
ಭೂತ, ಪ್ರೇತ, ಆತ್ಮ, ಪಿಶಾಚಿ, ದೆವ್ವ... ಇವೆಲ್ಲಾ ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ ಎನ್ನುವ ಬಗ್ಗೆ ಚರ್ಚೆಗಳು ಬಹಳ ಹಿಂದಿನಿಂದಲೂ ನಡೆಯುತ್ತಲೇ ಇವೆ. ಅದು ಅವರವರ ನಂಬಿಕೆಗೆ ಬಿಟ್ಟಿರುವ ವಿಷಯ. ಕೆಲವರು ಇವೆಲ್ಲಾ ಇವೆ ಎಂದರೆ, ಮತ್ತೆ ಕೆಲವರು ಇದು ಮಾನಸಿಕ ದೌರ್ಬಲ್ಯ ಎನ್ನುತ್ತಾರೆ, ಮತ್ತೆ ಕೆಲವರು ನಾವು ನೋಡಿದ್ದೇವೆ ಎಂದರೆ, ಇನ್ನು ಕೆಲವರು ತಮಗೆ ಅನುಭವ ಆಗಿದೆ ಎನ್ನುತ್ತಾರೆ. ಆದರೆ, ಇಲ್ಲೊಂದು ಘಟನೆ ನಡೆದಿದ್ದು, ಇದು ಮಾತ್ರ ಬೆಚ್ಚಿ ಬೀಳುವಂತಿದೆ. ಹೆಣ್ಣು ದೆವ್ವದ ಕಾಟದಿಂದ ಹಲವಾರು ದಶಕಗಳವರೆಗೆ ರೈಲು ಓಡಾಟವನ್ನೇ ಸಂಪೂರ್ಣ ಬಂದ್ ಮಾಡಿರುವ ಸ್ಟೋರಿ ಇದು.
ಅಂದಹಾಗೆ, ಇದು ಮಮತಾ ಬ್ಯಾನರ್ಜಿ ಉರ್ಫ್ ದೀದೀ ನಾಡು ಎಂದೇ ಫೇಮಸ್ ಆಗಿರುವ ಪಶ್ಚಿಮ ಬಂಗಾಳದ ಸ್ಟೋರಿ. 1965ರಲ್ಲಿ ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿರುವ ಬೇಗುಂಕೋಡರ್ ಎಂಬ ಪಟ್ಟಣದಲ್ಲಿ ರೈಲ್ವೆ ನಿಲ್ದಾಣ ಉದ್ಘಾಟಿಸಲಾಗಿತ್ತು. ಆದರೆ ಎರಡೇ ವರ್ಷದಲ್ಲಿಯೇ ಆ ನಿಲ್ದಾಣವನ್ನು ಸ್ಥಗಿತಗೊಳಿಸಲಾಯಿತು. ಅರ್ಥಾತ್ ಆ ನಿಲ್ದಾಣದಿಂದ ಮಾತ್ರವಲ್ಲದೇ ಆ ಮಾರ್ಗದಿಂದಲೇ ಯಾವುದೇ ರೈಲು ಸಂಚಾರ ನಡೆಯಲಿಲ್ಲ. ಇದಕ್ಕೆ ಕಾರಣ ಹಳಿಗಳ ಮೇಲೆ ಹೆಣ್ಣು ದೆವ್ವದ ಕಾಟ ಎನ್ನುವ ಕಾರಣಕ್ಕೆ. ರೈಲಿನ ಹಳಿಯ ಮೇಲೆ ಮಹಿಳೆಯೊಬ್ಬರಳು ಆ*ತ್ಮಹತ್ಯೆ ಮಾಡಿಕೊಂಡಿದ್ದಳಂತೆ. ಅಲ್ಲಿಂದ ಆಕೆಯ ಕಾಟ ಎಂದು ಹುಟ್ಟಿಕೊಂಡಿತ್ತು ಸುದ್ದಿ. ಆದರೆ ಅಲ್ಲಿ ಓಡಾಟ ಮಾಡುವವರು, ರೈಲು ಚಾಲಕರು ಈ ದೆವ್ವವನ್ನು ನೋಡಿರುವುದಾಗಿ ಹೇಳಿ, ರೈಲು ಚಲಾಯಿಸಲು ಭಯಪಟ್ಟುಕೊಳ್ಳುತ್ತಿದ್ದರು. ಮಾತ್ರವಲ್ಲದೇ ಆ ನಿಲ್ದಾಣದಲ್ಲಿ ಕರ್ತವ್ಯಕ್ಕೆ ಹಾಜರಾಗಲು ಅದರಲ್ಲಿಯೂ ಹೆಚ್ಚಾಗಿ ನೈಟ್ ಡ್ಯೂಟಿ ಮಾಡಲು ಸಿಬ್ಬಂದಿ ಭಯ ಪಡತೊಡಗಿದರು. ತಮಗೂ ದೆವ್ವದ ಅನುಭವ ಆಗಿದೆ ಎನ್ನುವುದು ಅವರ ಮಾತು.
ಇದು ಎಲ್ಲಿಯವರೆಗೆ ಮುಂದುವರೆಯಿತು ಎಂದರೆ 2009ರವರೆಗೂ ಅಲ್ಲಿ ಯಾವುದೇ ರೈಲು ಸಂಚರಿಸಲಿಲ್ಲ. ರೈಲು ನಿಲ್ದಾನವಂತೂ ಸಂಪೂರ್ಣ ಪಾಳು ಬಿದ್ದಿತು. ಆ ಮಾರ್ಗದಲ್ಲಿ ಓಡಾಟಕ್ಕೆ ಎಲ್ಲರೂ ಹೆದರಿಕೊಳ್ಳುತ್ತಿದ್ದರು. ರಾತ್ರಿ ಮಾತ್ರವಲ್ಲದೇ ಹಗಲಿನಲ್ಲಿಯೂ ಓಡಾಡುತ್ತಿರಲಿಲ್ಲ. ಆ ಭಯ ಎಲ್ಲಿಯವರೆಗೆ ಹುಟ್ಟಿತು ಎಂದರೆ, ಬೇಗುಂಕೋಡರ್ ಹುಡುಗರಿಗೆ ಮದುವೆ ಆಗುವುದೇ ಕಷ್ಟವಾಯಿತು. ಯಾರೂ ಹೆಣ್ಣುಕೊಡಲು ಮುಂದೆ ಬರಲಿಲ್ಲ. ಅವರು ಮದುವೆಯಾದರೆ ದೆವ್ವ ಮೆಟ್ಟಿಕೊಳ್ಳುತ್ತದೆ ಎನ್ನುವ ಭಯ ಕಾಡತೊಡಗಿತು.
ಕೊನೆಗೆ ಅಲ್ಲಿ ಬದಲಾವಣೆ ಶುರುವಾಯಿತು. 2009ರಿಂದ ರೈಲುಗಳನ್ನು ಪುನಃ ಆರಂಭಿಸಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಯಾವುದೇ ದೆವ್ವದ ಕಾಟವಿಲ್ಲ. ಎಕ್ಸ್‌ಪ್ರೆಸ್ ರೈಲುಗಳು ಸೇರಿದಂತೆ ಸುಮಾರು ರೈಲುಗಳು ಇಲ್ಲಿ ನಿಲ್ಲುತ್ತವೆ. ಕೊನೆಯ ರೈಲು ರಾತ್ರಿ 11 ಗಂಟೆ ಸುಮಾರಿಗೆ ನಿಲ್ಲುತ್ತದೆ ಮತ್ತು ಗ್ರಾಮಸ್ಥರು ಆ ಸಮಯಕ್ಕೂ ಇಳಿದು ತಮ್ಮ ಊರುಗಳಿಗೆ ಹೋಗುತ್ತಾರೆ. ಅವರಿಗೆ ದೆವ್ವ ಕಾಣಿಸಿಕೊಳ್ಳುತ್ತಿಲ್ಲ! ಜನರಲ್ಲಿ ತುಂಬಿರುವ ದೆವ್ವಗಳ ಭಯವನ್ನು ಕಿತ್ತುಹಾಕಿ ಅಲ್ಲಿ ರೈಲುಗಳನ್ನು ಆರಂಭಿಸುವಂತೆ 2006ರಲ್ಲಿ ಕೆಲವು ಸಂಘ ಸಂಸ್ಥೆಗಳು ಆಗಿನ ರೈಲ್ವೆ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಬಸುದೇಬ್ ಆಚಾರ್ಯ ಅವರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದರು. 2009 ರಲ್ಲಿ ಈಗ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ ಅವರು ರೈಲ್ವೆ ಇಲಾಖೆಯ ಉಸ್ತುವಾರಿಯನ್ನೂ ವಹಿಸಿಕೊಂಡ ಸಂದರ್ಭದಲ್ಲಿ ಮತ್ತೊಮ್ಮೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಬಳಿಕ, ರೈಲನ್ನು ಆರಂಭಿಸಲು ಒತ್ತಾಯಗಳು ಕೇಳಿಬರುತ್ತಿದ್ದಂತೆಯೇ ಆರಂಭದಲ್ಲಿ ಹಗಲಿನಲ್ಲಿ ಮಾತ್ರ ರೈಲುಗಳನ್ನು ನಿಲ್ಲಿಸುವ ಕಾರ್ಯ ಆರಂಭವಾಯಿತು. ಆಗಲೂ ಎಲ್ಲರೂ ಹೆದರಿಕೊಳ್ಳುತ್ತಿದ್ದರಿಂದ ಜನಸಂಖ್ಯೆ ತುಂಬಾ ಕಡಿಮೆಯೇ ಆದರೂ, ರೈಲನ್ನು ನಿಲ್ಲಿಸಬಾರದು ಎನ್ನುವ ಕಾರಣಕ್ಕೆ ಇದೇ ಸಂಘ ಸಂಸ್ಥೆಗಳು ಜನರಲ್ಲಿ ಈ ಭಯವನ್ನು ತೊಡೆದುಹಾಕಲು ಪ್ರಯತ್ನ ಪಟ್ಟರು. ಪುರುಲಿಯಾದ ದೇಬೆನ್ ಮಹಾತಾ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯೆಯಾಗಿರುವ ನಯನ್ ಮುಖರ್ಜಿ ನೇತೃತ್ವದಲ್ಲಿ ಈ ಭಯ ಕಿತ್ತುಹಾಕುವ ಕಾರ್ಯ ನಡೆಯಿತು.
ದೆವ್ವಗಳಿವೆ ಎಂದು ಸಾಬೀತುಪಡಿಸುವ ಯಾರಿಗಾದರೂ 5 ಲಕ್ಷ ರೂಪಾಯಿ ನೀಡುವುದಾಗಿ ಪೋಸ್ಟರ್‌ಗಳನ್ನು ಅಂಟಿಸಿ ಕರಪತ್ರ ವಿತರಿಸಲಾಯಿತು. ಡಿಸೆಂಬರ್ 2007 ರಲ್ಲಿ, ಅಮಾವಾಸ್ಯೆಯ ರಾತ್ರಿ, ನಯನ್ ಮುಖರ್ಜಿ ನೇತೃತ್ವದ ಸ್ವಯಂಸೇವಕರ ತಂಡವು ನಿಲ್ದಾಣದಲ್ಲಿ ಕೆಲವು ಗಂಟೆಗಳ ಕಾಲ ಕಳೆದರು. ಪೊಲೀಸರು ಮತ್ತು ರೈಲ್ವೆ ಭದ್ರತಾ ಪಡೆ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿತ್ತು. ಸವಾಲು ಹಾಕಿದಾಗ ಕೆಲವು ಪುರುಷರು ಕೆಲವು ಮದ್ಯದ ಬಾಟಲಿಗಳು ಮತ್ತು ಕಾರ್ಡ್‌ಗಳನ್ನು ಬಿಟ್ಟು ಓಡಿಹೋಗುವುದನ್ನು ಹೊರತುಪಡಿಸಿ ತಂಡಕ್ಕೆ ಏನೂ ಸಿಗಲಿಲ್ಲ. ಹಣದ ಆಸೆಗೆ ಕೆಲವರು ದೆವ್ವದ ವೇಷ ಧರಿಸಿ ಬಂದು ಅದರ ಶೂಟಿಂಗ್ ಮಾಡಲು ಹೋಗಿ ಸಿಕ್ಕಿಬಿದ್ದರು. ಕೊನೆಗೆ ಕೆಲವು ವರ್ಷಗಳ ಪ್ರಯತ್ನವಾಗಿ ರೈಲ್ವೆ ನಿಲ್ದಾಣ ದೆವ್ವಮುಕ್ತಗೊಂಡಿದೆ. ದೇಶದಲ್ಲಿನ ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯಾಚರಣೆ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಈ ನಿಲ್ದಾಣಕ್ಕೂ ವಿವಿಧ ಸೌಕರ್ಯ ಒದಗಿಸಲಾಗಿದೆ. ನಿಲ್ದಾಣದಲ್ಲಿ ದೀಪಗಳನ್ನು ಅಳವಡಿಸಲಾಗಿದೆ. ಪಾದಚಾರಿ ಸೇತುವೆಯನ್ನು ನಿರ್ಮಿಸಲಾಗಿದೆ. ಜನರು ಈಗ ಯಾವುದೇ ಭಯವಿಲ್ಲದೇ ರಾತ್ರಿ ಪ್ರಯಾಣವನ್ನೂ ಮಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ