Hardik Patel Politics ಹಾರ್ದಿಕ್ ಪಟೇಲ್ ಟ್ವಿಟರ್ ಖಾತೆಯಿಂದ ಕಾಂಗ್ರೆಸ್ ಡಿಲೀಟ್, ಪಕ್ಷ ತೊರೆಯುವ ಸೂಚನೆ!

By Suvarna NewsFirst Published May 2, 2022, 8:43 PM IST
Highlights
  • ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡ ಹಾರ್ದಿಕ್ ಪಟೇಲ್
  • ಟ್ವಿಟರ್‌ನಿಂದ ಕಾಂಗ್ರೆಸ್ ಹೆಸರು ತೆಗೆದು ಹಾಕಿದ ಹಾರ್ದಿಕ್
  • ಗುಜರಾತ್‌ನಲ್ಲಿ ಕಾಂಗ್ರೆಸ್ ಲೆಕ್ಕಾಚಾರ ಉಲ್ಟಾ ಮಾಡ್ತಾರಾ ಪಟೇಲ್
     

ನವದೆಹಲಿ(ಮೇ.02): ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಳ್ಳುತ್ತಿರುವ ಗುಜರಾತ್‌ನ ಪಾಟೀದಾರ್ ನಾಯಕ ಹಾರ್ದಿಕ್ ಪಟೇಲ್ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿರುವ ಸ್ಪಷ್ಟ ಸೂಚನೆ ನೀಡಿದ್ದಾರೆ. ಹಾರ್ದಿಕ್ ಪಟೇಲ್ ಟ್ವಿಟರ್ ಖಾತೆಯಿಂದ ಕಾಂಗ್ರೆಸ್ ಪಕ್ಷದ ಹೆಸರನ್ನು ತೆಗೆದು ಹಾಕಿದ್ದಾರೆ. 

ಇತ್ತೀಚೆಗಷ್ಟೇ ಬಿಜೆಪಿ ಪಕ್ಷ ಹೊಗಳಿದ ಹಾರ್ದಿಕ್ ಪಟೇಲ್ ಪಕ್ಷ ತೊರೆಯುವ ಸೂಚನೆ ನೀಡಿದ್ದರು. ಗುಜರಾತ್ ಚುನಾವಣೆಗೆ ಸಜ್ಜಾಗುತ್ತಿರುವ ಬೆನ್ನಲ್ಲೇ ಹಾರ್ದಿಕ್ ಪಟೇಲ್ ಹೇಳಿಕೆ ಕಾಂಗ್ರೆಸ್‌ಗೆ ಇರಿಸು ಮುರಿಸು ತಂದಿತ್ತು. ಟ್ವಿಟರ್ ಖಾತೆಯಲ್ಲಿ ಕಾಂಗ್ರೆಸ್ ನಾಯಕ ಅನ್ನೋ ಬಯೋಡಿಟೇಲ್ ಬದಲಾಗಿದೆ. ಇದೀಗ ಹೆಮ್ಮೆಯ ಭಾರತೀಯ ದೇಶಭಕ್ತ. ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತ ಎಂಬ ವಾಕ್ಯಗಳು ಮಾತ್ರ ಇವೆ. ಕಾಂಗ್ರೆಸ್ ನಾಯಕ, ಸದಸ್ಯ ಅನ್ನೋ ಮಾತಿಲ್ಲ. ಕಾಂಗ್ರೆಸ್ ಅನ್ನೋ ಹೆಸರನ್ನೇ ತೆಗೆದು ಹಾಕಿದ್ದಾರೆ.

ನಾನೂ ಕೂಡ ಹಿಂದೂ, ರಾಮಭಕ್ತ, ಬಿಜೆಪಿಗೆ ಸೇರೋ ಸೂಚನೆ ನೀಡಿದ್ರಾ ಹಾರ್ದಿಕ್ ಪಟೇಲ್?

ಕಾಂಗ್ರೆಸ್ ಒಳಜಗಳದಲ್ಲಿ ಹಾರ್ದಿಕ್ ಪಟೇಲ್ ಬಡವಾಗಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ತನಗೆ ಸ್ಥಾನ ಮಾನ ನೀಡುತ್ತಿಲ್ಲ ಅನ್ನೋ ಕೊರಗನ್ನು ಹಾರ್ದಿಕ್ ಪಟೇಲ್ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಅನ್ನೋ ಮಾತುಗಳು ಇವೆ. 

ಟ್ವಿಟರ್ ಮಾತ್ರವಲ್ಲ ವ್ಯಾಟ್ಸ್ಆ್ಯಪ್ ಹಾಗೂ ಟೆಲಿಗ್ರಾಂಗಳ ಬಯೋಡಿಟೇಲ್ಸ್‌ನಲ್ಲಿ ಕಾಂಗ್ರೆಸ್ ಹೆಸರು ತೆಗೆದುಹಾಕಿದ್ದಾರೆ. ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಭಾರಿ ಪ್ರತಿಭಟನೆ ಮೂಲಕ ಗುಜರಾತ್ ಪಾಟೀದಾರ್ ನಾಯಕನಾಗಿ ಗುರುತಿಸಿಕೊಂಡ ಹಾರ್ದಿಕ್ ಪಟೇಲ್ 2019ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡರು. ಮಾತು ಮಾತಿಗೂ ಬಿಜೆಪಿಯನ್ನು ಹಿಗ್ಗಾ ಮುಗ್ಗಾ ಟೀಕಿಸುತ್ತಿದ್ದ ಪಟೇಲ್ ಇದೀಗ ಬಿಜೆಪಿ ಪ್ರಶಂಸಿದ್ದರು. 

ಬಿಜೆಪಿಯಲ್ಲಿ ಕೆಲವು ಒಳ್ಳೇ ಅಂಶ
ಗುಜರಾತ್‌ ಚುನಾವಣೆಗೆ ದಿನಗಣನೆ ಆರಂಭವಾಗಿರುವ ನಡುವೆಯೇ ಕಾಂಗ್ರೆಸ್‌ ಪಕ್ಷದ ವಿರುದ್ಧ ಇತ್ತೀಚೆಗೆ ಅಸಮಾಧಾನ ಹೊರಹಾಕಿದ್ದ ಗುಜರಾತ್‌ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಹಾರ್ದಿಕ್‌ ಪಟೇಲ್‌ ಈಗ ಬಿಜೆಪಿಯನ್ನು ಹೊಗಳಿದ್ದಾರೆ. ‘ಬಿಜೆಪಿಯಲ್ಲಿ ಕೆಲವು ಒಳ್ಳೆಯ ಅಂಶಗಳಿವೆ. ನಾವು ಅದನ್ನು ಗುರುತಿಸಬೇಕು’ ಎಂದು ಹೇಳಿದ್ದಾರೆ. ಇದು ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಕೆರಳಿಸಿದೆ.

ಅಜ್ಞಾನ, ಅನಿರ್ದಿಷ್ಟತೆ, ಅಸಹಕಾರ... ಕಾಂಗ್ರೆಸ್‌ನಲ್ಲಿ ಹಾರ್ದಿಕ್ ಪಟೇಲ್ ಅಸಮಾಧಾನಕ್ಕೆ ಕಾರಣವೇ ಇದು!

‘ರಾಜಕೀಯವಾಗಿ ಬಿಜೆಪಿ ಹಲವು ನಿರ್ಣಯಗಳನ್ನು ಇತ್ತೀಚಿಗೆ ತೆಗೆದುಕೊಂಡಿದೆ. ಇಂತಹ ನಿರ್ಧಾರಗಳನ್ನು ಕೈಗೊಳ್ಳುವ ಶಕ್ತಿ ಆ ಪಕ್ಷಕ್ಕೆ ಇದೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು. ಅವರ ಪರವಾಗಿ ನಿಲ್ಲದಿದ್ದರೂ ಈ ಸತ್ಯವನ್ನು ನಾವು ಒಪ್ಪಿಕೊಳ್ಳಬೇಕು. ಕಾಂಗ್ರೆಸ್‌ ಸಹ ಗುಜರಾತ್‌ನಲ್ಲಿ ಬಲವಾಗಬೇಕು ಎಂದರೆ ಕೌಶಲ್ಯ ಮತ್ತು ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಸುಧಾರಿಸಿಕೊಳ್ಳಬೇಕು’ ಎಂದಿದ್ದಾರೆ.

ಆದರೆ, ‘ನಾನು ಯಾವುದೇ ಕಡೆಗೂ ವಾಲುವುದಿಲ್ಲ. ನಿಮ್ಮಲ್ಲಿ ಇಚ್ಛಾಶಕ್ತಿಯ ಕೊರತೆ ಇದ್ದಾಗ ಮಾತ್ರ ಎದುರಿಗೆ ಹಲವು ಆಯ್ಕೆಗಳು ಇರುತ್ತವೆ. ಆದರೆ ನನಗೆ ಇಚ್ಛಾಶಕ್ತಿಯ ಕೊರತೆ ಇಲ್ಲ. ರಾಜ್ಯದ ಒಳಿತಿಗೆ ಕೆಲಸ ಮಾಡುತ್ತೇನೆ’ ಎಂದು ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ, ‘ಕಳೆದ 3 ವರ್ಷಗಳಿಂದ ರಾಜ್ಯ ಕಾಂಗ್ರೆಸ್‌ ನನನ್ನು ಗುರುತಿಸುತ್ತಿಲ್ಲ. ಪಕ್ಷದ ಯಾವುದೇ ಸಭೆಗಳಿಗೆ ಕರೆಯುತ್ತಿಲ್ಲ. ಕೆಲವರು ನನಗೆ ಕಿರುಕುಳ ನೀಡುತ್ತಿದ್ದು, ಪಕ್ಷದಿಂದ ಹೊರದಬ್ಬಲು ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದ್ದರು. ಇದರ ಬೆನ್ನಲ್ಲೇ ಆಮ್‌ ಆದ್ಮಿ ಪಕ್ಷ ಸೇರುವಂತೆ ಅವರಿಗೆ ಆಹ್ವಾನ ಸಹ ನೀಡಲಾಗಿತ್ತು.

click me!