
ನವದೆಹಲಿ: 2008ರ ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಮಹಾರಾಷ್ಟ್ರ ಎಟಿಎಸ್ 7 ಜನರನ್ನು ಬಂಧಿಸಿದ ಬಳಿಕ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಸೇರಿದಂತೆ ಕೆಲ ನಾಯಕರು ಮೊದಲ ಬಾರಿಗೆ ಹಿಂದೂ ಭಯೋತ್ಪಾದನೆಯ ಪದ ಬಳಸಿದ್ದರು. ಅದು ದೇಶದಲ್ಲಿ ಭಯೋತ್ಪಾದನೆಯನ್ನು ಹಿಂದೂಗಳ ತಲೆಗೆ ಕಟ್ಟಿದ ಮೊದಲ ಪ್ರಕರಣವಾಗಿತ್ತು.
ಮಾಲೇಗಾಂವ್ ಸ್ಫೋಟದ ಬಳಿಕ ನಡೆದ ಅಜ್ಮೇರ್ ಷರೀಫ್, ಸಂಝೌತಾ ಎಕ್ಸ್‌ಪ್ರೆಸ್ ರೈಲು ಸ್ಫೋಟ, ಬಾಟ್ಲಾ ಹೌಸ್ ಎನ್ಕೌಂಟರ್, 2008ರ ಮುಂಬೈ ಸರಣಿ ದಾಳಿ ನಡೆದಾಗಲೂ ದಿಗ್ವಿಜಯ್ ಸೇರಿ ಹಲವು ಕಾಂಗ್ರೆಸ್ ನಾಯಕರು ಹಿಂದೂ ಭಯೋತ್ಪಾದನೆಯ ಪದಗಳನ್ನು ಬಳಸಿದ್ದರು.
ಇನ್ನು 2010ರಲ್ಲಿ ಆಗಿನ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಗುಪ್ತಚರ ಅಧಿಕಾರಿಗಳೊಂದಿಗೆ ಮಾತನಾಡುವ ವೇಳೆ, ಹಲವು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಹಿಂದೂ ಭಯೋತ್ಪಾದನೆ ಒಂದು ವಿದ್ಯಮಾನವಾಗಿದೆ ಎಂದು ಹೇಳಿದ್ದರು. ಇನ್ನು 2013ರಲ್ಲಿ ಅಂದಿನ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ಆರ್‌ಎಸ್‌ಎಸ್ ಮತ್ತು ಬಿಜೆಪಿ ಭಯೋತ್ಪಾದನಾ ತರಬೇತಿ ಶಿಬಿರಗಳನ್ನು ನಡೆಸುತ್ತಿವೆ. ಹಿಂದೂ ಸಂಘಟನೆಗಳು ಭಯೋತ್ಪಾದನೆ ಪ್ರಸರಣದಲ್ಲಿ ತೊಡಗಿವೆ ಎಂಬ ಗಂಭೀರ ಆರೋಪ ಮಾಡಿದ್ದರು.
ಹಿಂದೂ ಉಗ್ರವಾದ ಹೇಳಿಕೆಗೆ ಸೋನಿಯಾ, ರಾಹುಲ್ ಕ್ಷಮೆ ಕೇಳಲಿ: ಬಿಜೆಪಿ ಆಗ್ರಹ
ನವದೆಹಲಿ: ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಎಲ್ಲಾ 7 ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದ ಬೆನ್ನಲ್ಲೇ, ಹಿಂದೂ ಭಯೋತ್ಪಾದನೆಯ ಸಿದ್ಧಾಂತ ಸೃಷ್ಟಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ರಾಜೀನಾಮೆ ನೀಡಬೇಕೆಂದು ಬಿಜೆಪಿ ಒತ್ತಾಯಿಸಿದೆ.
ಈ ಕುರಿತು ಗುರುವಾರ ಹೇಳಿಕೆ ನೀಡಿರುವ ಪಕ್ಷದ ವಕ್ತಾರ ರವಿಶಂಕರ್ ಪ್ರಸಾದ್, ‘ಗುಜರಾತ್‌ನಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಏಳ್ಗೆಯನ್ನು ಸಹಿಸಲಾಗದೇ ಮತ್ತು ಮುಸ್ಲಿಮರನ್ನು ಓಲೈಸುವ ಸಲುವಾಗಿ ಕಾಂಗ್ರೆಸ್ ನಾಯಕರು ಮಾಲೇಗಾಂವ್ ಸ್ಫೋಟವನ್ನು ಹಿಂದೂ ಭಯೋತ್ಪಾದನೆ ಎಂದು ಬಣ್ಣಿಸಿದ್ದರು. ಇದು ಮತಬ್ಯಾಂಕ್ ರಾಜಕೀಯಕ್ಕಾಗಿ ಕಾಂಗ್ರೆಸ್ ಯಾವುದೇ ಮಟ್ಟಕ್ಕಾದರೂ ಇಳಿಯಲು ಸಿದ್ದ ಎಂಬುದನ್ನು ಸಾಬೀತುಪಡಿಸಿದೆ. ಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕ’ ಎಂದು ಬಣ್ಣಿಸಿದ್ದಾರೆ.
ಇದೇ ವೇಳೆ 2010ರಲ್ಲಿ ರಾಹುಲ್ ಗಾಂಧಿ, ಅಮೆರಿಕದಲ್ಲಿ ಭಾರತೀಯ ರಾಯಭಾರಿ ಜೊತೆ ಮಾತನಾಡುವ ವೇಳೆ ಲಷ್ಕರ್ ಎ ತೊಯ್ಬಾಗಿಂತ ಹಿಂದೂ ಸಂಘಟನೆಗಳು ಹೆಚ್ಚು ಅಪಾಯಕಾರಿ ಎಂದು ಹೇಳಿದ್ದರು ಎಂದು ವಿಕಿಲೀಕ್ಸ್ ದಾಖಲೆಗಳು ಬಹಿರಂಗಪಡಿಸಿದ್ದವು. ಇದೀಗ ಅವರ ಆರೋಪಿಗಳೆಲ್ಲಾ ಸುಳ್ಳೆಂದು ಸಾಬೀತಾಗಿದೆ. ಇಂಥದ್ದೊಂದು ಸಿದ್ಧಾಂತ ಸೃಷ್ಟಿಸಿದ್ದಕ್ಕೆ ಪಕ್ಷದ ಮಾಜಿ ಅಧ್ಯಕ್ಷರಾದ ಸೋನಿಯಾ ಮತ್ತು ರಾಹುಲ್ ದೇಶದ ಜನತೆಯ ಕ್ಷಮೆಯಾಚಿಸಬೇಕು ಎಂದು ರವಿಶಂಕರ್ ಪ್ರಸಾದ್ ಒತ್ತಾಯಿಸಿದ್ದಾರೆ.ಈ ನಡುವೆ ಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಭಯೋತ್ಪಾದನೆ ಎಂದೂ ಕೇಸರೀಕರಣಗೊಂಡಿರಲಿಲ್ಲ ಮತ್ತು ಕೇಸರೀಕರಣಗೊಳ್ಳುವುದೂ ಇಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ