ಭೂಕುಸಿತ ಪ್ರವಾಹದ ಕಣ್ಮೀರ ಕತೆಗಳು ಮನಕಲುಕುತ್ತಿದೆ. ವಯನಾಡು ಮಾತ್ರವಲ್ಲ, ಹಿಮಾಚಲ ಪ್ರದೇಶದಲ್ಲೂ ಭೀಕರ ಪ್ರವಾಹ ಜನರ ಬದುಕನ್ನೇ ಕಸಿದುಕೊಂಡಿದೆ. ರಾತ್ರಿಯ ಪ್ರವಾಹ ಹಾಗೂ ಭೂಕುಸಿತದಲ್ಲಿ ಸಮೇಜ್ ಗ್ರಾಮ ಸಂಪೂರ್ಣ ಕೊಚ್ಚಿ ಹೋಗಿದೆ. ಆದರೆ ಒಂದು ಕಾಳಿ ಮಾತಾ ಹಾಗೂ ಒಂದು ಮನೆ ಮಾತ್ರ ಉಳಿದುಕೊಂಡಿದೆ.
ಶಿಮ್ಲಾ(ಆ.03) ಕೇರಳದ ವಯನಾಡಿನ ದುರಂತದ ಕಣ್ಣೀರು ಒರೆಸಲು ಸಾಧ್ಯವಾಗುತ್ತಿಲ್ಲ. ನೆರವಿನ ಹಸ್ತ, ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗಿದರೂ ಸಾವಿನ ಸಂಖ್ಯೆ 300 ದಾಟಿದೆ. ನಾಪತ್ತೆ ಸಂಖ್ಯೆ 200ಕ್ಕೂ ಹೆಚ್ಚಿದೆ. ಆಪ್ತರನ್ನು ಕಳೆದುಕೊಂಡು ನೋವು ಮತ್ತೊಂದೆಡೆ. ವಯನಾಡು ಮಾತ್ರವಲ್ಲ, ದೇಶದ ಹಲವು ಭಾಗದಲ್ಲಿ ನಡೆದಿರುವ ಪ್ರವಾಹ ಹಾಗೂ ಭೂಕುಸಿತದ ಪರಿಸ್ಥಿತಿಯೂ ಇದೆ. ಹಿಮಾಚಲ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದ ಸೃಷ್ಟಿಯಾದ ಭೀಕರ ಪ್ರವಾಹ ಹಾಗೂ ಭೂಕುಸಿತದಿಂದ ಹಲವು ಗ್ರಾಮಗಳು ಕೊಚ್ಚಿ ಹೋಗಿದೆ. ಈ ಪೈಕಿ ಸಮೇಜ್ ಗ್ರಾಮ ಸಂಪೂರ್ಣ ಕೊಚ್ಚಿ ಹೋಗಿದೆ. ಈ ಗ್ರಾಮದಲ್ಲಿ ಈಗ ಉಳಿದಿರುವುದು ಒಂದು ದೇವಸ್ಥಾನ ಹಾಗೂ ಒಂದು ಮನೆ ಮಾತ್ರ.
ಶಿಮ್ಲಾ, ಕುಲು ಹಾಗೂ ಮಂಡಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಪ್ರವಾಹಕ್ಕೆ 6 ಜನ ಮೃತಪಟ್ಟಿದ್ದರೆ., 47 ಮಂದಿ ನಾಪತ್ತೆಯಾಗಿದ್ದಾರೆ. ಈ ಪೈಕಿ ನದಿ ತಟದಲ್ಲಿರುವ ಸಮೇಜ್ ಗ್ರಾಮ ಸಂಪೂರ್ಣ ಕೊಚ್ಚಿ ಹೋಗಿದೆ. ಈ ನದಿ ತಟದಲ್ಲಿ ನೂರಾರು ಮನೆಗಳಿತ್ತು. ಬುಧವಾರ ರಾತ್ರಿ ಎಲ್ಲರೂ ಮಲಗಿದ್ದ ವೇಳೆ ಭೀಕರ ಪ್ರವಾಹ ಸೃಷ್ಟಿಯಾಗಿದೆ. ವೇಳೆ ಪ್ರವಾಹದಲ್ಲಿ ಸಮೇಜ್ ಗ್ರಾಮದ ಮನೆಗಳು ಕೊಚ್ಚಿ ಹೋಗಿದೆ. ಈ ಪೈಕಿ ಅನಿತಾ ದೇವಿ ಅನ್ನೋ ಮಹಿಳೆಯ ಒಂದು ಮನೆ ಹಾಗೂ ಭಗವತಿ ಕಾಳಿ ಮಾತಾ ದೇವಸ್ಥಾನ ಮಾತ್ರ ಉಳಿದಿಕೊಂಡಿದೆ. ಘಟನೆಯ ಭೀಕರತೆಯನ್ನು ಬದುಕುಳಿದಿರುವ ಅನಿತಾ ದೇವಿ ವಿವರಿಸಿದ್ದಾರೆ.
ನಿಜವಾಯ್ತು ಮಾನಸಿಕ ಅಸ್ವಸ್ಥನ ಭೂಕುಸಿತ ದುರಂತ ಭವಿಷ್ಯ, ವರ್ಷದ ಹಿಂದಿನ ವಿಡಿಯೋ ವೈರಲ್!
ನಾನು ಹಾಗೂ ನನ್ನ ಕುಟುಂಬ ಮಲಗಿದ್ದೆವು. ಮಧ್ಯ ಬಾರಿ ಭಾರಿ ಶಬ್ದ ಕೇಳಿಸಿತ್ತು. ಈ ವೇಳೆ ಹೊರಗೆ ನೋಡಿದಾಗ ಆಘಾತವಾಗಿತ್ತು. ಇಡೀ ಗ್ರಾಮವೇ ನೀರಿನಲ್ಲಿ ಕೊಚ್ಚಿ ಹೋಗುತ್ತಿತ್ತು. ನಮ್ಮ ಮನೆಯ ಸುತ್ತ ನೀರು ಆಗಮಿಸಿತ್ತು. ತಕ್ಷಣವೇ ಕುಟುಂಬ ಸದಸ್ಯರನ್ನು ಎಬ್ಬಿಸಿ ಪ್ರವಾಹದ ನೀರಿನಲ್ಲಿ ಈಜಿ ಪಕ್ಕದಲ್ಲಿರುವ ಭಗವತಿ ಕಾಳಿ ಮಾತಾ ದೇವಸ್ಥಾನದಲ್ಲಿ ಆಶ್ರಯ ಪಡೆದೆವು. ರಾತ್ರಿ ಇಡೀ ಭಾರಿ ಮಳೆ ಸುರಿಯುತ್ತಿದ್ದರೆ, ನಮಗೆ ಕಾಳಿ ಮಾತೆ ಬಿಟ್ಟರೆ ಬೇರೆ ಯಾರೂ ಇರಲಿಲ್ಲ ಎಂದು ಅನಿತಾ ದೇವಿ ಹೇಳಿದ್ದಾರೆ.
ನನ್ನ ಕಣ್ಣ ಎದುರೇ ಗ್ರಾಮ ಕೊಚ್ಚಿ ಹೋಯಿತು. ಪ್ರಾಣ ಉಳಿಸಿಕೊಳ್ಳಲು ನಾವು ದೇವಸ್ಥಾನದಲ್ಲಿ ಆಶ್ರಯ ಪಡೆದೆವು. ಇದು ಗ್ರಾಮದ ಅಂಚಿನಲ್ಲಿರುವ ದೇವಸ್ಥಾನ. ಇದೀಗ ಸಮೇಜ್ ಗ್ರಾಮದಲ್ಲಿ ನಮ್ಮ ಮನೆ ಮಾತ್ರ ಉಳಿದಿಕೊಂಡಿದೆ. ಈ ದೇವಸ್ಥಾನ ಹಾಗೂ ನಮ್ಮ ಮನೆ ಬಿಟ್ಟರೆ ಇನ್ನೇನು ಉಳಿದಿಲ್ಲ ಎಂದು ಅನಿತಾ ಹೇಳಿದ್ದಾರೆ.
ಇದೇ ಗ್ರಾಮದ ನಿವಾಸಿ ಬಕ್ಷಿ ರಾಮ್ ನೋವು ತೋಡಿಕೊಂಡಿದ್ದಾರೆ. ಕೆಲಸದ ನಿಮಿತ್ತ ನಾನು ರಾಮಪುರ ಗ್ರಾಮದಲ್ಲಿದ್ದೆ. ರಾತ್ರಿ 2 ಗಂಟೆ ವೇಳೆ ಸಮೇಜ್ ಗ್ರಾಮದ ಪ್ರವಾಹದಲ್ಲಿ ಕೋಚ್ಚಿ ಹೋಗಿದೆ ಎಂದು ಮಾಹಿತಿ ತಿಳಿಯಿತು. ಸಮೇಜ್‌ಗೆ ತಲುಪಿದಾಗಿ ಬೆಳಗಿನ ಜಾವ 4 ಗಂಟೆಯಾಗಿತ್ತು. ನನ್ನ ಮನೆ, ಕುಟುಂಬ ಸದಸ್ಯರು ಎಲ್ಲರೂ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ನಮ್ಮ 14 ಕುಟುಂಬ ಸದಸ್ಯರು ಪ್ರವಾಹದಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾರೆ ಎಂದು ಬಕ್ಷಿ ರಾಮ್ ಕಣ್ಣೀರಿಟ್ಟಿದ್ದಾರೆ.
ವಯನಾಡಿನ ಕಲ್ಲು ಮಣ್ಣು ಅವಶೇಷಗಳಡಿ ಉಸಿರಾಡುತ್ತಿದೆ ಜೀವ, ರೇಡಾರ್‌ನಲ್ಲಿ ನಾಡಿಮಿಡಿತ ಪತ್ತೆ!