
ನವದೆಹಲಿ [ಮಾ.02]: ನಿರ್ಭಯಾ ಗ್ಯಾಂಗ್‌ರೇಪ್ ಹಾಗೂ ಕೊಲೆ ಪ್ರಕರಣದ ನಾಲ್ವರು ದೋಷಿಗಳಿಗೆ ಫೆ.17ರಂದು ಹೊರಡಿಸಿದ್ದ ಡೆತ್‌ವಾರಂಟ್‌ನಂತೆ ಮಂಗಳವಾರ ನೇಣು ಶಿಕ್ಷೆ ಜಾರಿ ಅನುಮಾನವಾಗಿದೆ. ಮೂವರು ದೋಷಿಗಳು ಗಲ್ಲು ಪ್ರಶ್ನಿಸಿ ಹಾಗೂ ತಡೆ ಕೋರಿ ಸುಪ್ರೀಂ ಕೋರ್ಟ್ ಹಾಗೂ ದಿಲ್ಲಿ ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಸೋಮವಾರ ನಡೆಯಲಿದೆ. ಜೊತೆಗೆ ಮತ್ತೊಬ್ಬ ದೋಷಿ ರಾಷ್ಟ್ರಪತಿ ಮುಂದೆ ಪರಿಷ್ಕೃತ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾನೆ.
ಇನ್ನೊಂದೆಡೆ, ಪ್ರಕರಣದ ದೋಷಿಗಳನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸಬೇಕು ಎಂದು ಕೇಂದ್ರ ಸರ್ಕಾರ ಕೋರಿದ್ದ ಅರ್ಜಿ ಮಾಚ್‌ರ್ 5ರಂದು ವಿಚಾರಣೆಗೆ ಬರಲಿದೆ ಎಂದು 5 ದಿನದ ಹಿಂದೆಯೇ ಸುಪ್ರೀಂ ಕೋರ್ಟ್ ಹೇಳಿತ್ತು. ಹೀಗಾಗಿ ಮಾರ್ಚ್ 3ರಂದು ಗಲ್ಲು ಶಿಕ್ಷೆ ಜಾರಿ ಆಗುವುದು ಅನುಮಾನ ಎನ್ನಲಾಗುತ್ತಿದೆ.
ಪವನ್ ಅರ್ಜಿ ವಿಚಾರಣೆ ಇಂದು: ದೋಷಿ ಪವನ್ ಗುಪ್ತಾ, ಗಲ್ಲು ಶಿಕ್ಷೆ ವಿರುದ್ಧ ಸಲ್ಲಿಸಿರುವ ಕ್ಯುರೇಟಿವ್ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ನಡೆಸಲಿದೆ.
ಖಿನ್ನತೆ, ಚಿಂತೆ ಸಾಮಾನ್ಯ: ನಿರ್ಭಯಾ ಹಂತಕ ವಿನಯ್ ನಾಟಕಕ್ಕೆ ಸೋಲು!...
ನ್ಯಾ. ಎನ್.ವಿ. ರಮಣ ನೇತೃತ್ವದ ಪಂಚಸದಸ್ಯ ಪೀಠವು ಈ ಅರ್ಜಿಯನ್ನು ತಮ್ಮ ಚೇಂಬರ್‌ನಲ್ಲೇ ವಿಚಾರಣೆಗೆ ಕೈಗೆತ್ತಿಕೊಳ್ಳಲಿದ್ದಾರೆ. ತನ್ನ ಶಿಕ್ಷೆಯನ್ನು ಗಲ್ಲಿನಿಂದ ಜೀವಾವಧಿಗೆ ಇಳಿಸಬೇಕೆಂದು ಪವನ್ ಕೋರಿದ್ದಾನೆ.
ಒಂದು ವೇಳೆ ಕ್ಯುರೇಟಿವ್ ಅರ್ಜಿ ತಿರಸ್ಕಾರಗೊಂಡರೂ, ರಾಷ್ಟ್ರಪತಿಗೆ ಕ್ಷಮಾದಾನ ಸಲ್ಲಿಸುವ ಅವಕಾಶ ಪವನ್ ಮುಂದೆ ಇದ್ದೇ ಇದೆ. ಆದರೆ ಇತರ ಮೂವರು ದೋಷಿಗಳ ಕ್ಷಮಾದಾನ ಅರ್ಜಿಗಳು ಈಗಾಗಲೇ ತಿರಸ್ಕಾರಗೊಂಡಿವೆ.
ಡೆತ್ ವಾರಂಟ್‌ಗೆ ತಡೆ ನೀಡಿ: ನಾಲ್ವರು ದೋಷಿಗಳ ಪೈಕಿ ಅಕ್ಷಯ್ ಸಿಂಗ್ ಹಾಗೂ ಪವನ್ ಕುಮಾರ್ ತಮ್ಮ ಮೇಲೆ ಜಾರಿಯಾಗಿರುವ ಡೆತ್ ವಾರೆಂಟ್‌ಗೆ ತಡೆ ನೀಡಬೇಕೆಂದು ಮನವಿ ಮಾಡಿದ್ದಾರೆ.
ಇನ್ನೊಂದೆಡೆ ಅಕ್ಷಯ್ ಕುಮಾರ್ ಹೊಸದಾಗಿ ಕ್ಷಮಾದಾನ ಅರ್ಜಿ ಸಲ್ಲಿಸಿದ್ದು, ಹಾಗಾಗಿ ಗಲ್ಲಿಗೆ ತಡೆ ನೀಡಬೇಕು ಎಂದು ವಾದಿಸಿದ್ದಾನೆ. ಅರ್ಜಿ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದ್ರ ರಾಣಾ, ಮಾ.2ರ ಒಳಗಾಗಿ ಮಾಹಿತಿ ನೀಡುವಂತೆ ತಿಹಾರ್ ಜೈಲಾಧಿಕಾರಿಗಳಿಗೆ ನೋಟಿಸು ನೀಡಿದ್ದಾರೆ. ಈ ಹಿಂದೆ ಅಕ್ಷಯ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ಅಪೂರ್ಣವಾಗಿದ್ದರಿಂದ ರಾಷ್ಟ್ರಪತಿಗಳು ತಿರಸ್ಕರಿಸಿದ್ದರು. ಹಾಗಾಗಿ ಹೊಸ ಅರ್ಜಿ ಸಲ್ಲಿಸಲಾಗಿದೆ ಎಂದು ದೋಷಿಗಳ ಪರ ವಕೀಲರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ