
ಪಿಟಿಐ ಆದಂಪುರ (ಮೇ.14): ತನ್ನ ವಿರುದ್ಧದ ‘ಆಪರೇಷನ್ ಸಿಂದೂರ’ಕ್ಕೆ ಪ್ರತಿಯಾಗಿ ಭಾರತದ ಆದಂಪುರ ವಾಯುನೆಲೆ ನಾಶ ಮಾಡಿದ್ದೇವೆ, ಭಾರತದ ಮಿಗ್-29 ಹಾಗೂ ಎಸ್ 400 ವಾಯುರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದ್ದೇವೆ, ಭಾರತದ 60 ಯೋಧರ ಸಾಯಿಸಿದ್ದೇವೆ ಎಂದು ಸುಳ್ಳಿನ ಸರಮಾಲೆ ಪೋಣಿಸಿದ್ದ ಪಾಕಿಸ್ತಾನಕ್ಕೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಕನ್ನಡಿ ಹಿಡಿದಿದ್ದಾರೆ. ಈ ಮೂಲಕ ಜಾಗತಿಕ ಸಮುದಾಯದ ಮುಂದೆ ಮತ್ತೊಮ್ಮೆ ಪಾಕಿಸ್ತಾನದ ಬಣ್ಣ ಬಯಲು ಮಾಡಿದ್ದಾರೆ.
ಮಂಗಳವಾರ ಬೆಳ್ಗಂಬೆಳಗ್ಗೆ ಪಾಕಿಸ್ತಾನದ ಗಡಿಯಲ್ಲಿರುವ ಪಂಜಾಬ್‌ನ ಆದಂಪುರ ವಾಯುನೆಲೆಗೆ ಭೇಟಿ ನೀಡಿದ ಪ್ರಧಾನಿ, ಅಲ್ಲಿ ವಾಯುಪಡೆ ಯೋಧರೊಂದಿಗೆ ಸಂವಾದ ನಡೆಸಿದರು. ಬಳಿಕ ವಾಯುನೆಲೆಯೊಳಗೆ ಮಿಗ್- 29 ವಿಮಾನ, ಎಸ್ 400 ಏರ್‌ಡಿಫೆನ್ಸ್ ಸಿಸ್ಟಮ್ ಮುಂದೆ ನಿಂತು ಯೋಧರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಮ್ಮೆಲ್ಲಾ ಶಸ್ತ್ರಾಸ್ತ್ರಗಳು, ಆಯಕಟ್ಟಿನ ಪ್ರದೇಶಗಳು ಸುರಕ್ಷಿತವಾಗಿವೆ’ ಎಂಬ ಸಂದೇಶವನ್ನು ಪಾಕಿಸ್ತಾನ ಮತ್ತು ಜಾಗತಿಕ ಸಮುದಾಯಕ್ಕೆ ರವಾನಿಸಿದರು. ಜೊತೆಗೆ ದೇಶವನ್ನು ಕಾಯಲು ಎಂತಹ ಬಲಾಢ್ಯ ಅಸ್ತ್ರಗಳು ನಮ್ಮ ಬಳಿ ಇವೆ ಎಂಬ ಎಚ್ಚರಿಕೆಯನ್ನು ಪಾಕಿಸ್ತಾನಕ್ಕೆ ನೀಡಿದರು.
ಭಾರತದ ದಾಳಿಗೆ ಪ್ರತಿದಾಳಿ ನಡೆಸುವ ವಿಫಲ ಯತ್ನ ನಡೆಸಿದ್ದ ಪಾಕಿಸ್ತಾನ, ನಮ್ಮ ಸೇನೆ ‘ಆದಂಪುರದಲ್ಲಿರುವ ಎಸ್-400, ರನ್‌ವೇ, ರಡಾರ್, ಯುದ್ಧವಿಮಾನಗಳನ್ನು ನಾಶ ಮಾಡಿ 60 ಜನರನ್ನು ಕೊಂದಿದ್ದೇವೆ. ಅಲ್ಲಿ ಇನ್ನು ಕೆಲ ವರ್ಷಗಳ ಕಾಲ ಏನೂ ಮಾಡಲಾಗದು’ ಎಂದು ಹೇಳಿಕೊಂಡು, ನಕಲಿ ಚಿತ್ರಗಳನ್ನು ತೋರಿಸಿತ್ತು. ಅದರ ಬೆನ್ನಲ್ಲೇ, ಆದಂಪುರ ವಾಯುನೆಲೆ ಹಾಗೂ ಮೂಲಸೌಕರ್ಯಕ್ಕೆ ಯಾವುದೇ ಹಾನಿಯಾಗಿಲ್ಲ ಎಂಬುದನ್ನು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮೇ 10ರಂದು ಪತ್ರಿಕಾಗೋಷ್ಠಿಯಲ್ಲಿ ಸಾಕ್ಷಿ ಸಮೇತ ಸಾಬೀತುಪಡಿಸಿದ್ದರು. ಈಗ ಮೋದಿ, ದಾಳಿ ನಡೆಸಲಾಗಿದೆ ಎನ್ನಲಾಗಿದ್ದ ಜಾಗದಲ್ಲೇ ನಿಂತು ಪಾಕ್ ಸುಳ್ಳನ್ನು ಬಯಲಿಗೆಳೆದಿದ್ದಾರೆ.
ಇದನ್ನೂ ಓದಿ: ಕರ್ನಲ್ Sophia Qureshi 'ಉಗ್ರರ ಸಹೋದರಿ' ಎಂದ ಮಧ್ಯಪ್ರದೇಶ ಬಿಜೆಪಿ ಸಚಿವ! ವಿಡಿಯೋ ಇಲ್ಲಿದೆ
ಅದಂಪುರದ ಮಹತ್ವ:
ಆದಂಪುರ, ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿದ್ದು ಪಂಜಾಬ್‌ನಲ್ಲಿದೆ. ಇದು ಭಾರತದ 2ನೇ ಅತಿದೊಡ್ಡ ವಾಯುನೆಲೆ. 1969 ಮತ್ತು 1971ರಲ್ಲಿ ಪಾಕಿಸ್ತಾನದ ಮೇಲೆ ಭಾರತ ನಡೆಸಿದ ಯುದ್ಧದಲ್ಲಿ ಈ ವಾಯುನೆಲೆ ಪ್ರಮುಖ ಪಾತ್ರವಹಿಸಿತ್ತು. ಕಳೆದ ವಾರ ಪಾಕ್ ಜೊತೆಗಿನ ಉದ್ವಿಗ್ನ ಸನ್ನಿವೇಶದಲ್ಲೂ ಈ ನೆಲೆ ಮಹತ್ವದ ಪಾತ್ರ ವಹಿಸಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ನೀಡುವ ಮತ್ತು ಅದರ ಸುಳ್ಳನ್ನು ಬಯಲು ಮಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಇಲ್ಲಿಗೆ ಭೇಟಿ ನೀಡಿದ್ದರು ಎಂದು ವಿಶ್ಲೇಷಿಸಲಾಗಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ