
ಶಿಮ್ಲಾ (ಮಾ.01): ಸಾಕಷ್ಟು ಗ್ಯಾರಂಟಿಗಳನ್ನು ನೀಡಿ ಆರ್ಥಿಕ ಸಂಕಷ್ಟದಲ್ಲಿರುವ ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರ, ‘ಮುಜರಾಯಿ ಇಲಾಖೆ ಅಡಿ ಬರುವ ದೇವಾಲಯಗಳು ಸರ್ಕಾರದ 2 ಯೋಜನೆಗಳಿಗೆ ದೇಣಿಗೆ ನೀಡಬಹುದು’ ಎಂದು ಕೋರಿಕೆ ಸಲ್ಲಿಸಿದೆ. ಮುಖ್ಯಮಂತ್ರಿ ಸುಖು ಸರ್ಕಾರದ ಈ ಆದೇಶ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಜೊತೆಗೆ ಬಿಜೆಪಿ ಕೆಂಗಣ್ಣಿಗೆ ಕಾರಣವಾಗಿದೆ.
‘ದೇಗುಲಗಳಿಂದ ಸರ್ಕಾರ ಹಣ ಕೇಳುವುದು ಆಘಾತಕಾರಿ. ಹಿಂದಿನ ಯಾವುದೇ ಸರ್ಕಾರವು ಬಜೆಟ್ ಯೋಜನೆಗಳಿಗೆ ದೇವಾಲಯದ ಟ್ರಸ್ಟ್ ನಿಧಿಯನ್ನು ಬಳಸಿಲ್ಲ’ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಕಾಂಗ್ರೆಸ್ ಈ ಆರೋಪ ತಳ್ಳಿಹಾಕಿದೆ. ‘ದೇಗುಲಗಳಿಂದ ಮಾತ್ರವಲ್ಲ. ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ಈ ಯೋಜನೆಗಳಿಗೆ ಎಲ್ಲ ವರ್ಗಗಳಿಂದ ಹಣ ಕೇಳಲಾಗಿದೆ’ ಎಂದು ಸಮರ್ಥಿಸಿದೆ.
ಜನರ ಬಳಿ ಗೃಹಜ್ಯೋತಿ ಹಣ ಕೇಳಿದ್ದಕ್ಕೆ ಸಚಿವ ಕೆ.ಜೆ.ಜಾರ್ಜ್ ಚಾರ್ಜ್!
ಅಧಿಸೂಚನೆ ಏನು?: ಜ.29 ರಂದು ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಅಧಿಸೂಚನೆ ಹೊರಡಿಸಿ, ‘ಹಿಮಾಚಲ ಪ್ರದೇಶ ಹಿಂದೂ ಸಾರ್ವಜನಿಕ ಧಾರ್ಮಿಕ ಸಂಸ್ಥೆಗಳ ದತ್ತಿ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತಿರುವ ವಿವಿಧ ದೇವಾಲಯ ಟ್ರಸ್ಟ್‌ಗಳು ಮುಖ್ಯಮಂತ್ರಿ ಸುಖ ಆಶ್ರಯ ಮತ್ತು ಮುಖ್ಯ ಮಂತ್ರಿ ಸುಖ ಶಿಕ್ಷಾ ಯೋಜನೆಗೆ ದೇಣಿಗೆ ನೀಡಬಹುದು. ಆದರೆ ದೇಣಿಗೆಗೆ ಟ್ರಸ್ಟ್ ಒಪ್ಪಿಗೆ ಕಡ್ಡಾಯ’ ಎಂದು ಹೇಳಿತ್ತು.
ಆರ್ಥಿಕ ಸಂಕಟ: ಹಿಮಾಚಲ ಸರ್ಕಾರ ಸಾಕಷ್ಟು ಉಚಿತ ಗ್ಯಾರಂಟಿ ಯೋಜನೆಗಳಿಗೆ ಹಣ ನೀಡಿ ಹಾಗೂ ಮಳೆಯಂಥ ಪ್ರಾಕೃತಿಕ ವಿಕೋಪಗಳಿಂದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಹೀಗಾಗಿ ಸಿಎಂ ಸುಖವಿಂದರ್ ಸಿಂಗ್ ಸುಖು, ‘ಎಲ್ಲ ಶಾಸಕ, ಸಚಿವರು 2 ತಿಂಗಳ ವೇತನ ಪಡೆಯದೇ ಸರ್ಕಾರದ ಬೊಕ್ಕಸಕ್ಕೆ ನೆರವಾಗಬೇಕು’ ಎಂದು ಸೂಚಿಸಿದ್ದರು.
ಭಾರೀ ಸಾಲದ ಸುಳಿಯಲ್ಲಿ ಹಿಮಾಚಲ ಕೈ ಸರ್ಕಾರ: ಹಿಮಾಚಲ ಪ್ರದೇಶದ ಸಾಲವು 2018 ರಲ್ಲಿ 47,906 ಕೋಟಿ ರು ಇತ್ತು. ಅದು 2023ರಲ್ಲಿ 76,651 ಕೋಟಿ ರು.ಗಳಿಗೆ ಮತ್ತು 2024ಕ್ಕೆ 86,589 ಕೋಟಿ ರು.ಗೆ ಏರಿದೆ. 2025ಕ್ಕೆ ಅದು 1 ಲಕ್ಷ ಕೋಟಿ ರು.ಗೆ ಏರುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ