
ಕೆವಾಡಿಯಾ(ಗುಜರಾತ್)(ಅ.16): ‘ನ್ಯಾಯದಾನ ವಿಳಂಬವು ದೇಶದ ಜನತೆ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆ’ ಎಂದು ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಸದೃಢ ಮತ್ತು ಸಾಮರಸ್ಯದ ಸಮಾಜಕ್ಕೆ ಸಂವೇದನಾಶೀಲ ನ್ಯಾಯಾಂಗ ವ್ಯವಸ್ಥೆ ಅತ್ಯಂತ ಅಗತ್ಯ ಎಂದು ಪ್ರತಿಪಾದಿಸಿದ್ದಾರೆ. ಜೊತೆಗೆ ಕಾನೂನಿನಲ್ಲಿನ ಅಸ್ಪಷ್ಟತೆಯು ಮತ್ತಷ್ಟುಗೊಂದಲಕ್ಕೆ ಕಾರಣವಾಗುತ್ತದೆ ಎಂದಿರುವ ಪ್ರಧಾನಿ ಮೋದಿ, ‘ಹೊಸ ಕಾನೂನುಗಳನ್ನು ಜನರಿಗೆ ಅರ್ಥವಾಗುವ ರೀತಿಯಲ್ಲಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಬರೆಯಬೇಕು. ಇದು ನ್ಯಾಯಾಂಗ ವ್ಯವಸ್ಥೆಯಲ್ಲಿನ ಸುಧಾರಣೆ ಜೊತೆಗೆ, ಬಡವರು ಕೂಡಾ ಅದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಕಾನೂನಿನ ಭಾಷೆ ಎಂದಿಗೂ ನಾಗರಿಕರಿಗೆ ಅಡ್ಡಗಾಲಾಗಬಾರದು’ ಎಂದು ಹೇಳಿದರು.
ಶನಿವಾರ ಗುಜರಾತ್‌ನ ಕೆವಾಡಿಯಾದಲ್ಲಿ ಆರಂಭವಾದ ರಾಜ್ಯಗಳ ಕಾನೂನು ಸಚಿವರು ಮತ್ತು ಕಾನೂನು ಇಲಾಖೆ ಕಾರ್ಯದರ್ಶಿಗಳ 2 ದಿನಗಳ ಸಮಾವೇಶದಲ್ಲಿ ನರೇಂದ್ರ ಮೋದಿ ಅವರ ವಿಡಿಯೋ ಭಾಷಣವನ್ನು ಪ್ರಸಾರ ಮಾಡಲಾಯಿತು. ‘ಕಳೆದ 8 ವರ್ಷದಲ್ಲಿ ನಮ್ಮ ಸರ್ಕಾರ 1500 ಹಳೆಯ ಮತ್ತು ಬಳಕೆಯಲ್ಲಿಲ್ಲದ ಕಾನೂನುಗಳನ್ನು ರದ್ದು ಮಾಡಿದೆ. ನ್ಯಾಯಾದಾನ ವಿಳಂಬ ದೇಶದ ಜನರ ಅತಿದೊಡ್ಡ ಸಮಸ್ಯೆಯಾಗಿದೆ. ಆದರೆ ನಮ್ಮ ನ್ಯಾಯಾಂಗ ವ್ಯವಸ್ಥೆ ಈ ಸಮಸ್ಯೆಯನ್ನು ಪರಿಹರಿಸಲು ಗಂಭೀರವಾಗಿ ಪ್ರಯತ್ನಿಸುತ್ತಿದೆ. ಈ ಅಮೃತಕಾಲದಲ್ಲಿ ನಾವು ಒಂದಾಗಿ ಈ ಸಮಸ್ಯೆಯನ್ನು ಪರಿಹರಿಸಲು ಮುಂದಾಗಬೇಕು’ ಎಂದು ಪ್ರಧಾನಿ ಮೋದಿ ಕರೆಕೊಟ್ಟರು.
ಪ್ರಧಾನಿ ಮೋದಿ ಒರಿಜಿನಲ್ ಅಲ್ಲ ಡೂಪ್ಲಿಕೇಟ್, ಜೆಡಿಯು ಮುಖ್ಯಸ್ಥ ವಾಗ್ದಾಳಿ!
ಇದೇ ವೇಳೆ, ‘ಪರ್ಯಾಯ ನ್ಯಾಯದಾನ ವ್ಯವಸ್ಥೆ ಮತ್ತು ಲೋಕ ಅದಾಲತ್ ನ್ಯಾಯಾಲಯಗಳ ಹೊರೆಯನ್ನು ಇಳಿಸಿದೆ ಮತ್ತು ಬಡವರಿಗೂ ಸುಲಭವಾಗಿ ನ್ಯಾಯ ಸಿಗುವಂತೆ ಮಾಡಿದೆ’ ಎಂದು ಹೇಳಿದರು.
ಇದೇ ವೇಳೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಾದೇಶಿಕ ಭಾಷೆ ಬಳಕೆಯನ್ನು ಪ್ರತಿಪಾದಿಸಿದ ಮೋದಿ, ನ್ಯಾಯಾಂಗ ವ್ಯವಸ್ಥೆ ಸುಧಾರಣೆಯಲ್ಲಿ ಪ್ರಾದೇಶಿಕ ಭಾಷೆ ಬಳಕೆ ಅತ್ಯಂತ ಪ್ರಮುಖ ಪಾತ್ರ ವಹಿಸಬೇಕು. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನ ಪ್ರಮುಖ ತೀರ್ಪುಗಳು ಎಲ್ಲಾ ಸ್ಥಳೀಯ ಭಾಷೆಯಲ್ಲೂ ಲಭ್ಯವಾಗುವಂತೆ ಮಾಡಬೇಕು. ಇದು ಕಾನೂನಿನ ಕುರಿತು ಜನಸಾಮಾನ್ಯರ ಜ್ಞಾನವನ್ನು ಹೆಚ್ಚಿಸುತ್ತದೆ ಮತ್ತು ಕಾನೂನಿನ ಕಠಿಣ ಭಾಷೆಯ ಕುರಿತ ಭಯವನ್ನು ನಿವಾರಿಸುತ್ತದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ