ಅದಾನಿ ಗ್ರೂಪ್‌ ಮೇಲಿನ ಆರೋಪದ ವಿರುದ್ಧ ಜೆಪಿಸಿ ತನಿಖೆಗೆ ವಿರೋಧ ಪಕ್ಷಗಳ ಆಗ್ರಹ?

Published : Feb 02, 2023, 03:41 PM IST
ಅದಾನಿ ಗ್ರೂಪ್‌ ಮೇಲಿನ ಆರೋಪದ ವಿರುದ್ಧ ಜೆಪಿಸಿ ತನಿಖೆಗೆ ವಿರೋಧ ಪಕ್ಷಗಳ ಆಗ್ರಹ?

ಸಾರಾಂಶ

ಷೇರು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಕುಸಿತ ಕಾಣುತ್ತಿರುವ ಅದಾನಿ ಎಂಟರ್‌ಪ್ರೈಸಸ್‌ ಕಂಪನಿಯ ಮೇಲೆ ವಿರೋಧ ಪಕ್ಷಗಳು ಮುಗಿಬಿದ್ದಿವೆ. ಅದಾನಿ ಕಂಪನಿಗಳ ಮೇಲಿನ ಆರೋಪದ ತನಿಖೆಗಾಗಿ ಜೆಪಿಸಿ ರಚನೆ ಮಾಡುವಂತೆ ಕೋರಿದ್ದು, ಸಂಸತ್‌ ಕಲಾಪಕ್ಕೆ ಅಡ್ಡಿಪಡಿಸಿದೆ.

ನವದೆಹಲಿ (ಫೆ.2): ನ್ಯೂಯಾರ್ಕ್‌ ಮೂಲದ ಕಂಪನಿ ಹಿಂಡೆನ್‌ಬರ್ಗ್‌ ರಿಸರ್ಚ್‌, ಉದ್ಯಮಿ ಗೌತಮ್‌ ಅದಾನಿ ಅವರ ಕಂಪನಿಗಳ ಮೇಲೆ ಷೇರುಗಳ ಮೌಲ್ಯವನ್ನು ಬುದ್ದಿವಂತಿಕೆಯಿಂದ ಬದಲಾಯಿಸಿದ ಹಾಗೂ ಹಣಕಾಸು ಅವ್ಯವಹಾರವನ್ನು ಮಾಡಿದ ಆರೋಪ ಹೊರಿಸಿತ್ತು. ಗುರುವಾರ ಸಂಸತ್‌ ಕಲಾಪದಲ್ಲಿ ವಿರೋಧಪಕ್ಷಗಳು ಒಗ್ಗಟ್ಟಾಗಿ, ಹಿಂಡೆನ್‌ಬರ್ಗ್‌ ವರದಿಯ ಕುರಿತಾಗಿ ಚರ್ಚೆ ನಡೆಸುವಂತೆ ಆಗ್ರಹ ಮಾಡಿದವು. ಸಂಸತ್‌ ಕಲಾಪಕ್ಕೆ ಕೂಡ ಈ ಗಲಾಟೆಯಿಂದ ಅಡ್ಡಿಯಾಯಿತು. ಸಾಕಷ್ಟು ವಿರೋಧ ಪಕ್ಷಗಳ ನಾಯಕರು ಗುರುವಾರ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಭೇಟಿಯಾಗಿ, ಕಲಾಪದಲ್ಲಿ ಈ ವಿಚಾರವನ್ನು ಹೇಗೆ ಮುನ್ನಲೆಗೆ ತರಬೇಕು ಎನ್ನುವ ನಿಟ್ಟಿನಲ್ಲಿ ಯೋಜನೆ ರೂಪಿಸಿದವು. ಇಡೀ ವಿವಾದದ ಬಗ್ಗೆ ಅಮೂಲಾಗ್ರವಾಗಿ ತನಿಖೆ ನಡೆಸಲು  ಜಂಟಿ ಸಂಸದೀಯ ಸಮಿತಿಯನ್ನು (ಜೆಪಿಸಿ) ಸ್ಥಾಪಿಸಲು ಪ್ರತಿಪಕ್ಷಗಳು ಒತ್ತಾಯಿಸಬೇಕು ಎಂದು ಹಲವಾರು ನಾಯಕರು ಅಭಿಪ್ರಾಯಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಂಸತ್ತಿನಲ್ಲಿ ಬಿಜೆಪಿಯ ಸಂಖ್ಯಾಬಲದ ಆಧಾರದ ಮೇಲೆ ಜೆಪಿಸಿ ರಚನೆಯು ಆಡಳಿತದ ಪರವಾಗಿ ವಾಲುತ್ತದೆ ಎಂದು ಭಾವಿಸಿದ ಕೆಲವು ನಾಯಕರು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖಾ ಸಮಿತಿ ರಚನೆ ಮಾಡುವ ಪರವಾಗಿದ್ದಾರೆ.

ಸಮಾಜವಾದಿ ಪಕ್ಷದ ರಾಮ್‌ಗೋಪಾಲ್‌ ಯಾದವ್‌, ತೃಣಮೂಲ ಕಾಂಗ್ರೆಸ್‌ ಪಕ್ಷದ ಡರೇಕ್‌ ಓಬ್ರಿಯಾನ್,‌ ಎನ್‌ಸಿಪಿಯ ವಂದನಾ ಚೌಹಾಣ್‌, ಶಿವಸೇನೆ ಉದ್ಧವ್‌ ಠಾಕ್ರೆ ಘಟಕದ ಸಂಜಯ್‌ ರಾವುತ್‌, ಡಿಎಂಕೆ ಪಕ್ಷದ ಕನಿಮೋಳಿ, ಸಿಪಿಎಂನ ಎಲಾಮಾರಮ್‌ ಕರೀಮ್‌, ಆಪ್‌ನ ಸಂಜಯ್‌ ಸಿಂಗ್‌ ಹಾಗೂ ಸಿಪಿಐನ ಬಿನೋಯ್‌ ವಿಶ್ವಮ್‌ ಸಭೆಯಲ್ಲಿ ಹಾಜರಿದ್ದರು.

ವಿರೋಧ ಪಕ್ಷಗಳು ಅದಾನಿ ಗ್ರೂಪ್‌ನ ಮೇಲೆ ಹೊರಿಸಲಾಗಿರುವ ಆರೋಪಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಸಬೇಕು ಎಂದು ಆಗ್ರಹ ಮಾಡಿದ ಬೆನ್ನಲ್ಲಿಯೇ ರಾಜ್ಯಸಭೆಯ ಬಜೆಟ್‌ ಅಧಿವೇಶನದ ಮೂರನೇ ದಿನ ಮುಂದೂಡಿಕೆಯಾಯಿತು. ಬೆಳಗ್ಗೆ 11 ಗಂಟೆಗೆ ಆರಂಭವಾದ ಕಲಾಪ ಹೆಚ್ಚು ಹೊತ್ತು ನಡೆಯಲಿಲ್ಲ.

ರಾಜ್ಯಸಭೆಯ ಸಭಾಪತಿ ಜಗದೀಪ್ ಧನ್‌ಕರ್‌  ಒಂಬತ್ತು ವಿರೋಧ ಪಕ್ಷದ ಸಂಸದರಾದ ಮಲ್ಲಿಕಾರ್ಜುನ ಖರ್ಗೆ,  ಪ್ರಿಯಾಂಕಾ ಚತುರ್ವೇದಿ, ಬಿನೋಯ್ ವಿಶ್ವಂ, ಎ ಎ ರಹೀಮ್, ಎ ಕರೀಂ, ಸಂಜಯ್ ಸಿಂಗ್, ಕೆ ಕೇಶವ್ ರಾವ್, ಪಿ ಸಂತೋಷ್ ಕುಮಾರ್‌ ಹಾಗೂ ತಿರುಚಿ ಶಿವ ಅವರು ನೀಡಿದ ನಿಯಮ 267 ರ ಅಡಿಯಲ್ಲಿ ನೀಡಲಾದ ನೋಟಿಸ್‌ಗಳನ್ನು ಉದ್ದೇಶಿಸಿ ಮೇಲ್ಮನೆಯ ಬೆಳಿಗ್ಗೆ ಅಧಿವೇಶನವನ್ನು ಪ್ರಾರಂಭಿಸಿದರು.

ಎಲ್‌ಐಸಿ, ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಳ್ಳುವ ಮತ್ತು ಕೋಟಿಗಟ್ಟಲೆ ಭಾರತೀಯರ ಉಳಿತಾಯವನ್ನು ಅಪಾಯವನ್ನುಂಟುಮಾಡುವ ಕಂಪನಿಗಳಲ್ಲಿನ ಹೂಡಿಕೆಯ ಸಮಸ್ಯೆಯನ್ನು ಚರ್ಚಿಸಲು ಈ ಸದನವು ಶೂನ್ಯ ಸಮಯ ಮತ್ತು ಪ್ರಶ್ನೋತ್ತರ ಸಮಯ ಮತ್ತು ದಿನದ ಇತರ ವ್ಯವಹಾರಗಳಿಗೆ ಸಂಬಂಧಿಸಿದ ನಿಯಮಗಳನ್ನು ಅಮಾನತುಗೊಳಿಸುತ್ತದೆ ಎಂದು ಖರ್ಗೆ ಅವರ ನೋಟೀಸ್ ಹೇಳಿದೆ.

ಒಂದೇ ಒಂದು ರಿಪೋರ್ಟ್‌, 1.44 ಲಕ್ಷ ಕೋಟಿ ಕಳೆದುಕೊಂಡ ಗೌತಮ್‌ ಅದಾನಿ!

ರಾಜ್ಯಸಭೆಯ 267ರ ನಿಯಮದ ಅನುಸಾರ, ರಾಷ್ಟ್ರೀಯ ಪ್ರಾಮುಖ್ಯತೆ ಪಡೆದ ವಿಚಾರಗಳ ಚರ್ಚೆ ಮಾಡಬೇಕಾದಂಥ ಸಂದರ್ಭದಲ್ಲಿ ದಿನದ ಇತರ ಕಾರ್ಯಕ್ರಮಗಳನ್ನು ರದ್ದು ಮಾಡುವ ಬಗ್ಗೆ ಪ್ರಸ್ತಾಪ ಮಾಡುತ್ತದೆ. ಆದರೆ, ರಾಜ್ಯಸಭೆ ಸಭಾಪತಿ ಜಗದೀಪ್‌ ಧನ್‌ಕರ್‌ ಮಾತ್ರ, ವಿರೋಧ ಪಕ್ಷಗಳು ಹೇಳಿರುವ ವಿಚಾರ ರಾಜ್ಯಸಭೆಯ 267ರ ನಿಯಮಕ್ಕೆ ಬದ್ಧವಾಗಿಲ್ಲ ಎಂದು ಹೇಳಿದರು. ಸಂಸತ್‌ನ ಚಳಿಗಾಲದ ಅಧಿವೇಶನದಲ್ಲೂ ಇದೇ ರೀತಿಯ ಪ್ರಸ್ತಾಪಗಳನ್ನು ಮಾಡಲಾಗಿತ್ತು. ಅದಕ್ಕೂ ಕೂಡ ಯಾವುದೇ ಮಾನ್ಯತೆ ಸಿಕ್ಕಿರಲಿಲ್ಲ ಎಂದು ಹೇಳಿದರು. “ನಿಯಮ 267 ರ ಅನ್ವಯಕ್ಕೆ ಅಗತ್ಯವಾದ ಷರತ್ತುಗಳ ನೆರವೇರಿಕೆಯನ್ನು ನಾನು ಮೊದಲೇ ದೃಢವಾಗಿ ಸೂಚಿಸಿದ್ದೆ. ನಾನು ಸ್ವೀಕರಿಸಿದ ಸೂಚನೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದ್ದೇನೆ ಮತ್ತು ಅವು ಕ್ರಮಬದ್ಧವಾಗಿಲ್ಲ ಎಂದು ಕಂಡುಕೊಂಡಿದ್ದೇನೆ' ಎಂದು ಹೇಳಿದ್ದಾರೆ.

ಹಿಂಡೆನ್‌ಬರ್ಗ್‌ ಎಫೆಕ್ಟ್‌, 8 ಲಕ್ಷ ಕೋಟಿ ನಷ್ಟ ಕಂಡ ಅದಾನಿ ಕಂಪನಿ ಷೇರುಗಳು!


ನೋಟಿಸ್‌ಗಳು ನಿಯಮ 267 ರ ಅಗತ್ಯತೆಗಳನ್ನು ಪೂರೈಸುವುದಿಲ್ಲ ಎಂದು ಧನ್‌ಕರ್‌ ಹೇಳುತ್ತಿದ್ದಂತೆ, ವಿರೋಧ ಪಕ್ಷದ ಸಂಸದರಿಂದ ದೊಡ್ಡ ಆಕ್ರೋಶಗಳು ವ್ಯಕ್ತವಾದವು. ಬಳಿಕ ರಾಜ್ಯಸಭೆ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿರೋಧದ ಮಧ್ಯೆ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಶಂಕು
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌