
ಮುಂಬೈ: ಬಲವಂತದ ಮದುವೆ, ಲೈಂಗಿಕ ದೌರ್ಜನ್ಯ, ಕೊಲೆ ಯತ್ನ ಹಾಗೂ ಆಸ್ತಿ ಕಬಳಿಕೆ ಆರೋಪಗಳ ಮೂಲಕ ಇತ್ತೀಚೆಗೆ ಸುದ್ದಿಯಲ್ಲಿರುವ, ದಿವಂಗತ ಭೂಗತ ಲೋಕದ ದೊರೆ ಹಾಜಿ ಮಸ್ತಾನ್ ಅವರ ಪುತ್ರಿ ಹಸೀನ್ ಮಸ್ತಾನ್ ಮಿರ್ಜಾ, ತನಗೆ ನ್ಯಾಯ ಒದಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ತಾನು ಅಪ್ರಾಪ್ತ ವಯಸ್ಕಳಾಗಿದ್ದಾಗಲೇ ತನ್ನ ಮೇಲೆ ಅತ್ಯಾ*ಚಾರ ನಡೆದಿದೆ, ಬಲವಂತವಾಗಿ ಮದುವೆ ಮಾಡಲಾಯಿತು ಹಾಗೂ ತನ್ನ ಗುರುತನ್ನು ದುರುಪಯೋಗಪಡಿಸಿಕೊಂಡು ಆಸ್ತಿಯನ್ನು ಕಬಳಿಸಲಾಗಿದೆ ಎಂದು ಹಸೀನ್ ಗಂಭೀರ ಆರೋಪ ಮಾಡಿದ್ದಾರೆ.
ಮಾಧ್ಯಮವೊಂದರಲ್ಲಿ ಮಾತನಾಡಿದ ಹಸೀನ್, 1996ರಲ್ಲಿ ತಾನು ಕೇವಲ 12 ವರ್ಷದವಳಾಗಿದ್ದಾಗ, ತನ್ನ ಮಾವನ ಮಗ ನಾಸೀರ್ ಹುಸೇನ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ್ದಾನೆ. ನಂತರ ಆತನಿಂದಲೇ ತಾನು ಬಲವಂತವಾಗಿ ಮದುವೆಯಾಗಬೇಕಾಯಿತು ಎಂದು ಆರೋಪಿಸಿದ್ದಾರೆ. ಆ ಸಮಯದಲ್ಲಿ ತಾನು ಅಪ್ರಾಪ್ತ ವಯಸ್ಕಳಾಗಿದ್ದರೂ, ತನ್ನ ರಕ್ಷಣೆಗೆ ಯಾರೂ ಮುಂದಾಗಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ತಾನು ಅನುಭವಿಸಿದ ದುಃಖಗಳು ತನ್ನ ತಂದೆ ಹಾಜಿ ಮಸ್ತಾನ್ ಅವರ ಜೀವಿತಾವಧಿಯಲ್ಲಿ ನಡೆದಿಲ್ಲ ಎಂದು ಹಸೀನ್ ಹೇಳಿದ್ದು, ನನ್ನ ತಂದೆ ನಿಧನರಾದ ಬಳಿಕವೇ ಈ ಎಲ್ಲ ಸಮಸ್ಯೆಗಳು ಆರಂಭವಾದವು. ನನ್ನನ್ನು ಹಾಜಿ ಮಸ್ತಾನ್ ಅವರ ಮಗಳು ಎಂಬ ಕಾರಣಕ್ಕೆ ಗುರಿಯಾಗಿಸಲಾಯಿತು ಎಂದು ಅವರು ಹೇಳಿದ್ದಾರೆ.
ತನ್ನ ಮೇಲೆ ನಡೆದ ಅತ್ಯಾ*ಚಾರ, ದೌರ್ಜನ್ಯ ಮತ್ತು ಬಲವಂತದ ಮದುವೆಯ ಹಿಂದೆ ಆಸ್ತಿ ಮತ್ತು ಹಣದ ಲಾಲಸೆ ಕಾರಣವಾಗಿದೆ ಎಂದು ಹಸೀನ್ ಆರೋಪಿಸಿದ್ದಾರೆ. ನಾನು ಹಾಜಿ ಮಸ್ತಾನ್ ಅವರ ಮಗಳಾಗಿ ಹುಟ್ಟದೇ ಇದ್ದಿದ್ದರೆ, ಈ ಎಲ್ಲವನ್ನು ಅನುಭವಿಸಬೇಕಾಗಿರಲಿಲ್ಲ. ನನ್ನ ತಂದೆ ನಿಧನರಾದ ಬಳಿಕ, ಅವರು ನಮ್ಮ ಆಸ್ತಿಯನ್ನು ಕಬಳಿಸಬಹುದು ಎಂದು ಭಾವಿಸಿದರು. ಹಣವೇ ಈ ಎಲ್ಲ ಅಪರಾಧಗಳ ಮೂಲ ಕಾರಣ ಎಂದಿದ್ದಾರೆ.
ತನ್ನ ತಂದೆಯ ಹೆಸರನ್ನು ವಿವಾದಗಳಲ್ಲಿ ಎಳೆಯಬಾರದು ಎಂದು ಹಸೀನ್ ಮನವಿ ಮಾಡಿದ್ದು, ನನ್ನ ತಂದೆ ತಮ್ಮ ಜೀವನದಲ್ಲಿ ಅನೇಕರಿಗೆ ಸಹಾಯ ಮಾಡಿದ್ದರು. ಅವರ ಹೆಸರಿಗೆ ಕಳಂಕ ಬರಬಾರದು. ನಾನು ಅವರ ಮಗಳಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ನಾನು ಹೋರಾಡುತ್ತಿರುವುದು ಅವರ ಹೆಸರಿಗಾಗಿ ಅಲ್ಲ, ನನ್ನ ನ್ಯಾಯಕ್ಕಾಗಿ ಎಂದು ಅವರು ಹೇಳಿದ್ದಾರೆ.
ತಾನು ಅನುಭವಿಸಿದ ದುಃಖದ ಹಿನ್ನೆಲೆಯಲ್ಲಿ, ದೇಶದಲ್ಲಿ ಅಪರಾಧಿಗಳನ್ನು ಹೆದರಿಸುವಂತೆ ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು ಎಂದು ಹಸೀನ್ ಒತ್ತಾಯಿಸಿದ್ದು, ನನ್ನ ಮೇಲೆ ಅತ್ಯಾ*ಚಾರ ನಡೆಯಿತು, ನನ್ನನ್ನು ಕೊಲ್ಲಲು ಯತ್ನಿಸಲಾಯಿತು, ನನ್ನ ಗರ್ಭದಲ್ಲಿದ್ದ ಮಗುವನ್ನು ಕಳೆದುಕೊಂಡೆ, ನಂತರ ಬೀದಿಯಲ್ಲಿ ಬಿಟ್ಟುಹೋಗಲಾಯಿತು. ನನ್ನ ಬಳಿ ಹಣವೂ ಇರಲಿಲ್ಲ, ಬೆಂಬಲವೂ ಇರಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
2013ರಿಂದಲೇ ಈ ಪ್ರಕರಣಕ್ಕಾಗಿ ಹೋರಾಡುತ್ತಿರುವುದಾಗಿ ಹಸೀನ್ ತಿಳಿಸಿದ್ದು, ಆರ್ಥಿಕ ಸಂಕಷ್ಟಗಳಿಂದಾಗಿ ಹೋರಾಟವನ್ನು ನಿರಂತರವಾಗಿ ಮುಂದುವರಿಸಲು ಸಾಧ್ಯವಾಗಲಿಲ್ಲ . ಪೊಲೀಸರು ನನಗೆ ಯಾವುದೇ ಸಹಾಯ ಮಾಡಲಿಲ್ಲ. ಸಹಾಯ ಮಾಡಿದ್ದರೆ, ನನ್ನ ತಾಯಿ ಬದುಕಿದ್ದಾಗಲೇ ನನಗೆ ನ್ಯಾಯ ಸಿಗುತ್ತಿತ್ತು ಎಂದು ಆರೋಪಿಸಿದ್ದಾರೆ.
2010ರಲ್ಲಿ ವಿಚ್ಛೇದನದ ನಂತರ ಉಂಟಾದ ನಿರಂತರ ಹಿಂಸೆಯಿಂದಾಗಿ ತಾನು ಮೂರು ಬಾರಿ ಸಾಯಲು ಯತ್ನಿಸಿದ್ದಾಗಿ ಹಸೀನ್ ಹೇಳಿಕೊಂಡಿದ್ದು, ಬಿಗ್ ಬಾಸ್ ರಿಯಾಲಿಟಿ ಶೋಗೆ ಆಹ್ವಾನ ಬಂದಿದ್ದರೂ, ಮಾನಸಿಕ ಆರೋಗ್ಯದ ಕಾರಣದಿಂದಾಗಿ ಅದನ್ನು ತಿರಸ್ಕರಿಸಿದ್ದಾಗಿ ತಿಳಿಸಿದ್ದಾರೆ.
ರಾಜಕೀಯ ಪ್ರವೇಶಿಸುವ ಯಾವುದೇ ಆಸೆ ಇಲ್ಲ. ನನಗೆ ರಾಜಕೀಯ ಅರ್ಥವಾಗುವುದಿಲ್ಲ. ಈಗ ಅಧಿಕಾರದಲ್ಲಿರುವವರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಹಸೀನ್ ಸ್ಪಷ್ಟಪಡಿಸಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಟ್ಟುನಿಟ್ಟಿನ ಆಡಳಿತವನ್ನು ಹಸೀನ್ ಬೆಂಬಲಿಸಿದ್ದು, ಅವರು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾರೆ. ಅವರ ಆಡಳಿತದಲ್ಲಿ ಬಲಿಪಶುಗಳಿಗೆ ನ್ಯಾಯ ಸಿಗುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ