ಕೊರೋನಾ ವೈರಸ್ ನಿಗ್ರಹಕ್ಕಾಗಿ ಘೋಷಿಸಲಾಗಿರುವ ಲಾಕ್‌ಡೌನ್ ಸಡಿಲಗೊಂಡ ಬಳಿಕ ವೈರಸ್ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚು| ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಾಗಲೇ ಸರ್ಕಾರ ಸಲಹೆ| ಮೇ 17ರ ಬಳಿಕ ಲಾಕ್‌ಡೌನ್ ವಿಸ್ತರಣೆ ಇಲ್ಲ ಎಂಬ ಸುಳಿವು?
ನವದೆಹಲಿ(ಮೇ.09): ಕೊರೋನಾ ವೈರಸ್ ನಿಗ್ರಹಕ್ಕಾಗಿ ಘೋಷಿಸಲಾಗಿರುವ ಲಾಕ್‌ಡೌನ್ ಸಡಿಲಗೊಂಡ ಬಳಿಕ ವೈರಸ್ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವಾಗಲೇ, ‘ವೈರಸ್ ಜತೆ ಬದುಕೋದು ಕಲಿಯಿರಿ’ ಎಂದು ಕೇಂದ್ರ ಸರ್ಕಾರ ದೇಶವಾಸಿಗಳಿಗೆ ಸಲಹೆ ಮಾಡಿದೆ. ಇದು ಅಚ್ಚರಿಗೆ ಕಾರಣವಾಗಿದ್ದು, ಮೇ 17ರ ನಂತರ ಲಾಕ್‌ಡೌನ್ ವಿಸ್ತರಣೆಯಾಗುವುದಿಲ್ಲ ಎಂಬ ಸುಳಿವಾಗಿರಬಹುದು ಎಂಬ ವಿಶ್ಲೇಷಿಸಲಾಗುತ್ತಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ್ ಅಗರ್‌ವಾಲ್, ನಾವೆಲ್ಲರೂ ವೈರಸ್ ಜತೆಗೆ ಬದುಕಬೇಕಾದ ಬಹುದೊಡ್ಡ ಸವಾಲು ಮುಂದಿದೆ. ಈ ರೀತಿ ಮಾಡಲು ಸರ್ಕಾರದ ಮಾರ್ಗಸೂಚಿಗಳನ್ನು ನಡವಳಿಕೆಯಲ್ಲೇ ಬದಲಾವಣೆ ಮಾಡಿಕೊಳ್ಳುವಂತೆ ಅಳವಡಿಸಿಕೊಳ್ಳುವುದು ತುಂಬಾ ಮಹತ್ವವಾದುದು ಎಂದು ತಿಳಿಸಿದರು.
undefined
ದೇಶದಲ್ಲಿ 60000 ಗಡಿಗೆ ಕೊರೋನಾ ಸೋಂಕಿತರು!
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಇದೇ ರೀತಿಯ ಮಾತನ್ನು ಇತ್ತೀಚೆಗೆ ಆಡಿದ್ದರು. ದೆಹಲಿಯನ್ನು ಪುನಾ ತೆರೆಯುವ ಸಮಯ ಬಂದಿದೆ. ಹೀಗಾಗಿ ವೈರಸ್ ಜತೆಗೆ ಜನರು ಬದುಕಬೇಕು ಎಂದಿದ್ದರು.
ದೇಶದ 216 ಜಿಲ್ಲೆಗಳಲ್ಲಿ ಈವರೆಗೆ ಒಂದೇ ಒಂದು ಕೊರೋನಾ ಕೇಸ್ ಪತ್ತೆಯಾಗಿಲ್ಲ. ಕಳೆದ 28 ದಿನಗಳಿಂದ 48 ಜಿಲ್ಲೆಗಳಲ್ಲಿ ಹೊಸದಾಗಿ ಸೋಂಕು ಕಂಡುಬಂದಿಲ್ಲ. ಸರ್ಕಾರ ನೀಡಿರುವ ಸೂಚನೆಗಳನ್ನು ಪಾಲಿಸಿದರೆ ಈ ವೈರಸ್ ಉತ್ತುಂಗಕ್ಕೆ ಹೋಗುವುದನ್ನು ತಪ್ಪಿಸಬಹುದು ಎಂದು ಅಗರ್‌ವಾಲ್ ಹೇಳಿದರು.