ವಿಡಿಯೋ ವೈರಲ್ ಆಗಿದ್ದಕ್ಕೆ ಕರುಳಕುಡಿ ಎಂದೂ ನೋಡದೆ ಮಗಳನ್ನೇ ಕೊಂದ ತಂದೆ, ಅಣ್ಣ

Published : Sep 09, 2026, 10:33 PM IST
Father and daughter

ಸಾರಾಂಶ

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದಕ್ಕೆ ಕುಟುಂಬದ ಮರ್ಯಾದೆಗೆ ಅಂಜಿ ಅಹಮದಾಬಾದ್‌ನಲ್ಲಿ 22 ವರ್ಷದ ಯುವತಿಯನ್ನು ಆಕೆಯ ತಂದೆ ಮತ್ತು ಅಣ್ಣನೇ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ್ದಾರೆ. ಈ ಕೊಲೆಯನ್ನು ಹಿಟ್ ಆ್ಯಂಡ್ ರನ್ ರಸ್ತೆ ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದ ಆರೋಪಿಗಳ ಕಳ್ಳಾಟವನ್ನು ಬಯಲಿಗೆಳೆದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

ಅಹಮದಾಬಾದ್: ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿ ಕುಟುಂಬದ ಮರ್ಯಾದೆ ಹೋಯಿತೆಂದು ಕೆರಳಿದ ತಂದೆ ಮತ್ತು ಅಣ್ಣ ಸೇರಿ 22 ವರ್ಷದ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದೆ.

ಕೊಲೆಯನ್ನು ರಸ್ತೆ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ಪತ್ರೆಯೊಂದರಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಸೋಫಿಯಾ (22) ಕೊಲೆಯಾದ ದುರ್ದೈವಿ. ಆಕೆಯ ತಂದೆ ಮೊಹಮ್ಮದ್ ಫಾರೂಕ್ ಮತ್ತು ಅಣ್ಣ ಮೊಹಮ್ಮದ್ ಹಾಬಿಲ್ (38) ಬಂಧಿತ ಆರೋಪಿಗಳು.

ಹಿಟ್ ಆ್ಯಂಡ್ ರನ್ ಎಂದು ಕಥೆ ಕಟ್ಟಿದ್ದ ಅಣ್ಣ

ಆಗಸ್ಟ್ 12ರ ರಾತ್ರಿ ಈ ಘಟನೆ ನಡೆದಿದೆ. ತಂಗಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗಿದ್ದ ಹಾಬಿಲ್, ಘೇಲ್ಜಿಪುರ ರಸ್ತೆ ಕ್ರಾಸ್ ಬಳಿ ಅತಿವೇಗವಾಗಿ ಬಂದ ವಾಹನವೊಂದು ನಮ್ಮ ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ಪೊಲೀಸರ ಮುಂದೆ ನಾಟಕವಾಡಿದ್ದ. ಈ ಅಪಘಾತದಲ್ಲಿ ತಂಗಿಯ ತಲೆಗೆ ಗಂಭೀರ ಗಾಯಗಳಾಗಿದ್ದು, ತನಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಬಿಂಬಿಸಿದ್ದ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸೋಫಿಯಾಳನ್ನು ಸೋಲಾ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮರುದಿನವೇ ಆಕೆ ಸಾವನ್ನಪ್ಪಿದ್ದಳು.

ಮರ್ಯಾದಾ ಹತ್ಯೆಯ ರಹಸ್ಯ

ಪೊಲೀಸರು ಈ ‘ಹಿಟ್ ಆ್ಯಂಡ್ ರನ್’ ಪ್ರಕರಣದ ಬೆನ್ನುಬಿದ್ದಾಗ ಅನುಮಾನಗಳು ಕಾಡತೊಡಗಿದವು. ತೀವ್ರ ವಿಚಾರಣೆ ನಡೆಸಿದಾಗ ಇದು ಅಪಘಾತವಲ್ಲ, ಬದಲಿಗೆ ಅತ್ಯಂತ ವ್ಯವಸ್ಥಿತವಾಗಿ ನಡೆಸಲಾದ 'ಮರ್ಯಾದಾ ಹತ್ಯೆ' ಎಂಬ ಕರಾಳ ಸತ್ಯ ಹೊರಬಿದ್ದಿದೆ. ಸುಮಾರು ಮೂರು ತಿಂಗಳ ಹಿಂದೆ ಸೋಫಿಯಾ ಅಪರಿಚಿತ ಯುವಕನೊಬ್ಬನ ಜೊತೆಗಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರಿಂದ ಸಮಾಜದಲ್ಲಿ ತಮ್ಮ ಕುಟುಂಬದ ಮರ್ಯಾದೆ ಹೋಯಿತೆಂದು ತಂದೆ ಮತ್ತು ಅಣ್ಣ ಆಕೆಯ ಮೇಲೆ ತೀವ್ರ ದ್ವೇಷ ಕಾರುತ್ತಿದ್ದರು. ಕೊನೆಗೆ ಕುಟುಂಬದ ಮರ್ಯಾದೆ ಉಳಿಸಿಕೊಳ್ಳಲು ಆಕೆಯನ್ನು ಕೊಲ್ಲಲು ಸಂಚು ರೂಪಿಸಿದ್ದರು.

ಯೋಜನೆಯಂತೆ ಆಗಸ್ಟ್ 12ರ ರಾತ್ರಿ ತಂದೆ ಫಾರೂಕ್ ಹಾಗೂ ಅಣ್ಣ ಹಾಬಿಲ್ ಇಬ್ಬರೂ ಸೋಫಿಯಾಳನ್ನು ಬೈಕ್‌ನಲ್ಲಿ ಹೊರಗೆ ಕರೆದುಕೊಂಡು ಹೋಗಿದ್ದಾರೆ. ಹಾಬಿಲ್ ಮೊದಲೇ ತನ್ನ ಪ್ಯಾಂಟ್ ಒಳಗೆ ಕಬ್ಬಿಣದ ಸುತ್ತಿಗೆಯನ್ನು ಬಚ್ಚಿಟ್ಟುಕೊಂಡಿದ್ದ. ಘೇಲ್ಜಿಪುರ ಗ್ರಾಮದ ಸಮೀಪವಿರುವ ನಿರ್ಜನವಾದ ಕಚ್ಚಾ ರಸ್ತೆಗೆ ಬೈಕ್ ತಿರುಗಿಸಿದ ಹಾಬಿಲ್, ಬೈಕ್ ನಿಲ್ಲಿಸಿ ತಂಗಿಯ ತಲೆಗೆ ಸುತ್ತಿಗೆಯಿಂದ ಬಲವಾಗಿ ಮೂರು ಬಾರಿ ಹೊಡೆದಿದ್ದಾನೆ.

ರಕ್ತದ ಮಡುವಿನಲ್ಲಿ ಬಿದ್ದ ಸೋಫಿಯಾಳನ್ನು ಮತ್ತೆ ಮುಖ್ಯ ರಸ್ತೆಗೆ ಎಳೆತಂದು, ವೇಗದ ಅಪಘಾತದಂತೆ ಕಾಣಿಸಲು ತಮ್ಮ ಬೈಕನ್ನು ತಾವೇ ಜಖಂಗೊಳಿಸಿದ್ದಾರೆ. ನಂತರ ಪೊಲೀಸರ ಬಳಿ ಹೋಗಿ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ಸುಳ್ಳು ದೂರು ನೀಡಿದ್ದರು.

ಪ್ರಕರಣದ ಸತ್ಯಾಸತ್ಯತೆ ಬಯಲಾಗುತ್ತಿದ್ದಂತೆ ಪೊಲೀಸರು ತಂದೆ ಮೊಹಮ್ಮದ್ ಫಾರೂಕ್ ಮತ್ತು ಮಗ ಮೊಹಮ್ಮದ್ ಹಾಬಿಲ್‌ನನ್ನು ಬಂಧಿಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನೂ ಜೈಲಿಗಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್‌ಸ್ಟಾಗ್ರಾಮ್‌ನಲ್ಲಿ ₹1,545 ಅನಾರ್ಕಲಿ ಡ್ರೆಸ್‌ ಬುಕ್ ಮಾಡಿ ಮೋಸ ಹೋದ ಮಹಿಳೆಗೆ ₹16,000 ಪರಿಹಾರಕ್ಕೆ ಕೋರ್ಟ್ ಆದೇಶ!
ಭಾರತದಲ್ಲಿ ಎಷ್ಟು ಮಂದಿ ಹಿಂದೂಗಳು ಮಾಂಸಾಹಾರ ಸೇವಿಸ್ತಾರೆ? ಕರ್ನಾಟಕದಲ್ಲಿ ನಾನ್‌ವೆಜ್ ಕ್ರೇಜ್ ಹೇಗಿದೆ?