
ನವದೆಹಲಿ (ಡಿಸೆಂಬರ್ 17, 2023): ಸಂಸತ್ತಿನ ಮೇಲಿನ ಹೊಗೆಬಾಂಬ್ ದಾಳಿಯ ತನಿಖೆಗಾಗಿ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಲಾಗಿದೆ. ಸಮಿತಿ ಶೀಘ್ರ ವರದಿ ಸಲ್ಲಿಸಲಿದ್ದು, ಅದರ ಎಲ್ಲ ಅಂಶಗಳನ್ನು ಸಂಸದರ ಜತೆ ಹಂಚಿಕೊಳ್ಳಲಾಗುತ್ತದೆ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಶನಿವಾರ ಹೇಳಿದ್ದಾರೆ.
ಘಟನೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ಹೇಳಿಕೆ ನೀಡಬೇಕು ಎಂಬ ವಿಪಕ್ಷಗಳ ಸದಸ್ಯರು ಸತತ 2 ದಿನ ಗದ್ದಲ ಎಬ್ಬಿಸಿದ ಬೆನ್ನಲ್ಲೇ ಸ್ಪೀಕರ್ ಈ ಸ್ಪಷ್ಟನೆ ನೀಡಿದ್ದಾರೆ.
ಇದನ್ನು ಓದಿ: ಸಂಸತ್ತಿನ ಭದ್ರತಾ ಲೋಪಕ್ಕೆ ನಿರುದ್ಯೋಗವೇ ಕಾರಣ: ರಾಹುಲ್ ಗಾಂಧಿ
ಈ ಕುರಿತು ಸಂಸತ್ ಸದಸ್ಯರಿಗೆ ಪತ್ರ ಬರೆದಿರುವ ಅವರು, ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ‘ಸಂಸತ್ತಿನ ಸಂಕೀರ್ಣದಲ್ಲಿ ಭದ್ರತೆಯ ವಿವಿಧ ಅಂಶಗಳನ್ನು ಪರಿಶೀಲಿಸಲು ಮತ್ತು ಅಂತಹ ಘಟನೆಗಳು ಮರುಕಳಿಸದಂತಾಗಲು ಬಲವಾದ ಕ್ರಿಯಾ ಯೋಜನೆಯನ್ನು ರೂಪಿಸಲಾಗುವುದು. ಇದಕ್ಕಾಗಿ ನಾನು ಉನ್ನತಾಧಿಕಾರದ ಸಮಿತಿಯನ್ನು ಸಹ ರಚಿಸಿದ್ದೇನೆ. ಭದ್ರತೆ ಬಲಪಡಿಸಲು ಎಲ್ಲ ಪಕ್ಷಗಳ ನಾಯಕರ ಜತೆ ಚರ್ಚಿಸಿದ್ದೇನೆ’ ಎಂದಿದ್ದಾರೆ.
ಆರೋಪಿ ವಶಕ್ಕೆ: ಈ ನಡುವೆ ಸಂಸತ್ ದಾಳಿ ಪ್ರಕರಣದ 6ನೇ ಆರೋಪಿ ಮಹೇಶ್ ಕುಮಾವತ್‌ನನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಈತ ಲಲಿತ್ ಝಾನೊಂದಿಗೆ ಗುರುವಾರವೇ ಶರಣಾಗಿದ್ದರೂ ದೀರ್ಘಕಾಲ ವಿಚಾರಣೆ ನಡೆಸಿ ನಂತರ ಬಂಧಿಸಲಾಗಿದೆ. ಮಹೇಶ್, ರಾಜಸ್ಥಾನದ ನಾಗೌರ್ ನಿವಾಸಿಯಾಗಿದ್ದು, ಸಂಸತ್ ದಾಳಿಯ ಬಳಿಕ ಲಲಿತ್‌ಗೆ ಈತ ತನ್ನ ಮನೆಯಲ್ಲಿ ಆಶ್ರಯ ನೀಡಿದ್ದ. ಅಲ್ಲದೆ ದಾಳಿಕೋರರ ಮೊಬೈಲ್ ನಾಶಪಡಿಸುವಲ್ಲಿ ಈತನೂ ಪಾತ್ರ ವಹಿಸಿದ್ದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಈತನನ್ನು ಪಟಿಯಾಲ ಹೌಸ್ ಆವರಣದಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ 7 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆಯಲಾಯಿತು.
ಸಂಸತ್ ಭವನದಲ್ಲಿ ತಮ್ಮನ್ನು ತಾವೇ ಬೆಂಕಿ ಹಚ್ಚಿಕೊಳ್ಳಲು ಮುಂದಾಗಿದ್ದ ದಾಳಿಕೋರರು!
2014ರಲ್ಲೇ ಕಾಂಬೋಡಿಯಾಗೆ ಹೋಗಿದ್ದ ಮನೋರಂಜನ್
ಡಿಸೆಂಬರ್ 13ರಂದು ಲೋಕಸಭೆಯಲ್ಲಿ ಹೊಗೆಬಾಂಬ್ ದಾಳಿ ನಡೆಸಿದ ಮೈಸೂರಿನ ಮನೋರಂಜನ್ ದೇವರಾಜ್‌ನ ಪೂರ್ವಾಪರ ಇತಿಹಾಸ ಕೆದಕುತ್ತಿರುವ ಪೊಲೀಸರಿಗೆ, ಆತ 2014ರಲ್ಲಿ ಕಾಂಬೋಡಿಯಾಗೆ ಭೇಟಿ ನೀಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
2014ರಲ್ಲಿ ಆತ ಬ್ಯಾಂಕಾಕ್ ಮೂಲಕ ಕಾಂಬೋಡಿಯಾಗೆ ಹೋಗಿದ್ದ ಎಂದು ಆತನ ವಿದೇಶ ಪ್ರಯಾಣ ದಾಖಲೆ ಗಮನಿಸಿದಾಗ ಕಂಡುಬಂದಿದೆ. ಎಂಜಿನಿಯರಿಂಗ್ ಕಲಿಕೆ ನಿಲ್ಲಿಸಿದ ಬಳಿಕ ಆತ, ಯಾವುದೇ ಸಮಾಜ ಸೇವೆಗಾಗಿ ಸ್ವಯಂಸೇವಕನಾಗಿ ಅಲ್ಲಿಗೆ ತೆರಳಿದ್ದ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಇದನ್ನು ಓದಿ: ‘ಹೊಗೆಬಾಂಬ್’ ಬಚ್ಚಿಡಲು ಶೂನಲ್ಲಿ ಕುಳಿ ಮಾಡಿಸಿದ್ದ ದಾಳಿಕೋರರು! ಲಲಿತ್, ಟಿಎಂಸಿ ಮಧ್ಯೆ ನಂಟು: ಬಿಜೆಪಿ ಆರೋಪ
‘ಈ ಬಗ್ಗೆ ಆತನ ಪಾಲಕರು ಕೂಡ ಹೇಳಿಕೆ ನೀಡಿ, ಆತ ಸ್ವಯಂಸೇವಕನಾಗಿ ಕಾಂಬೋಡಿಯಾಗೆ ಹೋಗಿದ್ದ ಎಂದಿದ್ದಾರೆ. ವಿಶ್ವಸಂಸ್ಥೆಯಂಥ ಸಂಸ್ಥೆಯೊಂದು ಕಾಂಬೋಡಿಯಾದಲ್ಲಿ ಸಮಾಜಸೇವಾ ಕಾರ್ಯ ಹಮ್ಮಿಕೊಂಡಿತ್ತು. ಅದರಲ್ಲಿ ಆತ ಭಾಗಿಯಾಗಲು ಅಲ್ಲಿಗೆ ಹೋಗಿದ್ದ ಎಂದು ತಿಳಿದುಬಂದಿದೆ. ಆತನ ವಿದೇಶ ಪ್ರಯಾಣ ಇದೊಂದೇ ಆಗಿದೆ ಆದರೂ ಇನ್ನೊಮ್ಮೆ ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.
ಮನೋಜರಂಜನ್‌ಗೆ ಸಂಸತ್ತಿನಲ್ಲಿ ದಾಳಿ ಎಸಗಲು ಬೇರೆ ಯಾವುದಾದರೂ ಸಂಘಟನೆ, ವ್ಯಕ್ತಿಗಳು ಹಾಗೂ ವಿದೇಶಗಳು ಪ್ರಭಾವ ಬೀರಿದ್ದವಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿ: ‘ಹೊಗೆಬಾಂಬ್’ ಹಿಂದೆ ಬೇರೆ ಮಾಸ್ಟರ್‌ಮೈಂಡ್? ಸಂಸತ್ ದಾಳಿಗೆ ಪ್ಲ್ಯಾನ್ ಬಿ ಸಹ ಯೋಜಿಸಿದ್ದ ದಾಳಿಕೋರರು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ