
ನವದೆಹಲಿ(ಸೆ.15): ಹಿಂದಿ ದೇಶದ ಅಧಿಕೃತ ಭಾಷೆ. ಆದರೆ ಅದು ಸಮೃದ್ಧಿಯಾಗುವುದು ಅದು ಇತರೆ ಭಾರತೀಯ ಭಾಷೆಗಳ ಜೊತೆ ಸಹಬಾಳೆ ನಡೆಸುವುದು ಮೂಲಕ ಮಾತ್ರವೇ. ಹೀಗಾಗಿ ಎಲ್ಲಾ ಭಾಷೆಗಳಿಗೂ ಪ್ರೋತ್ಸಾಹ ನೀಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಮಂಗಳವಾರ ‘ಹಿಂದಿ ದಿವಸ’ ಸಮಾರಂಭದಲ್ಲಿ ಮಾತನಾಡಿದ ಅವರು, ‘ಇತರ ಪ್ರಾದೇಶಿಕ ಭಾಷೆಗಳಿಗಿಂತ ಹಿಂದಿ ಭಿನ್ನವಲ್ಲ. ಜೊತೆಗೆ ಯಾವುದೇ ಭಾಷೆಗಳ ಜೊತೆಗೂ ಹಿಂದಿ ಸ್ಪರ್ಧಿಸುತ್ತಿಲ್ಲ. ವಾಸ್ತವವಾಗಿ ಹಿಂದಿ ಭಾಷೆಯು ಇತರ ಭಾಷೆಗಳಿಗೆ ‘ಸಖಿ’ ಇದ್ದಂತೆ. ಎಲ್ಲ ಪ್ರಾದೇಶಿಕ ಭಾಷೆಗಳು ಸೇರಿ ಹಿಂದಿಯನ್ನು ಪರಿಪೂರ್ಣಗೊಳಿಸುತ್ತವೆ ಹಾಗೂ ಎಲ್ಲ ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸಿ ಅವುಗಳನ್ನು ಪ್ರಚುರಪಡಿಸಬೇಕು’ ಎಂದರು.
ಇಂದಿನ ಪೀಳಿಗೆಯ ಮಕ್ಕಳ ಜತೆ ಪಾಲಕರು ಮಾತೃಭಾಷೆಯಲ್ಲೇ ಸಂವಹನ ನಡೆಸಬೇಕು. ಮಕ್ಕಳು ಇಂಗ್ಲಿಷ್ ಮೀಡಿಯಂನಲ್ಲಿ ಓದುತ್ತಿದ್ದರೂ ಮಕ್ಕಳ ಜತೆ ಮಾತೃಭಾಷೆಯಲ್ಲೇ ಮಾತನಾಡಬೇಕು ಎಂದು ಕರೆ ನೀಡಿದರು.
ಕೇವಲ ವಸ್ತು ಉತ್ಪಾದನೆ ಅಷ್ಟೇ ಅಲ್ಲ, ಭಾಷೆಯಲ್ಲೂ ಆತ್ಮನಿರ್ಭರತೆ ಸಾಧಿಸಬೇಕು. ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನೇ ನೋಡಿ. ಎಲ್ಲ ಅಂತಾರಾಷ್ಟ್ರೀಯ ವೇದಿಕೆಯಲ್ಲೂ ಹಿಂದಿಯಲ್ಲೇ ಮಾತನಾಡುತ್ತಾರೆ. ವೈದ್ಯರು, ತಜ್ಞರು ಹಾಗೂ ಇತರರ ಜತೆಗೂ ಹಿಂದಿ ಸಂಭಾಷಣೆ ನಡೆಸುತ್ತಾರೆ. ಇದರಿಂದಾಗಿ ಅವರ ಸಂದೇಶ ತಳಹಂತದವರೆಗೂ ತಲುಪುತ್ತದೆ ಎಂದು ಉದಾಹರಿಸಿದರು.
ನೂತನ ಶಿಕ್ಷಣ ನೀತಿಯಲ್ಲಿ ಹಿಂದಿ ಹಾಗೂ ಇತರ ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದೂ ಅವರು ನುಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ