ಇನ್‌ಸ್ಟಾಗ್ರಾಮ್‌ನಲ್ಲಿ ₹1,545 ಅನಾರ್ಕಲಿ ಡ್ರೆಸ್‌ ಬುಕ್ ಮಾಡಿ ಮೋಸ ಹೋದ ಮಹಿಳೆಗೆ ₹16,000 ಪರಿಹಾರಕ್ಕೆ ಕೋರ್ಟ್ ಆದೇಶ!

Published : Sep 09, 2026, 10:22 PM IST
Instagram Store

ಸಾರಾಂಶ

ಇನ್‌ಸ್ಟಾಗ್ರಾಮ್‌ನಲ್ಲಿ ಜಾಹೀರಾತು ನೋಡಿ 1,545 ರೂ. ಪಾವತಿಸಿ ಅನಾರ್ಕಲಿ ಡ್ರೆಸ್ ಆರ್ಡರ್ ಮಾಡಿದ ಮಹಿಳೆಗೆ, ಆನ್‌ಲೈನ್ ಸ್ಟೋರ್ ವಂಚನೆ ಎಸಗಿದೆ. ತಿಂಗಳುಗಟ್ಟಲೆ ಡ್ರೆಸ್ ತಲುಪಿಸದ ಕಾರಣ, ಕಣ್ಣೂರು ಜಿಲ್ಲಾ ಗ್ರಾಹಕ ಆಯೋಗವು ಸ್ಟೋರ್‌ಗೆ ಹಣ ಹಿಂತಿರುಗಿಸಿ, 15,000 ರೂ. ಪರಿಹಾರ ನೀಡುವಂತೆ ಆದೇಶಿಸಿದೆ.

ಕೊಚ್ಚಿ (ಸೆ.9): ಇನ್‌ಸ್ಟಾಗ್ರಾಮ್ ಪೇಜ್‌ಗಳಲ್ಲಿ ಜಾಹೀರಾತು ನೋಡಿ ಆನ್‌ಲೈನ್ ಶಾಪಿಂಗ್ ಮಾಡುವ ಗ್ರಾಹಕರಿಗೆ ಕೇರಳದ ಗ್ರಾಹಕ ಆಯೋಗ ಕಣ್ಣು ತೆರೆಸುವಂತಹ ಅತ್ಯಂತ ಮಹತ್ವದ ತೀರ್ಪೊಂದನ್ನು ನೀಡಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಬಂದ ಜಾಹೀರಾತಿನಲ್ಲಿ 1,545 ರೂಪಾಯಿ ಪಾವತಿಸಿ ಆರ್ಡರ್ ಮಾಡಿದ್ದ ಅನಾರ್ಕಲಿ ಡ್ರೆಸ್‌ಅನ್ನು ತಲುಪಿಸದೆ ವಂಚಿಸಿದ ಕ್ಯೂಚರ್ ಸ್ಟೋರ್ ಒಂದಕ್ಕೆ, ಗ್ರಾಹಕಿಗೆ ಹಣ ಹಿಂತಿರುಗಿಸುವ ಜೊತೆಗೆ 15,000 ರೂಪಾಯಿ ಪರಿಹಾರ ಪಾವತಿಸುವಂತೆ ಕಣ್ಣೂರು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಕಣ್ಣೂರು ಜಿಲ್ಲಾ ಗ್ರಾಹಕ ಆಯೋಗದ ಅಧ್ಯಕ್ಷ ರವಿ ಸುಶಾ, ಸದಸ್ಯರಾದ ಮೋಲಿ ಕುಟ್ಟಿ ಮ್ಯಾಥ್ಯೂ ಮತ್ತು ಸಜೀಶ್ ಕೆ.ಪಿ. ಅವರನ್ನೊಳಗೊಂಡ ಪೀಠವು 2026 ರ ಆಗಸ್ಟ್ 21 ರಂದು ಈ ಆದೇಶವನ್ನು ಹೊರಡಿಸಿದೆ. ಆರ್ಡರ್ ಮಾಡಿದ 146 ದಿನಗಳ ನಂತರ ವಿಚಾರಿಸಿದರೂ ಆನ್‌ಲೈನ್ ಅಂಗಡಿಯು ಗ್ರಾಹಕಿಗೆ ಸೂಕ್ತ ಉತ್ತರ ನೀಡಲು ವಿಫಲವಾಗಿದೆ ಹಾಗೂ ಸೇವೆಯಲ್ಲಿ ತೀವ್ರ ನ್ಯೂನತೆ ಎಸಗಿದೆ ಎಂದು ಆಯೋಗ ತೀರ್ಪು ನೀಡಿದೆ.

"ಸ್ಟೋರ್ ನಡವಳಿಕೆಯು ದೂರುದಾರರಿಗೆ ತೀವ್ರ ಮಾನಸಿಕ ಕಿರುಕುಳ ಮತ್ತು ಆರ್ಥಿಕ ನಷ್ಟವನ್ನುಂಟುಮಾಡಿದೆ. ಆದ್ದರಿಂದ ಸ್ಟೋರ್‌ನವರು ಗ್ರಾಹಕರಿಗಾದ ನಷ್ಟವನ್ನು ಭರಿಸಲು ನೇರ ಹೊಣೆಗಾರರಾಗಿದ್ದಾರೆ. ಇದು ಸೇವೆಯಲ್ಲಾದ ನ್ಯೂನತೆ ಮತ್ತು ಅನುಚಿತ ವ್ಯಾಪಾರ ವಹಿವಾಟು" ಎಂದು ಆಯೋಗ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಆರ್ಡರ್ ಮಾಡಿದರೂ ಸಿಗದ ಡ್ರೆಸ್

ದೂರುದಾರ ಮಹಿಳೆಯು ಅಕ್ಟೋಬರ್ 3, 2024 ರಂದು ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಜಾಹೀರಾತು ನೋಡಿ, ದುಪಟ್ಟಾ ಹೊಂದಿದ್ದ ಅನಾರ್ಕಲಿ ಉಡುಪಿಗೆ ಆಕರ್ಷಿತರಾಗಿ ಬುಕ್ ಮಾಡಿದ್ದರು. ಅಂದೇ ಗೂಗಲ್ ಪೇ (Google Pay) ಮೂಲಕ 1,545 ರೂಪಾಯಿಗಳನ್ನು ಪಾವತಿಸಿದ್ದರು. ಸ್ಟೋರ್‌ನ ಶಿಪ್ಪಿಂಗ್ ನಿಯಮಾವಳಿಯ ಪ್ರಕಾರ ಉತ್ಪನ್ನಗಳನ್ನು 70 ರಿಂದ 90 ದಿನಗಳ ಒಳಗೆ ಡೆಲಿವರಿ ಮಾಡಲಾಗುವುದು ಎಂದು ತಿಳಿಸಲಾಗಿತ್ತು. ಆದರೆ, 90 ದಿನಗಳು ಕಳೆದರೂ ಡ್ರೆಸ್ ಆಕೆಯ ಕೈಸೇರಲಿಲ್ಲ.

ಕಂಪನಿಯನ್ನು ಮಹಿಳೆ ಹಲವು ಬಾರಿ ಸಂಪರ್ಕಿಸಿದರೂ ಸೂಕ್ತ ಸ್ಪಂದನೆ ಸಿಗಲಿಲ್ಲ. ಆರ್ಡರ್ ಮಾಡಿದ 146 ದಿನಗಳ ನಂತರ ಅಂದರೆ ಫೆಬ್ರವರಿ 27, 2025 ರಂದು ಆಕೆ ಮತ್ತೆ ವಿಚಾರಿಸಿದಾಗ, ಮಾರ್ಚ್ ತಿಂಗಳಲ್ಲಿ ಡೆಲಿವರಿ ಮಾಡಲಾಗುವುದು ಎಂದು ತಿಳಿಸಲಾಗಿತ್ತು. ಆದರೆ 8 ತಿಂಗಳು ಕಳೆದರೂ ಉಡುಪು ತಲುಪಲಿಲ್ಲ. ಇದಷ್ಟೇ ಅಲ್ಲದೆ, ಡ್ರೆಸ್ ತಲುಪಿಸುವಂತೆ ಪಟ್ಟು ಹಿಡಿದಾಗ ಸ್ಟೋರ್‌ನವರು ಕೆಟ್ಟ ಮತ್ತು ನಿಂದನೀಯ ಭಾಷೆಯಲ್ಲಿ ಮಾತನಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು. ಇದರಿಂದ ಕಂಗಾಲಾದ ಅವರು ಸೇವೆಯ ನ್ಯೂನತೆ ಮತ್ತು ತಮಗಾದ ಮಾನಸಿಕ ಕಿರುಕುಳ ಹಾಗೂ ಆರ್ಥಿಕ ನಷ್ಟಕ್ಕೆ ಪರಿಹಾರ ಕೋರಿ ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು.

ಸ್ಟೋರ್‌ನ ವಾದ ಏನಿತ್ತು?

ಮಹಿಳೆಯ ಆರೋಪವನ್ನು ನಿರಾಕರಿಸಿದ ಸ್ಟೋರ್, ಉತ್ಪನ್ನಗಳ ಲಭ್ಯತೆ, ಸಂಸ್ಕರಣೆ ಮತ್ತು ಸಾಗಣೆ ಸಮಯಕ್ಕೆ ಅನುಗುಣವಾಗಿ ಡೆಲಿವರಿ ಸಮಯ ಬದಲಾಗುತ್ತದೆ ಎಂಬುದು ನಮ್ಮ ನಿಯಮದಲ್ಲಿದೆ. ತಡವಾಗಿದೆ ಎಂಬ ಆರೋಪ ಆಧಾರರಹಿತವಾಗಿದ್ದು, ನಿಯಮಾವಳಿಗಳ ಅಡಿಯಲ್ಲೇ ಪ್ರಕ್ರಿಯೆ ನಡೆಸಲಾಗುತ್ತಿತ್ತು ಎಂದು ಸಮರ್ಥಿಸಿಕೊಂಡಿತ್ತು.

ಅಲ್ಲದೆ, ಅಪಘಾತವೊಂದರಲ್ಲಿ ನಮ್ಮಲ್ಲಿದ್ದ ಬಟ್ಟೆಯ ಸ್ಟಾಕ್ ಹಾನಿಗೊಳಗಾಗಿತ್ತು. ಮಹಿಳೆ ಆರ್ಡರ್ ಮಾಡಿದ ಡ್ರೆಸ್‌ಗೆ ಬೇಕಾದ ಮೆಟೀರಿಯಲ್ ಕೂಡ ಅದರಲ್ಲಿ ಹಾನಿಯಾಗಿತ್ತು. ಈ ತಡವಾದ ಸನ್ನಿವೇಶದ ಬಗ್ಗೆ ಇಮೇಲ್ ಮೂಲಕ ಕ್ಷಮೆಯಾಚಿಸಿ ಅವರಿಗೆ ಮಾಹಿತಿ ನೀಡಲಾಗಿತ್ತು ಮತ್ತು ಅವರು ಅದಕ್ಕೆ ಉತ್ತರಿಸಿದ್ದರು ಎಂದು ಅಂಗಡಿ ಮಾಲೀಕರು ನ್ಯಾಯಾಲಯದಲ್ಲಿ ವಾದಿಸಿದ್ದರು.

146 ದಿನಗಳಾದರೂ ಸರಿಯಾದ ಸ್ಪಂದನೆ ಇಲ್ಲ

ಉಭಯ ಪಕ್ಷಗಳ ವಾದ ಆಲಿಸಿದ ಆಯೋಗ, ಸ್ಟೋರ್‌ನ ಸ್ವಂತ ಶಿಪ್ಪಿಂಗ್ ಪಾಲಿಸಿಯಲ್ಲೇ ಉತ್ಪಾದನೆ ಪೂರ್ಣಗೊಂಡ ನಂತರ ಕನಿಷ್ಠ 57 ಮತ್ತು ಗರಿಷ್ಠ 70 ರಿಂದ 90 ಕೆಲಸದ ದಿನಗಳಲ್ಲಿ ಉತ್ಪನ್ನ ರವಾನೆಯಾಗಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂಬುದನ್ನು ಎತ್ತಿಹಿಡಿಯಿತು. ಆರ್ಡರ್ ಮಾಡಿ 146 ದಿನಗಳಾಗಿದ್ದರೂ ಗ್ರಾಹಕಿಗೆ ತೃಪ್ತಿದಾಯಕ ಉತ್ತರ ನೀಡಿಲ್ಲ ಮತ್ತು ಇದುವರೆಗೆ ಉತ್ಪನ್ನವನ್ನು ತಲುಪಿಸಿಲ್ಲ. ಸ್ಟೋರ್ ತನ್ನದೇ ಪಾಲಿಸಿಗೆ ಬದ್ಧವಾಗಿ ನಡೆದುಕೊಂಡಿಲ್ಲ. ಹೀಗಾಗಿ ಇದು ಸೇವಾ ನ್ಯೂನತೆ ಮತ್ತು ವಂಚನೆ ಎಂದು ಆಯೋಗ ತೀರ್ಮಾನಿಸಿತು.

ಆದೇಶದಲ್ಲೇನಿದೆ?

ಆಯೋಗವು ಸ್ಟೋರ್‌ಗೆ ಮೂರು ಪ್ರಮುಖ ನಿರ್ದೇಶನಗಳನ್ನು ನೀಡಿದ್ದು, 30 ದಿನಗಳ ಒಳಗಾಗಿ ಇದನ್ನು ಈಡೇರಿಸಲು ಆದೇಶಿಸಿದೆ. ದೂರುದಾರರಿಂದ ಪಡೆದ 1,545 ರೂಪಾಯಿಗಳನ್ನು ಪೂರ್ಣವಾಗಿ ಮರುಪಾವತಿಸಬೇಕು. ಮಾನಸಿಕ ಕಿರುಕುಳ ಉಂಟುಮಾಡಿದ್ದಕ್ಕಾಗಿ 10,000 ರೂಪಾಯಿ ನಷ್ಟಪರಿಹಾರ ನೀಡಬೇಕು. ಕಾನೂನು ಹೋರಾಟದ ವೆಚ್ಚವಾಗಿ (Litigation cost) 5,000 ರೂಪಾಯಿ ಪಾವತಿಸಬೇಕು (ಒಟ್ಟು 16,545 ರೂ. ಪಾವತಿಸಬೇಕಿದೆ) ಎಂದು ಹೇಳಿದೆ. ಗ್ರಾಹಕರಿಂದ ಹಣ ಪಡೆದು ತಮ್ಮದೇ ನಿಯಮಗಳಲ್ಲಿ ಹೇಳಿದ ಸಮಯ ಮೀರಿ ಕಾಯಿಸುವುದು ಕಾನೂನುಬಾಹಿರ ಎಂಬ ಪ್ರಮುಖ ಸಂದೇಶವನ್ನು ಈ ತೀರ್ಪು ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದಲ್ಲಿ ಎಷ್ಟು ಮಂದಿ ಹಿಂದೂಗಳು ಮಾಂಸಾಹಾರ ಸೇವಿಸ್ತಾರೆ? ಕರ್ನಾಟಕದಲ್ಲಿ ನಾನ್‌ವೆಜ್ ಕ್ರೇಜ್ ಹೇಗಿದೆ?
26 ದಿನದ ಮಗುವನ್ನು ಕೈಯಲ್ಲಿ ಹಿಡಿದು ಇಂಟರ್ವ್ಯೂ ಕೊಠಡಿಗೆ ಹೋದ ಮಹಿಳೆ ಮುಂದೆ ಏನಾಯ್ತು ಗೊತ್ತಾ?