ಮೈಮರೆತರೆ ಮತ್ತೆ ಲಾಕ್‌ಡೌನ್‌: ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ!

By Suvarna NewsFirst Published Jul 7, 2021, 11:17 AM IST
Highlights

* ಶಿಮ್ಲಾ, ಮನಾಲಿಯಲ್ಲಿ ಪ್ರವಾಸಿಗರ ನಿರ್ಲಕ್ಷ್ಯಕ್ಕೆ ತೀವ್ರ ಕಳವಳ

* ಮೈಮರೆತರೆ ಮತ್ತೆ ಲಾಕ್‌ಡೌನ್‌: ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ

* ಇಂತಹ ಘಟನೆಗಳು ಮರುಕಳಿಸಿದರೆ ಲಾಕ್‌ಡೌನ್‌ ಅನಿವಾರ್ಯ

ನವದೆಹಲಿ(ಜು.07): ಕೊರೋನಾ ಪ್ರಕರಣಗಳು ಇಳಿಕೆ ಆಗುತ್ತಿದ್ದಂತೆ ಜನರು ಕೊರೋನಾ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಪ್ರವಾಸಿ ತಾಣಗಳು ಜನರಿಂದ ತುಂಬಿ ತುಳುಕುತ್ತಿವೆ. ಒಂದು ವೇಳೆ ಜನರು ಕೊರೋನಾ 2ನೇ ಅಲೆಯ ವೇಳೆ ಮಾಡಿದ ತಪ್ಪುಗಳು ಮರುಕಳಿಸಿದರೆ ಲಾಕ್‌ಡೌನ್‌ ಜಾರಿ ಅನಿವಾರ್ಯ ಆದೀತು ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ.

ಕೊರೋನಾ ಕೇಸ್‌ಗಳು ಇಳಿಕೆ ಆಗಿರುವ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳು ಪುನಃ ಆರಂಭಗೊಂಡಿವೆ. ಇದರ ಬೆನ್ನಲ್ಲೇ ಹಿಮಾಚಲ ಪ್ರದೇಶದ ಶಿಮ್ಲಾ, ಮನಾಲಿ ಹಾಗೂ ಇತರ ಪ್ರವಾಸಿ ತಾಣಗಳಲ್ಲಿ ಕೊರೋನಾ ನಿಮಮಗಳನ್ನು ಗಾಳಿಗೆ ತೂರಿ ಜನಜಂಗುಳಿ ಸೇರಿದ ದೃಶ್ಯಗಳು ಮಾಧ್ಯಮದಲ್ಲಿ ಪ್ರಸಾರವಾಗಿದ್ದವು. ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ, ಪ್ರವಾಸಿಗರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಹಿಮಾಚಲ ಪ್ರದೇಶ ಸರ್ಕಾರಕ್ಕೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ. ಶಿಮ್ಲಾ ಮತ್ತು ಮನಾಲಿಯಲ್ಲಿ ಕೊರೋನಾ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿ ಆರೋಗ್ಯ ಸಚಿವಾಲಯ ಹಿಮಾಚಲ ಪ್ರದೇಶ ಸರ್ಕಾರಕ್ಕೆ ಪತ್ರ ಬರೆದಿದೆ.

ಹಿಮಾಚಲ ಪ್ರದೇಶದಲ್ಲಿ ಪ್ರವಾಸಿಗರು ತೋರಿದ ನಿರ್ಲಕ್ಷ್ಯ ಇತರೆ ರಾಜ್ಯಗಳಿಗೆ ಎಚ್ಚರಿಕೆಯ ಗಂಟೆ ಆಗಿದೆ. ಒಂದು ವೇಳೆ ಜನರು ಕೋವಿಡ್‌ ನಿಯಮಗಳನ್ನು ಪಾಲಿಸದೇ ಇದ್ದರೆ ಮತ್ತೊಮ್ಮೆ ಲಾಕ್‌ಡೌನ್‌ ವಿಧಿಸುವುದು ಅನಿವಾರ್ಯವಾಗಲಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್‌ ಅಗವಾಲ್‌ ಎಚ್ಚರಿಕೆ ನೀಡಿದ್ದಾರೆ.

ಕೊರೋನಾ ಇನ್ನೂ ಅಂತ್ಯಗೊಂಡಿಲ್ಲ. ಕೆಲವು ರಾಜ್ಯಗಳಲ್ಲಿ ಕೊರೋನಾ 2ನೇ ಅಲೆ ಸಂಪೂರ್ಣವಾಗಿ ಇಳಿಕೆ ಆಗಿಲ್ಲ. 17 ರಾಜ್ಯಗಳ 73 ಜಿಲ್ಲೆಗಳಲ್ಲಿ ಕೊರೋನಾ ಪಾಸಿಟಿವಿಟಿ ಪ್ರಮಾಣ ಶೇ.10ಕ್ಕಿಂತಲೂ ಹೆಚ್ಚು ದರದಲ್ಲಿ ದಾಖಲಾಗುತ್ತಿವೆ. ಈ ಹಂತದಲ್ಲಿ ಕೊರೋನಾ ನಿಯಮಗಳ ಉಲ್ಲಂಘನೆ ಮತ್ತೊಮ್ಮೆ ಕೊರೋನಾ ಕೇಸ್‌ಗಳ ಏರಿಕೆಗೆ ಕಾರಣವಾಗಬಲ್ಲದು. ಸಾಮಾಜಿಕ ಅಂತರ ಪಾಲನೆ, ಮಾಸ್ಕ್‌ ಧರಿಸುವುದು ಸೋಂಕು ನಿಯಂತ್ರಣದಲ್ಲಿ ಅತ್ಯಂತ ಮಹತ್ವದ್ದಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

click me!