
ಜಬಲ್ಪುರ: ಬೀದಿಗಳಲ್ಲಿ ಎತ್ತುಗಳು, ನಾಯಿಗಳು, ಗೂಳಿಗಳು ಪರಸ್ಪರ ಗುದ್ದಾಡುತ್ತಾ ಫೈಟ್ ಮಾಡುವುದನ್ನು ನೀವು ನೋಡಿರಬಹುದು. ಆದರೆ ಕುದುರೆಗಳ ಫೈಟ್ ನೋಡಿದ್ದೀರಾ? ಇಲ್ಲೊಂದು ಕಡೆ ಎರಡು ಕುದುರೆಗಳು ರಸ್ತೆಯಲ್ಲೇ ಪರಸ್ಪರ ಗುದ್ದಾಡಿಕೊಂಡಿದ್ದು, ಈ ವೇಳೆ ನೂಕಾಟ ತಳ್ಳಾಟದಲ್ಲಿ ಕುದುರೆಯೊಂದು ರಸ್ತೆಯಲ್ಲಿ ನಿಲ್ಲಿಸಿದ್ದ ಆಟೋದೊಳಗೆ ನುಗ್ಗಿ ವಾಪಸ್ ಬರಲಾಗದೇ ಪಾಡುಪಟ್ಟ ಅಪರೂಪದ ಘಟನೆ ನಡೆದಿದೆ.
ಮಧ್ಯಪ್ರದೇಶದ ಜಬಲ್ಪುರದಲ್ಲಿ ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ನೀಲಿ ಬಣ್ಣದ ಪ್ರಯಾಣಿಕ ಆಟೋದ ಒಳಗೆ ಚಾಲಕನ ಸೀಟ್‌ಗೆ ಏರುವ ಒಂದು ಬದಿಯಿಂದ ಕುದುರೆಯೊಂದು ನುಗ್ಗಿ ಹೋಗಿದ್ದು, ಅದಕ್ಕೆ ವಾಪಸ್ ಬರುವುದಕ್ಕೆ ಸಾಧ್ಯವಾಗಿಲ್ಲ, ಅಲ್ಲಿದ್ದ ಅನೇಕರು ಕುದುರೆಯನ್ನು ಆಟೋದಿಂದ ಬಿಡಿಸುವುದಕ್ಕೆ ಭಾರಿ ಪ್ರಯತ್ನ ಮಾಡಿದ್ದರು ಸಾಧ್ಯವಾಗಿಲ್ಲ.
ಕಿತ್ತಾಡುತ್ತಾ ಚಲಿಸುವ ಆಟೋದೊಳಗೆ ನುಗ್ಗಿದ ಕುದುರೆ:
ಜಬಲ್ಪುರದ ನಗ್ರತ್ ಚೌಕ್‌ನಲ್ಲಿ ಘಟನೆ ನಡೆದಿದೆ. ಎರಡು ಕುದುರೆಗಳು ಬಹಳ ಆಕ್ರಮಣಕಾರಿಯಾಗಿ ಪರಸ್ಪರ ನೂಕಾಟ ತಳ್ಳಾಟ ಮಾಡಿವೆ. ಈ ವೇಳೆ ಸ್ಥಳೀಯರು ಕುದುರೆಗಳನ್ನು ಬೇರೆಡೆಗೆ ಓಡಿಸುವ ಪ್ರಯತ್ನ ಮಾಡಿದರು ಕುದುರೆಗಳು ಭರ್ಜರಿ ಫೈಟ್‌ನಲ್ಲಿ ತೊಡಗಿವೆ. ಈ ಹೋರಾಟದಲ್ಲಿ ಒಂದು ಕುದುರೆ ಅಲ್ಲಿ ಸಾಗುತ್ತಿದ್ದ ಇ-ರಿಕ್ಷಾದೊಳಗೆ ನುಗ್ಗಿದ್ದು, ಇದರಿಂದ ಘಟನೆಯಲ್ಲಿ ಆಟೋದಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಇತ್ತ ಆಟೋದೊಳಗೆ ನುಗ್ಗಿದ್ದ ಕುದುರೆ ಹೊರಬರಲಾಗದೇ ಅಲ್ಲೇ 20 ನಿಮಿಷ ಬಾಕಿಯಾಗಿದ್ದು, ಡ್ರೈವರ್ ಕುಳಿತುಕೊಳ್ಳುವ ಕಂಪಾರ್ಟ್‌ಮೆಂಟ್‌ನಿಂದ ಹಿಂಭಾಗಕ್ಕೆ ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳದತ್ತ ಮುಂಭಾಗದ ಎರಡು ಕಾಲು ಹಾಗೂ ತಲೆಯನ್ನು ಹಾಕಿ ನೇತಾಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಈ ಕುದುರೆಗಳನ್ನು ಹೊರಗೆ ತೆಗೆಯಲು ಆಟೋದವರು ಹಾಗೂ ಸ್ಥಳೀಯರು ಪ್ರಯತ್ನ ಮಾಡಿದರು ಸಾಧ್ಯವಾಗಿಲ್ಲ. ಸುಮಾರು 20 ನಿಮಿಷಗಳ ಕಾಲ ಕುದುರೆ ಆಟೋದೊಳಗೆ ಸಿಲುಕಿಕೊಂಡಿತ್ತು.
ಕುದುರೆಗಳ ಗಲಾಟೆಯ ವೇಳೆಯೇ ಅಲ್ಲಿಗೆ ಈ ರಿಕ್ಷಾವೊಂದು ಪ್ರಯಾಣಿಕರನ್ನು ತುಂಬಿಕೊಂಡು ಬಂದಿದೆ. ಈ ವೇಳೆ ಮದವೇರಿದ ಕುದುರೆಯೊಂದು ಚಲಿಸುತ್ತಿದ್ದ ಆಟೋದೊಳಗೆ ನುಗ್ಗಿದೆ. ಪರಿಣಾಮ ಆಟೋ ಚಾಲಕ ಹಾಗೂ ಪ್ರಯಾಣಿಕನಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಅಲ್ಲಿದ್ದವರು ಸಹಾಯಕ್ಕೆ ಧಾವಿಸಿ ಬಂದಿದ್ದಾರೆ. ಹಾಗೂ ಕುದುರೆಯ ನುಗ್ಗಾಟದಿಂದ ಗಾಯಗೊಂಡಿದ್ದ ಪ್ರಯಾಣಿಕ ಹಾಗೂ ಚಾಲಕನನ್ನು ಆಟೋದಿಂದ ಹೊರಗೆಳೆದಿದ್ದಾರೆ. ಬಳಿಕ ಆಂಬುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಇತ್ತ ಈ ಆಟೋದಿಂದ ಕುದುರೆಯನ್ನು ಹೊರಗೆ ತರುವುದಕ್ಕೆ ಸುಮಾರು 20 ನಿಮಿಷ ಹಿಡಿದಿದ್ದು, ಕಡೆಗೂ ಕುದುರೆಯನ್ನು ಹೊರಗೆಳೆಯುವಲ್ಲಿ ಸಾರ್ವಜನಿಕರು ಯಶಸ್ವಿಯಾಗಿದ್ದಾರೆ. ಈ ಘಟನೆಯಲ್ಲಿ ಕುದುರೆಗೂ ಗಾಯವಾಗಿರುವುದು ಕಂಡು ಬಂದಿದೆ. ಈ ಇಂಟರ್‌ಸೆಕ್ಷನ್‌ನಲ್ಲಿ ಕುದುರೆಗಳು ಕಳೆದ ಮೂರು ದಿನಗಳಿಂದ ಕಿತ್ತಾಡುತ್ತಿದ್ದವು. ಈ ಬಗ್ಗೆ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಹೊಟೇಲ್‌ಗೆ ಬಂದ ಕರಡಿ
ಪ್ರಾಣಿಗಳು ಹಾಗೂ ಮಾನವರ ನಡುವಿನ ಸಂಘರ್ಷದ ಮತ್ತೊಂದು ಪ್ರಕರಣದಲ್ಲಿ ಕರಡಿಯೊಂದು ಆಹಾರ ಅರಸುತ್ತಾ ಹೊಟೇಲ್‌ಗೆ ಬಂದ ಘಟನೆ ನಡೆದಿದೆ. ರಾಜಸ್ಥಾನದ ಪ್ರವಾಸಿ ತಾಣ ಮೌಂಟ್ ಅಬುನಲ್ಲಿ ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಭಾರಿ ವೈರಲ್ ಆಗ್ತಿದೆ. ವೀಡಿಯೋದಲ್ಲಿ ಕಪ್ಪು ಕರಡಿಯೊಂದು ಹೊಟೇಲ್‌ನ ಲಾಬಿಗೆ ಬಂದಿದ್ದು, ಕುತೂಹಲದಿಂದ ಆಹಾರಕ್ಕೆ ಹುಟುಕಾಟ ನಡೆಸುವುದನ್ನು ವೀಡಿಯೋದಲ್ಲಿ ಕಾಣಬಹುದು. ಬುಧವಾರ ನಸುಕಿನ ಜಾವ ಈ ಘಟನೆ ನಡೆದಿದ್ದು, ಮೌಂಟ್ ಅಬುವಿನ ಚೌಧರಿ ಗಲ್ಲಿ ಪ್ರದೇಶದಲ್ಲಿ ಘಟನೆ ನಡೆದಿದೆ. ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ