
ಶಿಮ್ಲಾ(ಆ.14): ಹಿಮಾಚಲ ಪ್ರದೇಶದ ಕಿನ್ನೌರ್ ಭೂಕುಸಿತದ ಬೆನ್ನಲ್ಲೇ, ರಾಜ್ಯದ ಲಾಹುಲ್‌ನಲ್ಲಿ ಮತ್ತೊಂದು ಭೂ ಕುಸಿತ ಸಂಭವಿಸಿದೆ. ಗುಡ್ಡ ಕುಸಿದು ಚಿನಾಬ್ ನದಿಯ ಹರಿವಿನ ಮೇಲೆ ಬಿದ್ದ ಪರಿಣಾಮ, ನದಿಯ ಹರಿವಿಗೆ ತಡೆ ಆಗಿದೆ ಹಾಗೂ ಇಡೀ ಪಥದ ಬದಲು ಚಿಕ್ಕ ಪಥದಲ್ಲಿ ನದಿ ಹರಿಯಲು ಆರಂಭಿಸಿದೆ.
ಈ ಘಟನೆ ನಲ್ದಾ ಗ್ರಾಮದ ಬಳಿ ನಡೆದಿದ್ದು, ಚಿನಾಬ್ ನದಿಯ ಹರಿವಿಗೆ ತಡೆಯಾಗಿರುವುದರಿಂದ ಸುತ್ತಲಿನ ಗ್ರಾಮಗಳಿಗೆ ನೀರು ನುಗ್ಗಿದೆ. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ 13 ಗ್ರಾಮಗಳ 2000 ಗ್ರಾಮಸ್ಥರನ್ನು ಸ್ಥಳಾಂತರಿಸಲಾಗಿದೆ. 19 ಜನ ನಾಪತ್ತೆಯಾಗಿದ್ದಾರೆ. ಘಟನೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಳವಳ ವ್ಯಕ್ತಪಡಿಸಿ, ಸಕಲ ರಕ್ಷಣಾ ಕೆಲಸಕ್ಕೆ ಸೂಚಿಸಿದ್ದಾರೆ.
ಹಿಮಾಚಲ: ಹಠಾತ್ ಭೂಕುಸಿತಕ್ಕೆ 13 ಮಂದಿ ಬಲಿ, ಹೆದ್ದಾರಿಯಲ್ಲಿ ಬೆಟ್ಟ ಕುಸಿದು ದುರಂತ!
‘ಶೇ.10-15ರಷ್ಟುನೀರು ಮಾತ್ರ ಚಿನಾಬ್ ನದಿಯ ಒಂದು ಭಾಗದಲ್ಲಿ ಹರಿಯುತ್ತಿದೆ. ಮಿಕ್ಕ ಹರಿವಿನ ಭಾಗವು ಭೂಕುಸಿತದಿಂದ ಬಿದ್ದ ಮಣ್ಣಿನಿಂದ ಮುಚ್ಚಿಹೋಗಿದೆ. ಇದರಿಂದ ನದಿ ನೀರಿನ ಸರಾಗ ಹರಿವಿಗೆ ಅಡ್ಡಿಯಾಗಿ ಹಿನ್ನೀರಿನಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಹೀಗಾಗಿ ನದಿ ದಂಡೆಯಲ್ಲಿರುವ ಊರಿನ ಜನರನ್ನು ಸ್ಥಳಾಂತರ ಮಾಡುವ ಕಾರ್ಯ ಆರಂಭಿಸಿದ್ದೇವೆ. ಸಮೀಕ್ಷೆ ನಡೆಸಲು ಹೆಲಿಕಾಪ್ಟರ್ ಬಳಸುತ್ತಿದ್ದೇವೆ. ಈವರೆಗೆ 13 ಗ್ರಾಮಗಳಿಂದ 2000 ಜನರನ್ನು ಸ್ಥಳಾಂತರ ಮಾಡಲಾಗಿದೆ. 19 ಜನರು ಕಾಣೆಯಾಗಿದ್ದಾರೆ. ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ಆದರೆ ಕೆಲವು ಮನೆಗಳಿಗೆ ಹಾನಿಯಾಗಿದೆ’ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ನಿರ್ದೇಶಕ ಸುದೇಶ್ ಕುಮಾರ್ ಮೋಕ್ತಾ ಹೇಳಿದ್ದಾರೆ.
ಇದೇ ವೇಳೆ, ನದಿಯಲ್ಲಿ ಬಿದ್ದ ಮಣ್ಣಿನ ತೆರವು ಕೆಲಸವೂ ಇನ್ನೊಂದೆಡೆ ಭರದಿಂದ ಸಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ನಡುವೆ, ಕಿನ್ನೌರ್ ಭೂಕುಸಿತನಲ್ಲಿ ರಕ್ಷಣಾ ಕಾರ್ಯ ಶುಕ್ರವಾರವು ಮುಂದುವರೆದಿದೆ. 3 ಶವಗಳು ದೊರೆತಿದ್ದು, ಭೂ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. 13 ಜನರನ್ನು ರಕ್ಷಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ