಿದ್ದಾನೆ. ಜೊತೆಗೆ, ಗಂಗಾಳ ಮೃತದೇಹದ ಮೇಲಿನ ಗುರುತುಗಳನ್ನು ಕೂಡ ಪತ್ತೆ ಮಾಡಿ, ಸಾಕ್ಷಿಗಳ ಹೇಳಿಕೆಗಳನ್ನೂ ಪಡೆದಿದ್ದಾರೆ. ಈ ಆಧಾರದ ಮೇಲೆ ಆರೋಪಿ ಸುನಿಲ್‌ನನ್ನು ಕೊಲೆಯ ತಪ್ಪಿತಸ್ಥನೆಂದು ಸಾಬೀತು ಮಾಡಲಾಗಿದೆ. ಪಾಲಿಯ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಶರದ್ ತನ್ವರ್ ಅವರು ಆರೋಪಿ ಸುನಿಲ್‌ಗೆ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಶಿಕ್ಷೆ ಪಡೆದ ನಂತರವೂ ಸುನಿಲ್ ತನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಹೇಳಿಕೊಂಡಿದ್ದಾನೆ. ಇದಕ್ಕೆ ಜನರು ಈತನಿಗೆ ಜೀವನ ಪೂರ್ತಿ ಜೈಲಿನಲ್ಲಿಯೇ ಇಡಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ತನ್ನದೇ ವಿಡಿಯೋ, ಫೋಟೋ ನೋಡಲು ಕೋರ್ಟ್ ಅನುಮತಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ