ದೇಶಾದ್ಯಂತ ಮಳೆಯ ಅಬ್ಬರ, ಗುಜರಾತ್‌ನಲ್ಲಿ 65 ಸಾವು, ಆಂಧ್ರ-ಛತ್ತೀಸ್‌ಗಢ ಸಂಪರ್ಕ ಕಡಿತ!

By Santosh NaikFirst Published Jul 12, 2022, 5:54 PM IST
Highlights

ದೇಶಾದ್ಯಂತ ಮಾನ್ಸೂನ್‌ ತನ್ನ ಅಬ್ಬರ ಆರಂಭಿಸಿದೆ. ರಾಷ್ಟ್ರದ 25 ರಾಜ್ಯಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಗುಜರಾತ್‌ನ ರಾಜ್ಯವೊಂದರಲ್ಲೇ 65 ಜನರು ಮಳೆಯಿಂದಾಗಿ ಸಾವು ಕಂಡಿದ್ದಾರೆ. ಇನ್ನೊಂದೆಡೆ ಅಂಧ್ರ ಪ್ರದೇಶ ಹಾಗೂ ಛತ್ತೀಸ್‌ಗಢ ನಡುವಿನ ಸಂಪರ್ಕ ಕಡಿತಗೊಂಡಿದೆ.
 

ನವದೆಹಲಿ(ಜುಲೈ 12): ಮಾನ್ಸೂನ್‌ ಮಾರುತಗಳು ದೇಶದಲ್ಲಿ ತನ್ನ ಅಬ್ಬರ ಆರಂಭಿಸಿದೆ. ದೇಶದ 25 ರಾಜ್ಯಗಳಲ್ಲಿ ಈಗಾಗಲೇ ನಿರಂತರವಾಗಿ ಮಳೆಯಾಗುತ್ತಿದ್ದು, ಗುಜರಾತ್‌ ರಾಜ್ಯದಲ್ಲಿ ಅತೀವವಾಗಿ ಮಳೆಯಾಗುತ್ತಿದೆ. ಪ್ರವಾಹ ಹಾಗೂ ನಿರಂತರ ಮಳೆಯಲ್ಲಿ ಕಳೆದ 24 ಗಂಟೆಯಲ್ಲಿ ಮತ್ತೆ 7 ಮಂದಿ ಸಾವಿಗೀಡಾಗಿದ್ದು, ಕಳೆದ ಎರಡು ದಿನಗಳಲ್ಲಿ ಗುಜರಾತ್‌ನಲ್ಲಿ ಒಟ್ಟಾರೆ 65 ಮಂದಿ ಸಾವು ಕಂಡಿದ್ದಾರೆ. ಭಾನುವಾರ ರಾತ್ರಿಯ ಸಮಯವೊಂದರಲ್ಲೇ ಅಹಮದಾಬಾದ್‌ನಲ್ಲಿ 219ಮಿಲಿಮೀಟರ್‌ ಮಳೆಯಾಗಿದೆ. ಸೂರತ್‌ ಸೇರಿದಂತೆ 6 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಇದರ ನಡುವೆ ರಾಜ್‌ಕೋಟ್‌ನಲ್ಲೂ ಭಾರಿ ಮಳೆಯಿಂದಾಗಿ ಪ್ರವಾಹದ ರೀತಿಯ ವಾತಾವರಣ ಸೃಷ್ಟಿಯಾಗಿದೆ. ಖಾಸಗಿ ಆಆಸ್ಪತ್ರೆಯ ಬೇಸ್‌ಮೆಂಟ್‌ಗೆ ಮಳೆ ನೀರು ನುಗ್ಗಿದ್ದರಿಂದ ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಸ್ಥಳದಿಂದ ಶಿಫ್ಟ್‌ ಕೂಡ ಮಾಡಲಾಗಿದೆ. ಮಧ್ಯಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳು ಸೋಮವಾರ ಸಾಕಷ್ಟು ಮಳೆ ಕಂಡಿವೆ. ಮಧ್ಯಪ್ರದೇಶದ ಭೋಪಾಲ್‌, ಇಂದೋರ್‌ ಹಾಗೂ ಜಬಲ್ಪುರ ಸೇರಿದಂತೆ 33 ಜಿಲ್ಲೆಗಳಿಗೆ ಹವಮಾನ ಇಲಾಖೆ ಭಾರೀ ಮಳೆಯ ಎಚ್ಚರಿಕೆ ನೀಡಿದೆ. ಅದರೊಂದಿಗೆ ಬಿಹಾರ, ಜಾರ್ಖಂಡ್‌, ಉತ್ತರ ಪ್ರದೇಶದಲ್ಲೂ ಭಾರೀ ಮಳೆಯಾಗುತ್ತಿದ್ದು, ಮುಂದಿನ ನಾಲ್ಕು ದಿನಗಳ ಕಾಲ ಮಳೆಯ ಅಬ್ಬರ ಮುಂದುವರಿಯಲಿದೆ ಎನ್ನಲಾಗಿದೆ.

ಇನ್ನು ಮುಂಬೈನಲ್ಲಿ ಭಾರೀ ಮಳೆಯ ಕಾರಣದಿಂದಾಗಿ ಸಮುದ್ರತೀರದ ಬೃಹದಾಕಾರದ ಅಲೆಗಳು ದಡಕ್ಕೆ ಅಪ್ಪಳಿಸಿವೆ. ಇನ್ನೂ ಛತ್ತೀಸ್‌ಗಢದಲ್ಲೂ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾರಣದಿಂದಾಗಿ ಆಂಧ್ರಪ್ರದೇಶ ಹಾಗೂ ಛತ್ತೀಸ್‌ಗಢ ನಡುವಿನ ಸಂಪರ್ಕ ಕಡಿತಗೊಂಡಿದೆ.

| Gujarat: Heavy rain causes a flood-like situation in Rajkot. Residents living in the lower reaches have been asked to remain alert. pic.twitter.com/TBg5SFG3Jm

— ANI (@ANI)


ಗುಜರಾತ್‌ನಲ್ಲಿ 9 ಸಾವಿರ ಜನರ ಸ್ಥಳಾಂತರ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ತವರು ರಾಜ್ಯ ಗುಜರಾತ್‌ನಲ್ಲಿ (Gujarat ) ಕಳೆದ ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ವಸತಿ ಪ್ರದೇಶಗಳು ಹಾಗೂ ರಸ್ತೆಗಳಲ್ಲಿ ನೀರು ತುಂಬಿಕೊಂಡಿದೆ. ಸೋಮವಾರ ಇಡೀ ರಾಜ್ಯದ ಬಹುತೇಕ ಜಿಲ್ಲೆಗಳ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿತ್ತು. ರಾಜ್ಯ ವಿಪತ್ತು ನಿರ್ವಹಣೆ ಸಚಿವ ರಾಜೇಂದ್ರ ತ್ರಿವೇದಿ ಮಾತನಾಡಿದ್ದು, ಇದುವರೆಗೆ 9000 ಜನರನ್ನು ಸ್ಥಳಾಂತರ ಮಾಡಲಾಗಿದ್ದು, 468 ಜನರನ್ನು ರಕ್ಷಣೆ ಮಾಡಲಾಗಿದೆ. ಭಾರೀ ಮಳೆಯಾಗುವ ಸಾಧ್ಯತೆಯಿರುವುದರಿಂದ ಸೂರತ್ ಸೇರಿದಂತೆ 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ 13 ಅಣೆಕಟ್ಟುಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇಲ್ಲಿ ಎನ್‌ಡಿಆರ್‌ಎಫ್ ಸೇರಿದಂತೆ ಕೋಸ್ಟ್ ಗಾರ್ಡ್‌ಗೂ ಎಚ್ಚರಿಕೆ ನೀಡಲಾಗಿದೆ.

ಮಧ್ಯಪ್ರದೇಶಕ್ಕೆ (MP) ಆರೆಂಜ್‌ ಅಲರ್ಟ್‌: ಭೋಪಾಲ್, ನರ್ಮದಾಪುರಂ, ಇಂದೋರ್, ಶಹದೋಲ್ ವಿಭಾಗಗಳು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿರುವುದರಿಂದ ಹವಾಮಾನ ಇಲಾಖೆ ಮಂಗಳವಾರ ಆರೆಂಜ್ ಅಲರ್ಟ್ (Orenge Alert) ಘೋಷಿಸಿದೆ. ಮಂಗಳವಾರ ಬೆಳಗ್ಗೆಯಿಂದ ಭೋಪಾಲ್‌ನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಭಾನುವಾರ ಹಾಗೂ ಸೋಮವಾರ ಇಡೀ ಮಧ್ಯಪ್ರದೇಶದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಮಳೆಯಾಗಿದೆ.

 

ಇದನ್ನೂ ಓದಿ: ಇಂದೂ ಕರಾವಳಿ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌: ಉ.ಕ, ದ.ಕ, ಉಡುಪಿಯಲ್ಲಿ ಭಾರೀ ಮಳೆ

ರಾಜಸ್ಥಾನಕ್ಕೆ ಎಚ್ಚರಿಕೆ:
ಹವಾಮಾನ ಇಲಾಖೆ (IMD) ಪ್ರಕಾರ, ಮಾನ್ಸೂನ್ ಮಾರುತವು ರಾಜ್ಯದ ಬಿಕಾನೇರ್ ಮತ್ತು ಸಿಕರ್ ಮೂಲಕ ಹಾದು ಹೋಗುತ್ತಿದೆ. ಇದರಿಂದ ಕಡಿಮೆ ಒತ್ತಡದ ಪ್ರದೇಶ ಉಂಟಾಗಿರುವ ಪರಿಣಾಮ ದಕ್ಷಿಣ ರಾಜಸ್ಥಾನ ಹಾಗೂ ವಾಯವ್ಯ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ರಾಜ್ಯದ ಪಾಲಿ, ಜಾಲೋರ್, ಬಾರ್ಮರ್, ಜೈಸಲ್ಮೇರ್ ನಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ಅಪಾಯದ ಸೂಚನೆ ನೀಡಿದ ಗೋದಾವರಿ: ಮುಂಬೈ, ನಾಸಿಕ್, ಗಡ್ಚಿರೋಲಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ಗೋದಾವರಿ ಸೇರಿದಂತೆ ಇತರೆ ನದಿಗಳು ಉಕ್ಕಿ ಹರಿಯುತ್ತಿವೆ. ಗೋದಾವರಿ ನದಿ ತೀರದ ಹಲವು ದೇವಾಲಯಗಳು ಮುಳುಗಡೆಯಾಗಿವೆ. ನಾಸಿಕ್‌ನಲ್ಲಿ ಮೂವರು ನಾಪತ್ತೆಯಾಗಿದ್ದಾರೆ. ಮಹಾರಾಷ್ಟ್ರದ ರತ್ನಗಿರಿ ಸೇರಿದಂತೆ 4 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಇದನ್ನೂ ಓದಿ: ಘಟ್ಟಪ್ರದೇಶಗಳಲ್ಲಿ ಭಾರೀ ಮಳೆ: 4 ಪ್ರಮುಖ ಘಾಟಿ ರಸ್ತೆಗಳು ಅಪಾಯದಲ್ಲಿ..!

ಬಿಸಿಲಿನಿಂದ ಬಚಾವ್‌ ಆದ ದೆಹಲಿ:
ಸೋಮವಾರ ದೆಹಲಿಯಲ್ಲಿ ಸಾಧಾರಣ ಮಳೆಯಾಗಿದೆ. ಇದರಿಂದಾಗಿ ದೆಹಲಿಯ ಜನರು ಬಿಸಿಲಿನಿಂದ ಪರಿಹಾರವನ್ನು ಪಡೆದರು. ಜೂನ್ 30 ರಂದು ನೈಋತ್ಯ ಮುಂಗಾರು ಇಲ್ಲಿಗೆ ಅಪ್ಪಳಿಸಿತ್ತು.ಆ ದಿನ 24 ಗಂಟೆಗಳಲ್ಲಿ 117.2 ಮಿಮೀ ಮಳೆ ಸುರಿದಿದೆ. ಜುಲೈ 6ರಂದು ಆರೆಂಜ್ ಅಲರ್ಟ್ ಕೂಡ ನೀಡಲಾಗಿತ್ತು. ಬಿಹಾರ ಮತ್ತು ಉತ್ತರ ಪ್ರದೇಶ. ಜೂನ್ ಕೊನೆಯ ವಾರದಲ್ಲಿ ಮಾನ್ಸೂನ್ ಅಪ್ಪಳಿಸಿತ್ತು. ಆದರೆ ಒಂದು ಅಥವಾ ಎರಡು ದಿನ ಮಳೆಯಾದರೂ ಮೋಡಗಳು ಮತ್ತೆ ಬಂದಿರಲಿಲ್ಲ. ತೇವಾಂಶ ಹಾಗೂ ಸುಡು ಬಿಸಿಲಿನಿಂದ ಎರಡೂ ರಾಜ್ಯಗಳ ಜನ ಕಂಗಾಲಾಗಿದ್ದಾರೆ. ಹವಾಮಾನ ಇಲಾಖೆ ಪ್ರಕಾರ 3-4 ದಿನಗಳ ನಂತರ ಮಳೆಯಾಗುವ ಸಾಧ್ಯತೆ ಇದೆ.

click me!