ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ಏರ್‌ಕ್ರ್ಯಾಶ್‌ : ಬೋಯಿಂಗ್‌ ಡ್ರೀಮ್‌ಲೈನರ್‌ ವಿಮಾನ ಪತನ ಇದೇ ಮೊದಲು

Published : Jun 13, 2025, 06:49 AM ISTUpdated : Jun 13, 2025, 06:57 AM IST
air india dreamliner

ಸಾರಾಂಶ

ಜಗತ್ತಿನ ಅತ್ಯಾಧುನಿಕ ಪ್ರಯಾಣಿಕ ವಿಮಾನವೆಂದೇ ಪರಿಗಣಿಸಲ್ಪಟ್ಟಿರುವ ಬೋಯಿಂಗ್ 787 ಡ್ರೀಮ್‌ಲೈನರ್‌ ವಿಮಾನ ಅಹಮದಾಬಾದ್‌ನಲ್ಲಿ ದುರಂತಕ್ಕೀಡಾಗಿದೆ. ಹೆಚ್ಚಿನ ಇಂಧನ ಕ್ಷಮತೆ ಹೊಂದಿರುವ ಈ ವಿಮಾನ ಹಿಂದೆ ಹಲವು ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿತ್ತು.

ನವದೆಹಲಿ: ಜಗತ್ತಿನ ಅತ್ಯಾಧುನಿಕ ಪ್ರಯಾಣಿಕ ವಿಮಾನವೆಂದೇ ಪರಿಗಣಿಸಲ್ಪಟ್ಟಿರುವ ಅಮೆರಿಕದ ಬೋಯಿಂಗ್‌ ಕಂಪನಿಯ 787 ಡ್ರೀಮ್‌ಲೈನರ್‌ ಅಪಘಾತಕ್ಕೆ ತುತ್ತಾಗಿದ್ದು ಇದೇ ಮೊದಲು. ಈ ಹಿಂದೆ ಅನೇಕ ಬಾರಿ ತಾಂತ್ರಿಕ ಸಮಸ್ಯೆಗಳಿಂದ ಸುದ್ದಿ ಮಾಡಿತ್ತಾದರೂ ದುರಂತಕ್ಕೆ ಸಾಕ್ಷಿಯಾಗಿದ್ದು ಮಾತ್ರ ಇದೇ ಮೊದಲು. ಹೀಗಾಗಿ ಅಹಮದಾಬಾದ್‌ ನಡೆದ ಇಂಡಿಯನ್‌ ಏರ್‌ಲೈನ್ಸ್‌ ದುರಂತ ಬೋಯಿಂಗ್‌ ಡ್ರೀಮ್‌ಲೈನರ್‌ ವಿಮಾನದ ಪಾಲಿಗೆ ಕಪ್ಪು ಚುಕ್ಕೆಯಾಗಿ ಉಳಿದುಹೋಗಲಿದೆ.

ಹೆಚ್ಚಿನ ಇಂಧನ ಕ್ಷಮತೆಗಾಗಿ ಹೆಸರುವಾಸಿಯಾಗಿರುವ ಬೋಯಿಂಗ್‌ 787 ಡ್ರೀಮ್‌ಲೈನರ್‌ ವಿಮಾನ 13,500 ಕಿ.ಮೀ. ದೂರ ನಿರಂತರವಾಗಿ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ. ಇದೇ ಕಾರಣಕ್ಕೆ ದೂರದ ಪ್ರಯಾಣಕ್ಕಾಗಿ ಹೆಚ್ಚಾಗಿ ಈ ವಿಮಾನ ಬಳಸಲಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿರುವ ಈ ವಿಮಾನ ಪ್ರಯಾಣಿಕ ಸ್ನೇಹಿಯಾಗಿಯೂ ಗುರುತಿಸಿಕೊಂಡಿದೆ.

ಕಾರ್ಬನ್‌ ಫೈಬರ್ ಬಲವರ್ಧಿತ ವಸ್ತುಗಳನ್ನು ಬಳಸಿಕೊಂಡು ಈ ವಿಮಾನ ನಿರ್ಮಿಸಿರುವುದರಿಂದ ಇದರ ತೂಕ ಕಡಿಮೆ. ಹೀಗಾಗಿ ಇದು ಕಡಿಮೆ ಇಂಧನ ಬಳಸಿ ಹೆಚ್ಚುದೂರ ಕ್ರಮಿಸುತ್ತದೆ. ಬೆಳಕಿನ ಪ್ರಮಾಣವನ್ನು ಕಡಿಮೆ ಮಾಡುವ ವಿಶೇಷವಾದ ದೊಡ್ಡ ಕಿಟಕಿಗಳನ್ನು ಹೊಂದಿರುವುದರಿಂದ ಪ್ರಯಾಣಿಕರಿಗೆ ಆಹ್ಲಾದಕರ ಪ್ರಯಾಣದ ಅನುಭವ ನೀಡುತ್ತದೆ. ಈ ವಿಮಾನದ 787-8 ಶ್ರೇಣಿಯನ್ನು ಮೊದಲ ಬಾರಿಗೆ 2009ರಲ್ಲಿ ಲೋಕಾರ್ಪಣೆ ಮಾಡಲಾಗಿತ್ತು. ಇದು ಹೆಚ್ಚು ಕಡಿಮೆ 242ರಿಂದ 290ರವರೆಗಿನ ಸೀಟುಗಳ ಸಾಮರ್ಥ್ಯ ಹೊಂದಿದೆ. ಇದೀಗ ಅಹಮದಾಬಾದ್‌ನಲ್ಲಿ ದುರಂತಕ್ಕೀಡಾದ ವಿಮಾನವು 787-8 ಸರಣಿಯದ್ದಾಗಿದೆ. 2013ರಿಂದ ಏರ್‌ಇಂಡಿಯಾಗೆ ಇದು ಸೇವೆ ಒದಗಿಸುತ್ತಿದೆ. ಏರ್‌ ಇಂಡಿಯಾವು ಸದ್ಯ 30 ಡ್ರೀಮ್‌ಲೈನರ್‌ ವಿಮಾನಗಳನ್ನು ಹೊಂದಿದೆ.

ತಾಂತ್ರಿಕ ಸಮಸ್ಯೆ:

ಸದ್ಯ ವಿಶ್ವಾದ್ಯಂತ 1100ಕ್ಕೂ ಹೆಚ್ಚುಡ್ರೀಮ್‌ ಲೈನರ್‌ ವಿಮಾನಗಳು ಓಡಾಟ ನಡೆಸುತ್ತಿವೆ. ಕೋಟ್ಯಂತರ ಮಂದಿ ಈ ವಿಮಾನದಲ್ಲಿ ಈಗಾಗಲೇ ಸಂಚರಿಸಿದ್ದಾರೆ. ಆದರೆ, ಈ ವಿಮಾನ ಪದೇ ಪದೆ ತಾಂತ್ರಿಕ ಮತ್ತು ಸುರಕ್ಷತಾ ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದೆ. 2013ರಲ್ಲಿ ಲಿಥಿಯಮ್‌ ಇಯಾನ್‌ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಸಂಪೂರ್ಣ ಡ್ರೀಮ್‌ಲೈನರ್‌ ವಿಮಾನಗಳ ಹಾರಾಟ ರದ್ದು ಮಾಡಲಾಗಿತ್ತು. ಇನ್ನು 2024ರಲ್ಲಿ ಬೋಯಿಂಗ್‌ ಕಂಪನಿಯ ಎಂಜಿನಿಯರ್‌ ಸ್ಯಾಮ್ ಸಲೇಫೋರ್‌ ಎಂಬಾತ ವಿಮಾನದ ಬಾಡಿಯಲ್ಲಿರುವ ದೋಷವನ್ನು ಅಮೆರಿಕದ ಸಂಸತ್‌ನ ಗಮನಕ್ಕೆ ತಂದಿದ್ದರು. ವಿಮಾನದ ಜೋಡಣೆಯಲ್ಲಿ ಮಾಡುವ ಸಣ್ಣ ತಪ್ಪೊಂದು ಗಂಭೀರ ಸಮಸ್ಯೆಗೆ ಕಾರಣವಾಗಬಹುದು ಎಂದು ಹೇಳಿಕೊಂಡಿದ್ದ. ಈ ಸಂಬಂಧ ಫೆಡರಲ್‌ ಏವಿಯೇಷನ್‌ ಅಡ್ಮಿನಿಸ್ಟ್ರೇಷನ್‌ ತನಿಖೆಗೆ ಆದೇಶಿದ್ದು, ಅದು ಇನ್ನೂ ನಡೆಯುತ್ತಿದೆ.

ಇದಲ್ಲದೆ, ಮಾರ್ಚ್‌ 2024ರಲ್ಲಿ ಎಎಟಿಎಎಂ ಏರ್‌ಲೈನ್ಸ್‌ನ ಬೋಯಿಂಗ್‌ 787-9 ವಿಮಾನವು ಹಾರಾಟ ಮಾಡುತ್ತಿದ್ದಾಗಲೇ ದಿಢೀರ್‌ ಕೆಲವು ಅಡಿಗಳಷ್ಟು ಕೆಳಕ್ಕೆ ಕುಸಿದಿದ್ದು. ಇದರಿಂದ 50 ಪ್ರಯಾಣಿಕರು ಗಾಯಗೊಂಡಿದ್ದರು. ಕಾಕ್‌ಪಿಟ್‌ನ ಕುರ್ಚಿಯ ಸ್ವಿಚ್‌ನ ಸಮಸ್ಯೆ ಈ ಘಟನೆಗೆ ಕಾರಣ ಎಂದು ನಂತರ ಬಯಲಾಗಿತ್ತು.

ಇದಲ್ಲದೆ ಕೆಲ ವರ್ಷಗಳಿಂದ ಪೈಲಟ್‌ಗಳು ಇಂಜಿನ್‌ ಐಸಿಂಗ್‌, ಜನರೇಟರ್‌ ವೈಫಲ್ಯಗಳು ಮತ್ತು ಇಂಧನ ಲೀಕ್‌ಗೆ ಸಂಬಂಧಿಸಿ ಅನೇಕ ಬಾರಿ ದೂರು ನೀಡಿದ್ದರು. ಆದರೆ, ಇದರ ಹೊರತಾಗಿಯೂ ಈ ವಿಮಾನ ಯಾವುದೇ ಭಾರೀ ದುರ್ಘಟನೆಗೆ ಸಾಕ್ಷಿಯಾಗಿರಲಿಲ್ಲ.

ಕಳೆದ ವರ್ಷವಷ್ಟೇ 9400 ಕೋಟಿ ಪರಿಹಾರ ಪಾವತಿಸಿದ್ದ ಬೋಯಿಂಗ್‌

2018-19ರಲ್ಲಿ ಬೋಯಿಂಗ್‌ನ 737 ಮ್ಯಾಕ್ಸ್‌ ವಿಮಾನಗಳು ಇಂಡೋನೇಷ್ಯಾ ಮತ್ತು ಇಥಿಯೋಪಿಯಾದಲ್ಲಿ ದುರಂತಕ್ಕೊಳಗಾಗಿದ್ದವು. ಈ ಘಟನೆಯಲ್ಲಿ 346 ಮಂದಿ ಸಾವಿಗೀಡಾಗಿದ್ದರು. ಇದರಿಂದ ಸುಮಾರು 1 ವರ್ಷಗಳ ಕಾಲ ಈ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿತ್ತು. ಕಳೆದ ತಿಂಗಳಷ್ಟೇ ಈ ಎಡವಟ್ಟಿಗಾಗಿ ಬೋಯಿಂಗ್‌ ಕಂಪನಿಯು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅಮೆರಿಕದ ನ್ಯಾಯಾಂಗ ಇಲಾಖೆಗೆ 9400 ಕೋಟಿ ರು. ಪರಿಹಾರ ಪಾವತಿಸಲು ಒಪ್ಪಿಗೆ ನೀಡಿತ್ತು.

ಕುಸಿದ ಬೋಯಿಂಗ್‌ ಷೇರು

ಗುಜರಾತ್‌ನಲ್ಲಿ ಏರ್‌ ಇಂಡಿಯಾ ವಿಮಾನ ಪತನದ ಸುದ್ದಿ ಹೊರಬೀಳುತ್ತಿದ್ದಂತೆ ಅಮೆರಿಕದ ಮಾರುಕಟ್ಟೆಯಲ್ಲಿ ಬೋಯಿಂಗ್‌ ವಿಮಾನದ ಷೇರುಗಳು ಭಾರೀ ಕುಸಿತ ಕಂಡಿವೆ. ಬೋಯಿಂಗ್ ಷೇರುಗಳು ಗುರುವಾರ ಸುಮಾರು ಶೇ.8ರಷ್ಟು ಪತನ ಕಂಡಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..