
ನವದೆಹಲಿ/ ರಾಂಚಿ (ಜನವರಿ 31, 2024): ಭೂ ಅಕ್ರಮ ಪ್ರಕರಣದಲ್ಲಿ ಆರೋಪಿಯಾಗಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಬುಧವಾರ ತಮ್ಮ ನಿವಾಸದಲ್ಲೇ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳಿಂದ ವಿಚಾರಣೆಗೆ ಗುರಿಯಾಗಲಿದ್ದಾರೆ. ಪ್ರಕರಣದಲ್ಲಿ ಸೊರೇನ್ ವಿರುದ್ಧ ಸಾಕಷ್ಟು ಖಚಿತ ಸಾಕ್ಷ್ಯಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಬುಧವಾರದ ವಿಚಾರಣೆ ಬಳಿಕ ಸೊರೇನ್ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಸೊರೇನ್ ಅವರನ್ನು ಇ.ಡಿ. ಅಧಿಕಾರಿಗಳು ಬಂಧಿಸಿದರೆ, ಅವರ ಪತ್ನಿ ಕಲ್ಪನಾ ರಾಜ್ಯದ ನೂತನ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ. ಹಾಲಿ ಮುಖ್ಯಮಂತ್ರಿ ಬಂಧನಕ್ಕೂ ಮುನ್ನ ರಾಜ್ಯಪಾಲರ ಅನುಮತಿ ಪಡೆಯುವುದು ಕಡ್ಡಾಯ. ಈ ಪ್ರಕ್ರಿಯೆಯನ್ನು ಇ.ಡಿ. ಅಧಿಕಾರಿಗಳು ಈಗಾಗಲೇ ಪೂರ್ಣಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ ಬುಧವಾರ ವಿಚಾರಣೆಗೆ ಹಾಜರಾಗುವುದಾಗಿ ಹೇಮಂತ್ ತಿಳಿಸಿದ್ದರೂ ಸೋಮವಾರ ಅವರ ದೆಹಲಿ ನಿವಾಸದ ಮೇಲೆ ದಾಳಿ ನಡೆಸುವ ಅವಶ್ಯಕತೆ ಏನಿತ್ತು ಎಂದು ಜಾರ್ಖಂಡ್ ಮುಕ್ತಿ ಮೋರ್ಚಾದ ನಾಯಕರು ಪ್ರಶ್ನಿಸಿದ್ದಾರೆ.
ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಮಿಸ್ಸಿಂಗ್, ಮಾಹಿತಿ ನೀಡಿದ ಇಡಿ
ನಾಪತ್ತೆ ಆಗಿದ್ದ ಸಿಎಂ ದಿಢೀರ್ ಪ್ರತ್ಯಕ್ಷ:
ಇ.ಡಿ. ಅಧಿಕಾರಿಗಳು ಸೋಮವಾರ ಹೇಮಂತ್‌ರ ದೆಹಲಿ ನಿವಾಸದ ಮೇಲೆ ದಾಳಿ ನಡೆಸಿದ್ದರಾದರೂ ಅವರು ಪತ್ತೆಯಾಗಿರಲಿಲ್ಲ. ಈ ದಾಳಿ ವೇಳೆ 36 ಲಕ್ಷ ರೂ. ನಗದು, ಒಂದು ಬಿಎಂಡಬ್ಲ್ಯು ಕಾರು ಮತ್ತು ಹಗರಣಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಆದಾದ ಬಳಿಕ ಸುಮಾರು 30 ಗಂಟೆ ಕಾಲ ಹೇಮಂತ್ ಸುಳಿವೇ ಸಿಕ್ಕಿರಲಿಲ್ಲ. ಹೀಗಾಗಿ ಅವರು ವಿದೇಶಕ್ಕೆ ಪರಾರಿಯಾಗಬಹುದು ಎಂಬ ಕಾರಣಕ್ಕೆ ಇ.ಡಿ. ಅಧಿಕಾರಿಗಳು ವಿಮಾನ ನಿಲ್ದಾಣಗಳಿಗೆ ಅಲರ್ಟ್ ನೀಡಿದ್ದರು.
ಆದರೆ ಮಂಗಳವಾರ ಮಧ್ಯಾಹ್ನ ದಿಢೀರ್ ರಾಂಚಿಯಲ್ಲಿ ಕಾಣಿಸಿಕೊಂಡ ಹೇಮಂತ್, ಪಕ್ಷದ ಶಾಸಕರು, ನಾಯಕರ ಜೊತೆ ಸಭೆ ನಡೆಸಿದರು. ಈ ಸಭೆಯಲ್ಲಿ ಹೇಮಂತ್‌ರ ಪತ್ನಿ ಕೂಡಾ ಭಾಗಿಯಾಗಿದ್ದರು. ಈ ಸಭೆಯಲ್ಲಿನ ರಾಜ್ಯದ ಪ್ರಸಕ್ತ ರಾಜಕೀಯ ಸನ್ನಿವೇಶ, ಮುಂದೆ ಎದುರಾಗಬಹುದಾದ ಸನ್ನಿವೇಶದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಪತ್ನಿಗೆ ಸಿಎಂ ಪಟ್ಟ?:
ಒಂದು ವೇಳೆ ಹೇಮಂತ್ ಅವರನ್ನು ಇ.ಡಿ. ಅಧಿಕಾರಿಗಳು ಬಂಧಿಸಿದರೆ, ರಾಜ್ಯದ ನೂತನ ಮುಖ್ಯಮಂತ್ರಿಯನ್ನಾಗಿ ಹೇಮಂತ್‌ರ ಪತ್ನಿ ಕಲ್ಪನಾ ಅವರನ್ನು ಆಯ್ಕೆ ಮಾಡುವುದು ಬಹುತೇಕ ಖಚಿತ ಎನ್ನಲಾಗಿದೆ.
ಇಂದು ವಿಚಾರಣೆ:
ವಿಚಾರಣೆಗೆ ಹಾಜರಾಗುವಂತೆ ನೀಡಿದ್ದ 9 ಸಮನ್ಸ್ ಅನ್ನು ಕಡೆಗಣಿಸಿದ್ದ ಸಿಎಂ ಹೇಮಂತ್ ಮನೆಗೆ ಇತ್ತೀಚೆಗೆ ಭೇಟಿ ನೀಡಿದ್ದ ಅಧಿಕಾರಿಗಳು ಕೆಲ ಕಾಲ ವಿಚಾರಣೆ ನಡೆಸಿ ತೆರಳಿದ್ದರು. ಬಾಕಿ ಪ್ರಶ್ನೆಗಳಿಗೆ ಉತ್ತರ ಪಡೆಯುವ ಸಲುವಾಗಿ ನೀಡಿದ್ದ ನೋಟಿಸ್‌ಗೆ ಜನವರಿ 31ರಂದು ಮಧ್ಯಾಹ್ನ 1 ಗಂಟೆಯ ಬಳಿಕ ತಾವು ವಿಚಾರಣೆಗೆ ಒಳಪಡಿಸಲು ಸಿದ್ಧರಿರುವುದಾಗಿ ಹೇಮಂತ್ ತಿಳಿಸಿದ್ದಾರೆ. ಹೀಗಾಗಿ ಇ.ಡಿ. ಅಧಿಕಾರಿಗಳ ತಂಡ ಬುಧವಾರ ಮಧ್ಯಾಹ್ನ 1 ಗಂಟೆಗೆ ಹೇಮಂತ್ ಅವರ ಮನೆಗೆ ತೆರಳಿ ವಿಚಾರಣೆ ನಡೆಸಲಿದೆ. ಬಳಿಕ ಅವರನ್ನು ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಬಂಧನಕ್ಕೆ ಒಳಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ದೇಶದ ಅತಿ ದೊಡ್ಡ ಐಟಿ ರೇಡ್: ಕಾಂಗ್ರೆಸ್ ಸಂಸದನ ಬಳಿ 290 ಕೋಟಿ ರೂ; ಇನ್ನೂ ಸಿಗುತ್ತಲೇ ಇದೆ ಕಂತೆ ಕಂತೆ ನೋಟು!
ನಿಷೇಧಾಜ್ಞೆ:
ಜ.31ರಂದು ಹೇಮಂತ್ ವಿಚಾರಣೆ ನಡೆಯಲಿರುವ ಹಿನ್ನೆಲೆಯಲ್ಲಿ ರಾಜಧಾನಿ ರಾಂಚಿಯ ಆಯಕಟ್ಟಿನ ಸ್ಥಳಗಳು, ಸಿಎಂ ಮನೆಯ ಸುತ್ತಮತ್ತಲು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಎಲ್ಲೆಡೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.
ಏನಿದು ಪ್ರಕರಣ?
ರಾಜಧಾನಿ ರಾಂಚಿಯಲ್ಲಿ ಸೇನೆಗೆ ಸೇರಿದ ನೂರಾರು ಕೋಟಿ ರೂ. ಬೆಲೆ ಬಾಳುವ ಸುಮಾರು 7 ಎಕರೆ ಭೂಮಿಯನ್ನು ಅಕ್ರಮ ದಾಖಲೆ ಸೃಷ್ಟಿಸುವ ಮೂಲಕ ಕಬಳಿಸಿದ ಆರೋಪ ಮುಖ್ಯಮಂತ್ರಿ ಸೊರೇನ್ ಮೇಲಿದೆ. ಈ ಪ್ರಕರಣದಲ್ಲಿ ಐಎಎಸ್ ಅಧಿಕಾರಿಗಳು ಸೇರಿದಂತೆ 14 ಜನರನ್ನು ಈಗಾಗಲೇ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ನಡೆದ ಅಕ್ರಮ ಹಣದ ವಹಿವಾಟು ತನಿಖೆಯನ್ನು ಇ.ಡಿ. ನಡೆಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ