ಶಿಕ್ಷಣ ಮತ್ತು ಹಿಜಾಬ್ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರೆ ಅದು ಅನ್ಯಾಯ ಮಾಡಿದಂತಾಗುತ್ತದೆ. ಇಸ್ಲಾಂನಲ್ಲಿ ಹಿಜಾಬ್ ಧರಿಸುವುದು ಆಯ್ಕೆಯಲ್ಲ. ಧಾರ್ಮಿಕ ಕಟ್ಟುಪಾಡು ಎಂದು ರಾಷ್ಟ್ರಪ್ರಶಸ್ತಿ ವಿಜೇತ ಮಾಜಿ ನಟಿ ಝೈರಾ ವಾಸಿಮ್ ಹೇಳಿದ್ದಾರೆ.
ಶ್ರೀನಗರ (ಫೆ.21): ಶಿಕ್ಷಣ (Education) ಮತ್ತು ಹಿಜಾಬ್ (Hijab) ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರೆ ಅದು ಅನ್ಯಾಯ ಮಾಡಿದಂತಾಗುತ್ತದೆ. ಇಸ್ಲಾಂನಲ್ಲಿ (Islam) ಹಿಜಾಬ್ ಧರಿಸುವುದು ಆಯ್ಕೆಯಲ್ಲ. ಧಾರ್ಮಿಕ ಕಟ್ಟುಪಾಡು ಎಂದು ರಾಷ್ಟ್ರಪ್ರಶಸ್ತಿ ವಿಜೇತ ಮಾಜಿ ನಟಿ ಝೈರಾ ವಾಸಿಮ್ (Zaira Wasim) ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ (Social Media) ವಿವರವಾದ ಪತ್ರ ಬರೆದಿರುವ ಅವರು, ಕರ್ನಾಟಕ (Karnataka) ಕಾಲೇಜಿನಲ್ಲಿ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರ ಪ್ರವೇಶವನ್ನು ನಿರ್ಬಂಧಿಸಿದ್ದನ್ನು ಖಂಡಿಸಿದ್ದಾರೆ. ‘ದೇಶದಲ್ಲಿ ಹಿಜಾಬ್ ಆಯ್ಕೆಯಾಗಿದೆ ಎನ್ನಲಾಗುತ್ತಿರುವ ಹೇಳಿಕೆಯು ದೋಷಪೂರಿತವಾಗಿದೆ.
ಇಸ್ಲಾಂನಲ್ಲಿ ಹಿಜಾಬ್ ಎನ್ನುವುದು ಆಯ್ಕೆಯಲ್ಲ. ಅದೊಂದು ಹೊಣೆಗಾರಿಕೆ. ಒಬ್ಬ ಮಹಿಳೆ ಹಿಜಾಬ್ ಧರಿಸುತ್ತಾಳೆ ಎಂದರೆ ದೇವರು ಆಕೆಗೆ ನೀಡಿರುವ ಹೊಣೆಯನ್ನು ಪೂರ್ಣಗೊಳಿಸಲು ಧರಿಸುತ್ತಾಳೆ. ಅದನ್ನು ಆಕೆ ಪ್ರೀತಿಯಿಂದಲೇ ಮಾಡುತ್ತಾಳೆ. ನಾನು ಒಬ್ಬ ಮಹಿಳೆಯಾಗಿ ಕೃತಜ್ಞತೆ ಮತ್ತು ವಿನಯದಿಂದ ಹಿಜಾಬ್ ಧರಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.
ಹಿಜಾಬ್ ಮಹಿಳೆಯನ್ನು ಲೈಂಗಿಕ ವಸ್ತುವಾಗಿಸುತ್ತದೆ: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಇಡೀ ದೇಶದಲ್ಲಿ ಕೋಲಾಹಲ ಎದ್ದಿದೆ. ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಬುಧವಾರ ಭೋಪಾಲ್ ಸಂಸದೆ ಸಾಧ್ವಿ ಪ್ರಜ್ಞಾ ಬೆನ್ನಲ್ಲೇ, ಇದೀಗ ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ. ಹಿಜಾಬ್ ಮಹಿಳೆಯರನ್ನು ಲೈಂಗಿಕ ವಸ್ತುಗಳನ್ನಾಗಿ ಮಾಡುತ್ತದೆ ಎಂದು ಅವರು ಹೇಳಿದರು. 7 ನೇ ಶತಮಾನದ ಕಾನೂನುಗಳು 21 ನೇ ಶತಮಾನದಲ್ಲಿ ಏಕೆ ಅನ್ವಯಿಸಬೇಕು? ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯನ್ನು ತಸ್ಲೀಮಾ ಬೆಂಬಲಿಸಿದ್ದಾರೆ.
ಧರ್ಮಕ್ಕಾಗಿ ನಟನೆ ಬಿಟ್ಟ ನಟಿ ಝೈರಾಳಿಂದ ಫ್ಯಾನ್ಸ್‌ಗೆ ಹೊಸ ರಿಕ್ವೆಸ್ಟ್
ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಮತಾಂಧತೆಗೆ ಸ್ಥಾನ ನೀಡಬಾರದು: ಫಸ್ಟ್‌ಪೋಸ್ಟ್ ಡಾಟ್ ಕಾಮ್‌ಗೆ ನೀಡಿದ ಸಂದರ್ಶನದಲ್ಲಿ, ಜಾತ್ಯತೀತ ದೇಶದಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಥಿಗಳಿಗೆ ಡ್ರೆಸ್ ಕೋಡ್ ಅನ್ನು ಕಡ್ಡಾಯಗೊಳಿಸುವ ಹಕ್ಕಿದೆ ಎಂದು ನಾನು ನಂಬುತ್ತೇನೆ ಎಂದು ತಸ್ಲೀಮಾ ಹೇಳಿದ್ದಾರೆ. ಶಾಲೆಗಳು ಮತ್ತು ಕಾಲೇಜುಗಳು ತಮ್ಮ ಧಾರ್ಮಿಕ ಗುರುತನ್ನು ಮನೆಯಲ್ಲಿಯೇ ಇರಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಕೇಳುವುದರಲ್ಲಿ ತಪ್ಪೇನು? ಈ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಮತಾಂಧತೆ, ಮೂಲಭೂತವಾದ ಮತ್ತು ಮೂಢನಂಬಿಕೆಗಳಿಗೆ ಸ್ಥಾನ ನೀಡಬಾರದು. ವೈಯಕ್ತಿಕ ಸ್ವಾತಂತ್ರ್ಯ, ಲಿಂಗ ಸಮಾನತೆ, ಉದಾರವಾದ, ಮಾನವತಾವಾದ ಮತ್ತು ವೈಜ್ಞಾನಿಕ ತತ್ವಗಳನ್ನು ಶಾಲೆಗಳಲ್ಲಿ ಕಲಿಸಬೇಕು ಎಂದು ಹೇಳಿದರು.
ಹಿಜಾಬ್ ಮತ್ತು ಬುರ್ಖಾ ಪದ್ಧತಿಯನ್ನು ಕೂಡಲೇ ನಿಲ್ಲಿಸಬೇಕು: ಹಿಜಾಬ್, ನಿಖಾಬ್ ಮತ್ತು ಬುರ್ಖಾಗಳು ಮಹಿಳೆಯರನ್ನು ಲೈಂಗಿಕ ವಸ್ತುಗಳನ್ನಾಗಿ ಪರಿವರ್ತಿಸುವ ಒಂದೇ ಉದ್ದೇಶವನ್ನು ಹೊಂದಿವೆ ಎಂದು ತಸ್ಲೀಮಾ ಹೇಳಿದ್ದಾರೆ. ಮಹಿಳೆಯರು ಪುರುಷರನ್ನು ಕಂಡರೆ ರೊಚ್ಚಿಗೇಳುವವರಿಂದ ಮರೆಮಾಚಬೇಕು ಎಂಬುದು ಸತ್ಯ ಎಂದರು. ಇದು ತುಂಬಾ ಅವಮಾನಕರವಾಗಿದೆ. ಈ ಪದ್ಧತಿಯನ್ನು ಆದಷ್ಟು ಬೇಗ ನಿಲ್ಲಿಸಬೇಕು. ಹಿಜಾಬ್ ಇಸ್ಲಾಂಗೆ ಸಂಬಂಧಿಸಿದೆ ಅಥವಾ ಇಲ್ಲವೇ ಎಂಬುದು ಸಮಸ್ಯೆಯಲ್ಲ ಎಂದು ತಸ್ಲೀಮಾ ಹೇಳುತ್ತಾರೆ. ನಾವು 21 ನೇ ಶತಮಾನದಲ್ಲಿ ವಾಸಿಸುತ್ತಿದ್ದೇವೆ ಮತ್ತು ಏಳನೇ ಶತಮಾನದಲ್ಲಿ ಮಾಡಿದ ಕಾನೂನುಗಳನ್ನು ಈಗ ಜಾರಿಗೆ ತರಲು ಸಾಧ್ಯವಿಲ್ಲ ಎಂಬುದು ಮುಖ್ಯ ವಿಷಯ. ಇದು ಪ್ರತಿ ಮಹಿಳೆಯ ಆಯ್ಕೆಯಾಗಿರಬೇಕಾಗಿಲ್ಲ. ಕುಟುಂಬ ಸದಸ್ಯರು ಮಹಿಳೆಯರನ್ನು ಹಿಜಾಬ್ ಮತ್ತು ಬುರ್ಖಾ ಧರಿಸುವಂತೆ ಒತ್ತಾಯಿಸುತ್ತಾರೆ ಎಂದು ತಸ್ಲೀಮಾ ಹೇಳಿದ್ದಾರೆ.
Siddaramaiah vs Hindutva ಮೋದಿ ಸರ್ಕಾರದಿಂದ ಕೋಮುವಾದ ಸೃಷ್ಟಿ, ಗುಡುಗಿದ ಸಿದ್ದರಾಮಯ್ಯ!
ಏಕರೂಪ ನಾಗರಿಕ ಸಂಹಿತೆ ಪ್ರತಿಪಾಸಿದ ತಸ್ಲೀಮಾ: ಹಿಜಾಬ್ ವಿವಾದದ ನಡುವೆಯೇ ಏಕರೂಪ ನಾಗರಿಕ ಸಂಹಿತೆಯ ಚರ್ಚೆಯೂ ವೇಗವಾಗಿ ನಡೆಯುತ್ತಿದೆ. ಈ ಕುರಿತು ತಸ್ಲೀಮಾ ಅವರು ಯಾವುದೇ ಜಾತ್ಯತೀತ ದೇಶವು ಏಕರೂಪ ನಾಗರಿಕ ಸಂಹಿತೆಯನ್ನು ಹೊಂದಿರಬೇಕು ಎಂದು ಹೇಳುತ್ತಾರೆ. ಯಾವುದೇ ಸಮುದಾಯಕ್ಕೆ ಪ್ರತ್ಯೇಕ ಕಾನೂನು ಏಕೆ ಬೇಕು? ಮುಖ್ಯವಾಹಿನಿಯ ಭಾಗವಾಗುವುದರ ಮೂಲಕ ಬಡತನ, ಲಿಂಗ ಮತ್ತು ಧಾರ್ಮಿಕ ತಾರತಮ್ಯದ ವಿರುದ್ಧ ಹೋರಾಡಬಹುದು ಎಂಬುದನ್ನು ಮುಸ್ಲಿಮರು ಅರ್ಥಮಾಡಿಕೊಳ್ಳಬೇಕು. ಈ ಹಿಂದೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಕೂಡ ಏಕರೂಪ ನಾಗರಿಕ ಸಂಹಿತೆಯಿಂದ ಮುಸ್ಲಿಮರಿಗೆ ಯಾವುದೇ ಬೆದರಿಕೆ ಇಲ್ಲ ಎಂದು ಹೇಳಿದ್ದರು. ಈ ಬಗ್ಗೆ ಯಾವುದೇ ವದಂತಿಗಳು ಮತ್ತು ತಪ್ಪು ಕಲ್ಪನೆಗಳಿದ್ದರೂ ಅದನ್ನು ಹೋಗಲಾಡಿಸಬೇಕು ಎಂದಿದ್ದಾರೆ.