
ಅಪಘಾತದ ನಂತರ ಒಂದೂವರೆ ವರ್ಷದ ಮಗುವೊಂದು ವಾಹನದ ರೂಫ್ ಮೇಲೆ ಬಿದ್ದರೂ ಸ್ಕಾರ್ಫಿಯೋ ಚಾಲಕನೋರ್ವ ವಾಹನವನ್ನು ನಿಲ್ಲಿಸದೇ ಸುಮಾರು 10 ಕಿಲೋ ಮೀಟರ್ ದೂರದವರೆಗೆ ವೇಗವಾಗಿ ಚಲಾಯಿಸಿದಂತಹ ಅಮಾನವೀಯ ಘಟನೆ ನಡೆದಿದೆ. ಪುಟ್ಟ ಮಗು ಹಾಗೂ ಕುಟುಂಬವಿದ್ದ ಬೈಕ್‌ಗೆ ವೇಗವಾಗಿ ಬಂದ ಸ್ಕಾರ್ಫಿಯೋ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಮಗು ಸ್ಕಾರ್ಫಿಯೊದ ಮೇಲ್ಛಾವಣಿ ಮೇಲೆ ಬಿದ್ದಿದೆ. ಆದರೆ ಸ್ಕಾರ್ಫಿಯೋ ಚಾಲಕ ಮಾತ್ರ ವಾಹನವನ್ನು ನಿಲ್ಲಿಸದೇ ವಾಗವಾಗಿ 10 ಕಿಲೋ ಮೀಟರ್ ದೂರ ಸಾಗಿದ್ದಾನೆ. ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಮಗು ಮೇಲಿದ್ದರೂ ನಿಲ್ಲಿಸದೇ 10 ಕಿಲೋ ಗಾಡಿ ಚಲಾಯಿಸಿದ ಸ್ಕಾರ್ಫಿಯೋ ಚಾಲಕ:
ಬೈಕ್ ಸವಾರನೋರ್ವ ತನ್ನ ಅತ್ತಿಗೆ ಹಾಗೂ ಮಗುವನ್ನು ಹಿಂಬದಿ ಕೂರಿಸಿಕೊಂಡು ಹೋಗುತ್ತಿದ್ದಾಗ ವೇಗವಾಗಿ ಬಂದ ಸ್ಕಾರ್ಫಿಯೋ ಇವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಮಗು ಸ್ಕಾರ್ಫಿಯೋದ ಮೇಲೆ ಬಿದ್ದಿದೆ. ರೇವಾ ಜಿಲ್ಲೆಯ ಬಹೇರ ದಬಾರ್ ಗ್ರಾಮದಲ್ಲಿ ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಉಮೇಶ್ ಎಂಬುವವರು ಬೈಕ್ ಚಲಾಯಿಸುತ್ತಿದ್ದರೆ ಅವರ ಅತ್ತಿಗೆ ಮುನ್ನಿ ಸಾಕೇತ್ ಹಿಂಬದಿ ಕುಳಿತಿದ್ದರು. ಹಾಗೆಯೇ ಒಂದೂವರೆ ವರ್ಷದ ಮಗು ಸೂರಜ್ ಗಾಳಿಯಲ್ಲಿ ಹಾರಿ ಸ್ಕಾರ್ಫಿಯೋದ ಮೇಲೆ ಬಿದ್ದಿದ್ದಾರೆ.
ಘಟನೆಯ ನಂತರ ಸ್ಕಾರ್ಫಿಯೋ ಚಾಲಕ ವಾಹನವನ್ನು ನಿಲ್ಲಿಸುವ ಬದಲು ಗಾಡಿಯ ಮೇಲೆ ಮಗು ಇದ್ದರೂ ಕೂಡ ಮತ್ತಷ್ಟು ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾನೆ. ಈ ವೇಳೆ ರೂಫ್ ಮೇಲೆ ಮಗುವನ್ನು ನೋಡಿದವರು ವಾಹನ ಚಾಲಕನನ್ನು ಎಚ್ಚರಿಸುವ ಪ್ರಯತ್ನ ಮಾಡಿದರು ಆತ ನಿಲ್ಲಿಸಿಲ್ಲ, ನಂತರ ಕೆಲ ಗ್ರಾಮಸ್ಥರು ತಮ್ಮ ವಾಹನಗಳಲ್ಲಿ ಸ್ಕಾರ್ಫಿಯೋವನ್ನು ಚೇಸ್ ಮಾಡಿಕೊಂಡು ಹೋಗಿದ್ದಾರೆ.
ಕೊನೆಗೂ ಮಗುವನ್ನು ರಕ್ಷಿಸಿದ ಬೇರೆ ವಾಹನ ಸವಾರರು:
ಅಲ್ಲದೇ ಪೊಲೀಸರಿಗೂ ವಿಚಾರ ತಿಳಿಸಿದ್ದಾರೆ. ಈ ಸ್ಕಾರ್ಫಿಯೋ ಗಾಡಿ ಉತ್ತರ ಪ್ರದೇಶ ನೊಂದಣಿ ಸಂಖ್ಯೆಯನ್ನು ಹೊಂದಿತ್ತು. ಕೂಡಲೇ ಪೊಲೀಸರು ಹಲವು ತಂಡಗಳನ್ನು ರಚನೆ ಮಾಡಿ ನಾಕಾಬಂಧಿ ಹಾಕಿ ಕಾರು ಇರುವ ಜಾಗವನ್ನು ಗುರುತಿಸಿದ್ದಾರೆ. ಇದಾಗಿ ಸ್ವಲ್ಪ ಹೊತ್ತಿನಲ್ಲಿ ಸ್ವಲ್ಪ ಅಂತರದಲ್ಲಿದ್ದ ಬೇರೆ ಕಾರಿನಲ್ಲಿದ್ದವರು ಮಗುವನ್ನು ಕಾರಿನೊಳಗೆ ಎಳೆದುಕೊಂಡು ಹೋಗಿ ನಂತರ ಸಮುದಾಯ ಆರೋಗ್ಯ ಕೇಂದ್ರಕ್ಕೆ (ಸಿಎಚ್‌ಸಿ) ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಮಾನವೀಯತೆ ಮರೆತ ಸ್ಕಾರ್ಫಿಯೋ ಚಾಲಕನಿಗಾಗಿ ಹುಡುಕಾಟ:
ಅಲ್ಲದೇ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಕೂಡ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಮಗು ಪತ್ತೆಯಾಗಿದೆ. ಘಟನೆಯಲ್ಲಿ ಮಗುವಿನ ತಲೆ ಮತ್ತು ದೇಹದ ಭಾಗಕ್ಕೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿನ ತಾಯಿ ಮತ್ತು ಚಿಕ್ಕಪ್ಪನಿಗೂ ಸಿಧಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೂವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಕಾರ್ಪಿಯೋ ಮತ್ತು ಅದರ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕೈಗೆ ನೈಲ್ ಪಾಲಿಶು ಹೆಣ್ಣಿನ ವಾಯ್ಸೂ: ಅಮ್ಮನ ಪಿಂಚಣಿ ಹಣ ಪಡೆಯಲು ಮಗ ಮಾಡಿದ್ದೇನು?
ಇದನ್ನೂ ಓದಿ: ಬಾಸ್ಕೆಟ್‌ಬಾಲ್ ಕಂಬವಾಯ್ತು ಯಮಪಾಶ: ಯುವ ಆಟಗಾರ ಸಾವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ