
ಡೆಹ್ರಾಡೂನ್(ಮೇ.28): ಮೇ 3ರಿಂದ ಆರಂಭವಾದ ಚಾರ್‌ಧಾಮ್ ಯಾತ್ರೆಯಲ್ಲಿ ಈವರೆಗೆ ಒಟ್ಟು 91 ಯಾತ್ರಾರ್ಥಿಗಳು ಸಾವಿಗೀಡಾಗಿದ್ದಾರೆ ಎಂಬ ಕಳವಳಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಕಳೆದ ಎಲ್ಲ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮೃತಪಟ್ಟಯಾತ್ರಾರ್ಥಿಗಳ ಸಂಖ್ಯೆ ಗರಿಷ್ಠವಾಗಿದ್ದು, ಇದಕ್ಕೆ ಕೋವಿಡ್‌ನಿಂದಾಗಿ ತಗ್ಗಿದ ನಿರೋಧಕ ಶಕ್ತಿಯು ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಈ ಮೊದಲು ಚಾರ್‌ಧಾಮ್ ಯಾತ್ರೆಯ ವೇಳೆ 2019ರಲ್ಲಿ 90 ಯಾತ್ರಾರ್ಥಿಗಳು, 2018ರಲ್ಲಿ 102 ಹಾಗೂ 2017ರಲ್ಲಿ 112 ಯಾತ್ರಾರ್ಥಿಗಳು ಮೃತಪಟ್ಟಿದ್ದರು. ಇದು ಏಪ್ರಿಲ್-ಮೇ ಹಾಗೂ ಅಕ್ಟೋಬರ್-ನವೆಂಬರ್ ಎರಡೂ ಅವಧಿಯ ಒಟ್ಟಾರೆ ಯಾತ್ರಾರ್ಥಿಗಳ ಸಾವಿನ ಪ್ರಮಾಣವಾಗಿತ್ತು. ಆದರೆ ಈ ಬಾರಿ ಯಾತ್ರೆ ಆರಂಭವಾಗಿ 1 ತಿಂಗಳು ಕಳೆಯುವ ಮೊದಲೇ 91 ಜನರು ಮೃತಪಟ್ಟಿದ್ದು ತೀವ್ರ ಕಳವಳಕ್ಕೆ ಕಾರಣವಾಗಿದೆ.
ಕಾರಣ ಏನು?:
‘ಈ ಬಾರಿ ಯಾತ್ರೆಯ ವೇಳೆ ಭಕ್ತಾದಿಗಳು ಹೆಚ್ಚಾಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕೋವಿಡ್‌ನಿಂದ ಗುಣವಾದವರು ಯಾತ್ರಿಕರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೋವಿಡ್‌ನಿಂದಾಗಿ ಜನರ ರೋಗ ನಿರೋಧಕ ಶಕ್ತಿಯು ಗಣನೀಯವಾಗಿ ಕ್ಷೀಣಿಸಿದೆ. ಇದು ಕೂಡಾ ಸಾವಿನ ಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗಬಹುದು’ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
‘ಹೀಗಾಗಿ ಈ ಮೊದಲು ಕೋವಿಡ್ ಸೋಂಕಿಗೆ ತುತ್ತಾಗಿದ್ದವರು ಅಥವಾ ಕೋವಿಡ್ ನಂತರವೂ ವಿವಿಧ ಆರೋಗ್ಯ ಸಮಸ್ಯೆ ಹೊಂದಿದವರು ಯಾತ್ರೆ ಮಾಡುವುದು ಸೂಕ್ತವಲ್ಲ. ಅತ್ಯಂತ ಚಳಿ, ಎತ್ತರದ ಪ್ರದೇಶದಲ್ಲಿನ ಆಮ್ಲಜನಕದ ಕೊರತೆಯು ವಿಶೇಷವಾಗಿ ವೃದ್ಧರಿಗೆ ಕೆಲವೊಮ್ಮೆ ಮಾರಣಾಂತಿಕವಾಗಬಹುದು’ ಎಂದು ಸೂಚಿಸಿದ್ದಾರೆ.
ಚಿಕಿತ್ಸೆಗೆ ಹೆಚ್ಚಿನ ವೈದ್ಯರು:
ಈ ನಡುವೆ, ಸಾವಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳಿಗೆ ಚಿಕಿತ್ಸೆ ನೀಡಲು ಹೆಚ್ಚುವರಿ 169 ವೈದ್ಯರನ್ನು ನೇಮಕ ಮಾಡಲಾಗಿದೆ ಎಂದು ಉತ್ತರಾಖಂಡದ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ