* ಹರಿದ್ವಾರ ಧರ್ಮ ಸಂಸದ್‌ನಲ್ಲಿ ಮುಸ್ಲಿಮರ ವಿರುದ್ಧ ದ್ವೇಷಪೂರಿತ ಭಾಷಣ
* ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುರುವಾರ ಮೊದಲ ವ್ಯಕ್ತಿಯನ್ನು ಬಂಧನ
* ನೀವೆಲ್ಲರೂ ಸಾಯ್ತೀರಿ ಎಂದು ಗುಡುಗಿದ ಯತಿ ನರಸಿಂಹಾನಂದ
ಹರಿದ್ವಾರ(ಜ.14): ಹರಿದ್ವಾರ ಧರ್ಮ ಸಂಸದ್‌ನಲ್ಲಿ ಮುಸ್ಲಿಮರ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುರುವಾರ ಮೊದಲ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈ ಬಂಧನದಿಂದ ಕ್ರೋಧಗೊಂಡ ಯತಿ ನರಸಿಂಹಾನಂದರು ಪೊಲೀಸ್ ಅಧಿಕಾರಿಗಳಿಗೆ "ನೀವೆಲ್ಲರೂ ಸಾಯುತ್ತೀರಿ" ಎಂದು ಗುಡುಗಿದ್ದಾರೆ. ದ್ವೇಷಪೂರಿತ ಭಾಷಣ ಮಾಡಿದ ಆರೋಪದಲ್ಲಿ ಧಾರ್ಮಿಕ ಮುಖಂಡರಲ್ಲಿ ಯತಿ ನರಸಿಂಹಾನಂದ ಕೂಡ ಸೇರಿದ್ದಾರೆ. ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ದ್ವೇಷಪೂರಿತ ಭಾಷಣ ಮಾಡಿದ ಆರೋಪದ ಮೇಲೆ ವಾಸಿಂ ರಿಜ್ವಿ ಅಲಿಯಾಸ್ ಜಿತೇಂದ್ರ ನಾರಾಯಣ ತ್ಯಾಗಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇದು ಮೊದಲ ಬಂಧನವಾಗಿದೆ.
ಉತ್ತರಾಖಂಡ ಪೊಲೀಸರು ಯತಿ ನರಸಿಂಹಾನಂದ್ ಮತ್ತು ಇನ್ನೋರ್ವ ಆರೋಪಿ ಸಾಧ್ವಿ ಅನ್ನಪೂರ್ಣ ಅವರಿಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ತ್ಯಾಗಿಯನ್ನು ಕಸ್ಟಡಿಗೆ ತೆಗೆದುಕೊಳ್ಳುವಾಗ ಸಹಕರಿಸುವಂತೆ ನರಸಿಂಹಾನಂದರನ್ನು ಪೊಲೀಸ್ ಅಧಿಕಾರಿಗಳು ವಿನಂತಿಸುತ್ತಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಕಾರಿನಲ್ಲಿ ಕುಳಿತಿರುವ ಯತಿ ನರಸಿಂಹಾನಂದರು ತ್ಯಾಗಿಯನ್ನು ಏಕೆ ಬಂಧಿಸುತ್ತಿದ್ದಾರೆ ಎಂದು ಅಧಿಕಾರಿಗಳನ್ನು ಕೇಳುತ್ತಿದ್ದಾರೆ. ತ್ಯಾಗಿ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು.
ಈ ಮೂರೂ ವಿಚಾರದಲ್ಲಿ ಅವರ ಜೊತೆಗಿದ್ದೇನೆ, ಅವರೊಬ್ಬರೇ ಮಾಡಿದ್ದಾರಾ ಎಂದು ನರಸಿಂಹಾನಂದ ಪ್ರಶ್ನಿಸಿದ್ದಾರೆ. ಅಧಿಕಾರಿಗಳು ಬಂಧನದ ಪ್ರಕ್ರಿಯೆಯನ್ನು ಮುಂದುವರೆಸಲು ನರಸಿಂಹಾನಂದರನ್ನು ಕಾರಿನಿಂದ ಕೆಳಗಿಳಿಸಲು ಹೇಳಿದರು. ಆದರೆ, ನರಸಿಂಹಾನಂದರು ತಮ್ಮ ವಿಚಾರದಲ್ಲಿ ಅಚಲವಾಗಿದ್ದರು. ತ್ಯಾಗಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅದಕ್ಕೆ ನರಸಿಂಹಾನಂದರು, "ಆದರೆ ನಾನಲ್ಲ. ನಮ್ಮ ಬೆಂಬಲದಿಂದ ಆತ ಹಿಂದೂ ಆಗಿದ್ದಾನೆ" ಎಂದು ಉತ್ತರಿಸಿದ್ದಾರೆ.
ಉತ್ತರ ಪ್ರದೇಶ ಶಿಯಾ ಸೆಂಟ್ರಲ್ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ ಕಳೆದ ತಿಂಗಳು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು ಮತ್ತು ಜಿತೇಂದ್ರ ಸಿಂಗ್ ನಾರಾಯಣ್ ತ್ಯಾಗಿ ಎಂದು ಹೆಸರಿಸಲಾಯಿತು. ಗಾಜಿಯಾಬಾದ್‌ನ ದಾಸ್ನಾ ದೇವಿ ದೇವಸ್ಥಾನದ ಪ್ರಧಾನ ಅರ್ಚಕ ನರಸಿಂಹಾನಂದ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು, ವಿವಾದಾತ್ಮಕ ಹೇಳಿಕೆಗಳಿಗೆ ಅವರು ಹೆಸರುವಾಸಿಯಾಗಿದ್ದಾರೆ.
ಇನ್ನು ಅಧಿಕಾರಿಗಳು ಪದೇ ಪದೇ ಕೇಳಿಕೊಂಡ ಮೇಲೆ ನರಸಿಂಹಾನಂದರು, ‘ನೀವೆಲ್ಲರೂ ಸಾಯುತ್ತೀರಿ, ನಿಮ್ಮ ಮಕ್ಕಳೂ ಸಾಯುತ್ತಾರೆ... ಎಂದು ಗುಡುಗಿದ್ದಾರೆ. ತ್ಯಾಗಿಯನ್ನು ರೂರ್ಕಿಯಲ್ಲಿ ಬಂಧಿಸಲಾಗಿದೆ ಎಂದು ಹರಿದ್ವಾರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಯೋಗೇಂದ್ರ ರಾವತ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. 10ಕ್ಕೂ ಹೆಚ್ಚು ಜನರನ್ನು ದ್ವೇಷ ಭಾಷಣ ಪ್ರಕರಣದಲ್ಲಿ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ. ಇದರಲ್ಲಿ ನರಸಿಂಹಾನಂದ, ತ್ಯಾಗಿ ಮತ್ತು ಅನ್ನಪೂರ್ಣ ಸೇರಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಕುರಿತು 10 ದಿನಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ಉತ್ತರಾಖಂಡ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಸೂಚಿಸಿದ ನಂತರ ಪ್ರಕರಣದಲ್ಲಿ ಮೊದಲ ಬಂಧನವಾಗಿದೆ.