
ನವದೆಹಲಿ (ಸೆ.23) ಬಂಗಾಳಕೊಲ್ಲಿಯಲ್ಲಿ ಸಂಭವಿಸಿರುವ ವಾಯುಭಾರ ಕುಸಿತದಿಂದ ಸೈಕ್ಲೋನ್ ಸೃಷ್ಟಿಯಾಗಿದೆ. ಇದರ ಬೆನ್ನಲ್ಲೇ ಹವಾಮಾನ ಇಲಾಖೆ ಮಹತ್ವದ ಎಚ್ಚರಿಕೆ ನೀಡಿದೆ. ದಕ್ಷಿಣ ಒಡಿಶಾ ಹಾಗೂ ಉತ್ತರ ಆಂಧ್ರ ಪ್ರದೇಶಗಳಿಗೆ ಚಂಡಮಾರುತ ಅಪ್ಪಳಿಸಲಿದೆ. ಪರಿಣಾಮ ಭಾರಿ ಗಾಳಿ ಮಳೆ ಸಂಭವಿಸಲಿದೆ. ಹೀಗಾಗಿ ಒಡಿಶಾದ ಕರಾವಳಿ ಭಾಗದ ಶಾಲಾ ಕಾಲೇಜುಗಳಿಗೆ ಇಂದು (ಸೆ.23) ರಜೆ ಘೋಷಿಸಲಾಗಿದೆ. ಇದೇ ವೇಳೆ ದಕ್ಷಿಣ ಒಡಿಶಾ ಹಾಗೂ ಉತ್ತರ ಆಂಧ್ರ ಪ್ರದೇಶದ ಹಲವು ಭಾಗದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ವಾಯುಭಾರ ಕುಸಿತದಿಂದ ಸೃಷ್ಟಿಯಾಗಿರುವ ಅರ್ನಾಬ್ ಸೈಕ್ಲೋನ್ ಒಡಿಶಾ ಹಾಗೂ ಆಂಧ್ರ ಪ್ರದೇಶದಲ್ಲಿ ಭಾರಿ ಮಳೆ ಸೃಷ್ಟಿಸಲಿದೆ. ತೆಲಂಗಾಣ, ಛತ್ತೀಸಘಡ, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಎಚ್ಚರಿಸಿದೆ. ಸ್ಲೈಕೋನ್‌ನಿಂದ ಕರ್ನಾಟಕ ಕೆಲ ಭಾಗ ಸೇರಿದಂತೆ 19 ರಾಜ್ಯಗಳಿಗೆ ಮಳೆ ಎಚ್ಚರಿಕೆ ನೀಡಲಾಗಿದೆ. ಆಂಧ್ರ ಪ್ರದೇಶದ 2 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ನೀಡಲಾಗಿದೆ. ಇನ್ನು 6 ರಾಜ್ಯಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಒಡಿಶಾ ಹಾಗೂ ಆಂಧ್ರ ಪ್ರದೇಶದ ಕರಾವಳಿ ತೀರದಲ್ಲಿ ಇಂದು ಭಾರಿ ಮಳೆ ಜೊತೆಗೆ ಗಾಳಿ ವೇಗ 50 ರಿಂದ 60 ಕಿಲೋಮೀಟರ್ ಪ್ರತಿ ಗಂಟೆಗೆ ಇರಲಿದೆ. ಸಂಜೆ ವೇಳೆ ಗಾಳಿ ವೇಗ 70 ಕಿಲೋಮೀಟರ್ ದಾಟಲಿದೆ ಎಂದು ಹಮಾಮಾನ ಇಲಾಖೆ ಎಚ್ಚರಿಸಿದೆ. ಸೆಪ್ಟೆಂಬರ್ 24ರ ಸಂಜೆ ವೇಳೆ ಗಾಳಿ ವೇಗ 75 ಕಿಲೋಮೀಟರ್ ತಲುಪುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.
ಸೈಕ್ಲೋನ್ ಪರಿಣಾಮ ಕರ್ನಾಟದ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇದೇ ವೇಳೆ ಬೆಂಗಳೂರು, ಕೊಡಗು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಸದ್ಯ ರೂಪುಗೊಂಡಿರುವ ಚಂಡಮಾರುತ ಪೂರ್ಣಪ್ರಮಾಣದ ಚಂಡಮಾರುತವಲ್ಲ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಹವಮಾನ ಇಲಾಖೆ ಸೂಚನೆ ಬೆನ್ನಲ್ಲೇ ಒಡಿಶಾದ 11 ಜಿಲ್ಲೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಜನರಿಗೆ ತೀವ್ರ ಎಚ್ಚರಿಕೆವಹಿಸುವಂತೆ ಸೂಚನೆ ನೀಡಲಾಗಿದೆ. ಕರಾವಳಿ ತೀರ ಪ್ರದೇಶ ಹಾಗೂ ಅಪಾಯಾಕಾರಿ ಪ್ರದೇಶದ ಜನರನ್ನು ಸ್ಥಳಾಂತರಿಸಲು ತಯಾರಿ ನಡೆಸಿದೆ.
ಈ ಬಾರಿ ಎಲ್‌ನಿನೋ ಪರಿಣಾಮ ದೇಶಾದ್ಯಂತ ತೀವ್ರ ಮಳೆ ಕೊರತೆಯಾಗಿದೆ. ಆದರೆ ಕೆಲ ರಾಜ್ಯಗಳ ಜಿಲ್ಲೆಗಳು ಪ್ರವಾಹ ಪರಿಸ್ಥಿತಿಯನ್ನು ಎದುರಿಸಿದೆ. ಅಪಾರ ನಷ್ಟ ಸಂಭವಿಸಿದೆ. ಒಂದೆಡೆ ಬರಗಾಲ ಮತ್ತೊಂದೆಡೆ ಕೆಲ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿಯಿಂದ ಜನರು ಹೈರಾಣಾಗಿದ್ದಾರೆ. ಕರ್ನಾಟಕದಲ್ಲಿ ಬರಪೀಡಿತ ಜಿಲ್ಲೆಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ರಾಜ್ಯದ ಪ್ರಮುಖ ಜಲಾಶಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಸಂಗ್ರಹಣೆ ಆಗಿಲ್ಲ. ಸೆಪ್ಟೆಂಬರ್ ಆರಂಭಿಕ ತಿಂಗಳಲ್ಲೇ ನೀರಿನ ಕೊರತೆಗಳು ಎದುರಾಗುತ್ತಿದೆ. ರೈತರು ಕಂಗಾಲಾಗಿದ್ದಾರೆ. ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವು ಸಮಸ್ಯೆ, ಕಾಡಿನಲ್ಲಿರುವ ಪ್ರಾಣಿಗಳಿಗೂ ನೀರಿನ ಸಮಸ್ಯೆ ಎದುರಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ