ಹರ್ಯಾಣ ಖಾಸಗಿ ವಲಯದ ಶೇ.75 ಉದ್ಯೋಗ ಸ್ಥಳೀಯರಿಗೆ ಮೀಸಲು| ಮಸೂದೆಗೆ ರಾಜ್ಯಪಾಲರ ಸಹಿ, ಶೀಘ್ರ ಅಧಿಸೂಚನೆ ಪ್ರಕಟ
ಚಂಡೀಗಢ(ಮಾ.03): ಖಾಸಗಿ ಕ್ಷೇತ್ರದಲ್ಲೂ ಸ್ಥಳೀಯರಿಗೆ ಶೇ.75ರಷ್ಟುಮೀಸಲಾತಿ ಕಲ್ಪಿಸುವ ಕಾಯ್ದೆಯನ್ನು ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ನೇತೃತ್ವದ ಹರ್ಯಾಣದ ಬಿಜೆಪಿ ಸರ್ಕಾರ ಜಾರಿಗೆ ತಂದಿದೆ. ತನ್ಮೂಲಕ ಕಳೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಯ ಮೈತ್ರಿ ಪಕ್ಷ ಜನನಾಯಕ ಜನತಾ ಪಕ್ಷ(ಜೆಜೆಪಿ) ಘೋಷಣೆ ಮಾಡಿದ ವಾಗ್ದಾನವನ್ನು ಈಡೇರಿಸಿದಂತಾಗಿದೆ.
ಖಾಸಗಿ ವಲಯದಲ್ಲಿ ಶೇ.75ರಷ್ಟುಮೀಸಲು ಕಲ್ಪಿಸುವ ಈ ಮಸೂದೆಯನ್ನು ಹರಾರಯಣ ಸರ್ಕಾರ ಕಳೆದ ವರ್ಷವೇ ಅಂಗೀಕರಿಸಿತ್ತು. ಅದಕ್ಕೆ ಇದೀಗ ರಾಜ್ಯಪಾಲ ಸತ್ಯದೇವ್ ನರೇನ್ ಆರ್ಯ ಅವರು ಅಂಕಿತ ಹಾಕುವುದರೊಂದಿಗೆ ಈ ಮಸೂದೆ ಕಾಯ್ದೆಯಾಗಿ ರೂಪ ಪಡೆದಿದ್ದು, ಈ ಕುರಿತ ಅಧಿಸೂಚನೆಯನ್ನು ಶೀಘ್ರವೇ ಪ್ರಕಟಿಸಲಾಗುತ್ತದೆ. ಈ ಕ್ರಮದಿಂದ ರಾಜ್ಯದ ನಿರುದ್ಯೋಗ ಸಮಸ್ಯೆ ಕಮ್ಮಿಯಾಗಲಿದೆ ಮುಖ್ಯಮಂತ್ರಿ ಖಟ್ಟರ್ ತಿಳಿಸಿದ್ದಾರೆ.
ಈ ನೂತನ ಕಾಯ್ದೆ ಪ್ರಕಾರ ಖಾಸಗಿ ವಲಯದಲ್ಲಿರುವ ಮಾಸಿಕ 50 ಸಾವಿರ ರು.ಗಿಂತ ಕಡಿಮೆ ವೇತನದ ಶೇ.75ರಷ್ಟುಉದ್ಯೋಗಗಳು ರಾಜ್ಯದವರ ಪಾಲಾಗಲಿದ್ದು, ಇದು 10 ವರ್ಷಗಳ ಕಾಲ ಜಾರಿಯಲ್ಲಿರಲಿದೆ. ರಾಜ್ಯದಲ್ಲೇ ಹುಟ್ಟಿದ ಅಥವಾ 15 ವರ್ಷಗಳ ವಾಸ ಮಾಡುವ ವ್ಯಕ್ತಿಯು ಈ ಕಾಯ್ದೆ ವ್ಯಾಪ್ತಿಗೆ ಒಳಪಡಲಿದ್ದಾರೆ. ಒಂದು ವೇಳೆ ಅರ್ಹರ ಹುದ್ದೆಗೆ ಲಭ್ಯವಾಗದೇ ಇದ್ದಲ್ಲಿ ಸ್ಥಳೀಯರನ್ನೇ ಆಯ್ಕೆ ಮಾಡಿಕೊಂಡು ಅವರಿಗೆ ಸೂಕ್ತ ತರಬೇತಿ ನೀಡುವುದು ಕಂಪನಿಗಳ ಹೊಣೆಯಾಗಿರಲಿದೆ.