
ಕೋಲ್ಕತಾ(ಡಿ.03) ಬೀದಿ ನಾಯಿಗಳು ದಾಳಿ ಮಾಡಿದ ಘಟನೆಗಳು ವರದಿಯಾಗುತ್ತಲೇ ಇರುತ್ತದೆ. ಅದರಲ್ಲೂ ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ ಇತ್ತೀಚೆಗೆ ಹೆಚ್ಚಾಗಿದೆ. ಆದರೆ ಇಲ್ಲೊಂದು ಘಟನೆ ಮನಕಲುಕುವಂತಿದೆ. ಆಗಷ್ಟೇ ಹುಟ್ಟಿದ ನವಜಾತ ಶಿಶವನ್ನು ಅಲ್ಲೆ ಬಿಟ್ಟು ತೆರಳಿದ್ದಾರೆ. ಪಾಳು ಬಿದ್ದ ಶೌಚಾಲಯದಲ್ಲಿ ನವಜಾತ ಶಿಶುವನ್ನು ಬಿಟ್ಟು ಮಹಾತಾಯಿ ತೆರಳಿದ್ದಾಳೆ. ಆದರೆ ರಾತ್ರಿಯಿಡಿ ಈ ನವಜಾತ ಶಿಶುವಿಗೆ ಬೀದಿ ನಾಯಿಗಳು ಕಾವಲು ಕುಳಿತಿದೆ. ಯಾವುದೇ ಇತರ ನಾಯಿ, ಪ್ರಾಣಿಗಳು ದಾಳಿ ಮಾಡದಂತೆ ನವಜಾತ ಶಿಶುವಿಗೆ ಬೆಳಗ್ಗೆವರೆಗೆ ಕಾವಲು ಕುಳಿತಿದೆ. ಮಗುವಿನ ಅಳು ಶಬ್ದ ಕೇಳಿ ಮಹಿಳೆಯೊಬ್ಬರು ನವಜಾತ ಶಿಶುವನ್ನು ರಕ್ಷಿಸಿ ವಾಹನ ಮೂಲಕ ಆಸ್ಪತ್ರೆ ಕರೆದುಕೊಂಡು ಹೋಗುವವರೆಗೆ ಬೀದಿ ನಾಯಿಗಳು ಕಾವಲು ಕುಳಿತ ಘಟನೆ ಪಶ್ಚಿಮ ಬಂಗಾಳದ ನಬದ್ವೀಪದಲ್ಲಿ ನಡೆದಿದೆ.
ಮೇಪುರ ಬಳಿ ಇರುವ ಸ್ವರೂಪನಗರ ರೈಲ್ವೇ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ತಡ ರಾತ್ರಿ ಮಗುವಿನ ಶಬ್ದ ಕೇಳಿಸಿದೆ. ಹಲವು ಮನೆಗಳಿರುವ ಈ ಕಾಲೋನಿಯಲ್ಲಿ ಯಾವುದೋ ಒಂದು ಮನೆಯಲ್ಲಿ ಮಗುವಿನ ಅಳುತ್ತಿದೆ ಎಂದು ಎಲ್ಲರು ಸುಮ್ಮನಾಗಿದ್ದಾರೆ. ಹಲವು ಗಂಟೆಗಳ ಕಾಲ ಮಗುವಿನ ಶಬ್ದ ಕೇಳಿದೆ. ಹಲವು ಮನೆಗಳಿರುವ ಕಾರಣ ಯಾರೂ ಕೂಡ ಹೆಚ್ಚು ಗಂಭೀರವಾಗಿ ಪರಿಗಣಿಸಿರಲಿಲ್ಲ. ಎಲ್ಲರೂ ನಿದ್ದೆಗೆ ಜಾರಿದ್ದಾರೆ. ಬೆಳಗಿನ ಜಾವ ಮತ್ತೆ ಮಗುವಿನ ಕ್ಷೀಣ ಧ್ವನಿ ಹಲವರಿಗೆ ಕೇಳಿಸಿದೆ.
ಅದೇ ಕಾಲೋನಿಯ ರಾಧಾ ಭೌಮಿಕ್ ಬೆಳಗ್ಗೆ ಶೌಚಾಲಯಕ್ಕೆ ತೆರಳುವಾಗ ಪಕ್ಕದಿಂದಲೇ ಎಲ್ಲೋ ಮಗುವಿನ ಧ್ವನಿ ಕೇಳಿಸುತ್ತಿತ್ತು. ಧ್ವನಿ ಬಂದ ಕಡೆ ಹೆಚ್ಚೆ ಹಾಕಿದ ರಾಧಾ ಅನ್ನೋ ಮಹಿಳೆಗೆ ಶೌಚಾಲಯದಿಂದ ಧ್ವನಿ ಕೇಳಿಸುತ್ತಿದೆ ಅನ್ನೋದು ಅರಿವಾಯಿತು. ಹೀಗಾಗಿ ನೇರವಾಗಿ ಧ್ವನಿ ಕೇಳಿಸುತ್ತಿದ್ದ ಕೆಲವೇ ದೂರದಲ್ಲಿದ್ದ ಶೌಚಾಲಯದತ್ತ ತೆರಳಿದಾಗ ರಾಧಾಗೆ ಅಘಾತವಾಗಿದೆ. ನವಜಾತ ಶಿಶುವೊಂದು ಶೌಚಾಲಯದಲ್ಲಿದೆ. ಇದರ ಸುತ್ತ ಬೀದಿ ನಾಯಿಗಳು ಕುಳಿತಿದೆ. ಕೊರೆವ ಚಳಿಯಲ್ಲ ರಾತ್ರಿಯಿಂದ ಅಳುತ್ತಾ ಇದ್ದ ಮಗು ಸಂಪೂರ್ಣವಾಗಿ ಅಸ್ವಸ್ಥಗೊಂಡಿದೆ. ತಕ್ಷಣವೆ ಮಗುವನ್ನು ಎತ್ತಿಕೊಂಡ ರಾಧಾ ಬೌಮಿಕ್, ಸಂಬಂಧಿ ಪ್ರತಿಕ್ ಭೌಮಿಕ್ ಸಹಾಯಕ್ಕೆ ಕೂಗಿದ್ದಾಳೆ. ಬಳಿಕ ಮಗುವನ್ನು ಎತ್ತಿಕೊಂಡು ಮಹೇಶಗಂಜ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಗುವಿನ ಆರೋಗ್ಯ ಗಂಭೀರವಾಗಿದ್ದ ಕಾರಣ ಕೃಷ್ಣನಗರ ಸದಾರ್ ಆಸ್ಪತ್ರೆಗೆ ಶಿಫ್ಟ್ ಮಾಡಾಗಲಿದೆ. ಇತ್ತ ಮಾಹಿತಿ ತಿಳಿದು ಪೊಲೀಸರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.
ರಾತ್ರಿಯಿಡಿ ಯಾವುದೇ ಆರೈಕೆಯಿಲ್ಲದ ಕಳೆದ ಮಗು ಅಸ್ವಸ್ಥಗೊಂಡಿದೆ. ಮಗುವಿಗೆ ಯಾವುದೇ ಗಾಯಗಳಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಸದ್ಯ ಮಗು ಆಸ್ಪತ್ರೆಯಲ್ಲಿ ಚೇತರಿಕೆ ಕಾಣುತ್ತಿದೆ. ಇತ್ತ ರಾಧಾ ಭೌಮಿಕ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಸುತ್ತಲೂ ಬೀದಿ ನಾಯಿಗಳು ಈ ಮಗುವಿಗೆ ಕಾವಲು ನಿಂತಿತ್ತು. ಆರಂಭದಲ್ಲಿ ನಾಯಿಗಳು ಮಗುವಿಗೆ ಕಚ್ಚಿರುವ ಸಾಧ್ಯತೆ ಇದೆ ಎಂದುಕೊಂಡಿದ್ದೆ. ಆದರೆ ವೈದ್ಯರು ಯಾವುದೇ ಗಾಯವಿಲ್ಲ ಎಂದಾಗ ಬೀದಿ ನಾಯಿಗಳು ರಾತ್ರಿಯಿಡಿ ಕಾವಲು ಕುಳಿತಿದೆ ಅನ್ನೋದು ಸ್ಪಷ್ಟವಾಯಿತು ಎಂದು ರಾಧಾ ಬೌಮಿಕ್ ಹೇಳಿದ್ದಾರೆ.
ಮಕ್ಕಳ ಕಲ್ಯಾಣ ಇಲಾಖೆ ಸುಪರ್ದಿಗೆ ಮಗುವನ್ನು ನೀಡಲಾಗಿದೆ. ಸದ್ಯ ಮಗು ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದೆ. ಇತ್ತ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಗು ಹುಟ್ಟಿದ ತಕ್ಷಣವೇ ಅಲ್ಲೆ ಬಿಟ್ಟು ತೆರಳಿದ್ದಾರೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ