ಹಿಮಾಚಲ ಪ್ರದೇಶದಲ್ಲಿ ಅಧಿಕಾರದಲ್ಲಿದ್ದರೂ ರಾಜ್ಯಸಭಾ ಚುನಾವಣೆಯಲ್ಲಿ ಏಕೈಕ ಸೀಟನ್ನು ಗೆಲ್ಲಿಸಿ ಕೊಡುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶ ಸಿಎಂ ಸುಖ್ವಿಂದರ್ ಸಿಂಗ್ ಸುಖು ರಾಜೀನಾಮೆ ನೀಡಿದ್ದಾರೆ.
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಅಧಿಕಾರದಲ್ಲಿದ್ದರೂ ರಾಜ್ಯಸಭಾ ಚುನಾವಣೆಯಲ್ಲಿ ಏಕೈಕ ಸೀಟನ್ನು ಗೆಲ್ಲಿಸಿ ಕೊಡುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶ ಸಿಎಂ ಸುಖ್ವಿಂದರ್ ಸಿಂಗ್ ಸುಖು ರಾಜೀನಾಮೆ ನೀಡಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಸೋತ ಹಿನ್ನೆಲೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವಂತೆ ಪ್ರತಿಪಕ್ಷ ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದರು. ಆದರೆ ನಿನ್ನೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಆರು ಶಾಸಕರು ಅಡ್ಡ ಮತದಾನ ಮಾಡಿದ್ದರು. ಹೀಗಾಗಿ ವಿಶ್ವಾಸಮತ ಸಾಬೀತುಪಡಿಸಲೂ ವಿಫಲವಾಗಬಹುದು ಎಂಬ ಸಾಧ್ಯತೆ ಹಿನ್ನೆಲೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವ ಮೊದಲೇ ಸಿಎಂ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
ಸುಖ್ವಿಂದರ್ ಸುಖು ಅವರು ತಮ್ಮ ರಾಜೀನಾಮೆಯನ್ನು ರಾಜ್ಯಪಾಲರಿಗೆ ಹಾಗೂ ಕಾಂಗ್ರೆಸ್ ಹೈಕಮಾಂಡ್‌ಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ. ಇಂದು ಹಿಮಾಚಲ ಪ್ರದೇಶ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿ ಶಾಸಕರು ಸಿಎಂ ಸುಖ್ವಿಂದರ್ ಸಿಂಗ್ ಸುಖು ಬಹುಮತ ಸಾಬೀತುಪಡಿಸುವಂತೆ ಆಗ್ರಹಿಸಿ ಗಲಾಟೆ ಶುರು ಮಾಡಿದ್ದರು. ಬಿಜೆಪಿ ಶಾಸಕರ ಗಲಾಟೆಯ ಹಿನ್ನೆಲೆಯಲ್ಲಿ ವಿಧಾನಸಭಾ ಸ್ಪೀಕರ್ 15 ಬಿಜೆಪಿ ಶಾಸಕರನ್ನು ಸದನದಿಂದ ಉಚ್ಚಾಟನೆ ಮಾಡಿದ್ದರು. ಇದಾಗಿ ಸ್ವಲ್ಪ ಹೊತ್ತಿನಲ್ಲಿ ಸಿಎಂ ಸುಖ್ವೀಂದರ್ ಸಿಂಗ್ ರಾಜೀನಾಮೆ ನೀಡಿದ್ದಾರೆ.
ಸರ್ಕಾರ ಬೀಳುವ ಭೀತಿಯ ನಡುವೆ 15 ಬಿಜೆಪಿ ಶಾಸಕರನ್ನು ಸದನದಿಂದ ಉಚ್ಚಾಟಿಸಿದ ಸ್ಪೀಕರ್
ಕಾಂಗ್ರೆಸ್ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶದಲ್ಲಿ ಇದ್ದ ಏಕೈಕ ರಾಜ್ಯಸಭಾ ಸೀಟನ್ನು ನಿನ್ನೆ ಬಿಜೆಪಿ ಗೆದ್ದಿತ್ತು. ಬಿಜೆಪಿ ಅಭ್ಯರ್ಥಿ ಹರ್ಷ ಮಹಾಜನ್ ಅವರು ಕಾಂಗ್ರೆಸ್ ಅಭ್ಯರ್ಥಿ, ಕಾಂಗ್ರೆಸ್ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರನ್ನು ಸೋಲಿಸಿದ್ದರು. ಕಾಂಗ್ರೆಸ್‌ನ ಆರು ಶಾಸಕರ ಅಡ್ಡಮತದಾನದಿಂದಾಗಿ ಸಿಂಘ್ವಿ ಸೋಲನುಭವಿಸಬೇಕಾಯಿತು. ಹಿಮಾಚಲದಲ್ಲಿ ಆಡಳಿತದಲ್ಲಿರುವ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂಬುದನ್ನು ರಾಜ್ಯಸಭಾ ಚುನಾವಣೆ ಖಚಿತಪಡಿಸಿದೆ ಎಂದ ಠಾಕೂರ್ ಅವರು ಹಿಮಾಚಲ ಸಿಎಂ ಸುಖ್ವೀಂದರ್ ಸಿಂಗ್ ಸುಖು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಇನ್ನೊಂದೆಡೆ ಹಿಮಾಚಲ ಪ್ರದೇಶದ ಸಚಿವ ವಿಕ್ರಮಾದಿತ್ಯ ಸಿಂಗ್ ಅವರ ರಾಜೀನಾಮೆ ನಿರ್ಧಾರವು ಕೂಡ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ತೋರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಹಿಮಾಚಲ ಕಾಂಗ್ರೆಸ್ ಪಕ್ಷವೂ ತನ್ನ ಸರ್ಕಾರವನ್ನು ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದೆ. ರಾಜೀನಾಮೆ ನೀಡಲು ಮುಂದಾಗಿರುವ ವಿಕ್ರಮಾದಿತ್ಯ ಸಿಂಗ್ ಅವರು ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪುತ್ರ ಮತ್ತು ಶಿಮ್ಲಾ ಗ್ರಾಮಾಂತರದ ಶಾಸಕರಾಗಿದ್ದಾರೆ.
ಕಾಂಗ್ರೆಸ್ ಶಾಸಕರ ಅಡ್ಡಮತದಾನ, ಹಿಮಾಚಲ ಪ್ರದೇಶ ರಾಜ್ಯಸಭೆ ಚುನಾವಣೆಯಲ್ಲಿ ಅಭಿಷೇಕ್ ಮನು ಸಿಂಘ್ವಿಗೆ ಸೋಲು!
68 ಸದಸ್ಯ ಬಲದ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್ 40 ಸೀಟುಗಳನ್ನು ಗೆದ್ದು ಬಹುಮತ ಹೊಂದಿತ್ತು. ಬಿಜೆಪಿ 25 ಹಾಗೂ ಇತರರು ಎರಡು ಸೀಟುಗಳನ್ನು ಹೊಂದಿದ್ದರು. ಹಿರಿಯ ವಕೀಲ ಹಾಗೂ ಪಕ್ಷದ ಮುಖಂಡ ಅಭಿಷೇಕ್ ಮನು ಸಿಂಘ್ವಿ ಅವರನ್ನು ಕಾಂಗ್ರೆಸ್ ರಾಜ್ಯಸಭೆಗೆ ಹಿಮಾಚಲದಿಂದ ಅಭ್ಯರ್ಥಿಯಾಗಿ ನಿಲ್ಲಿಸಿತ್ತು. ಆದರೆ ಬಹುಮತವಿದ್ದರು ಅವರು ಸೋತಿದ್ದಾರೆ.