ಚೀನಾಕ್ಕೆ ಎಚ್‌ಎಎಲ್‌ ಹೆಲಿಕಾಪ್ಟರ್‌ ಸಡ್ಡು!

By Kannadaprabha NewsFirst Published Sep 10, 2020, 8:23 AM IST
Highlights

ಚೀನಾಕ್ಕೆ ಎಚ್‌ಎಎಲ್‌ ಹೆಲಿಕಾಪ್ಟರ್‌ ಸಡ್ಡು| ಹಿಮಾಲಯದ ಎತ್ತರ ಪ್ರದೇಶದಲ್ಲಿ ಯಶಸ್ವಿ ಕಾರ್ಯಾಚರಣೆ

ನವದೆಹಲಿ(ಸೆ.10): ಚೀನಾ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಮುಂದುವರೆದಿರುವ ಹಂತದಲ್ಲೇ, ಎಚ್‌ಎಎಲ್‌ನ ಸ್ವದೇಶಿ ನಿರ್ಮಿತ ಹಗುರ ಯುದ್ಧ ಹೆಲಿಕಾಪ್ಟರ್‌ ಪರೀಕ್ಷಾರ್ಥ ಹಾರಾಟ ನಡೆಸುವ ಮೂಲಕ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಎಚ್‌ಎಎಲ್‌ ಸಿದ್ಧಪಡಿಸಿರುವ ಲೈಟ್‌ ಯುಟಿಲಿಟಿ ಹೆಲಿಕಾಪ್ಟರ್‌ (ಎಲ್‌ಯುಎಚ್‌) ಅನ್ನು ಹಿಮಾಲಯದ ಎತ್ತರ ಹಾಗೂ ಅತ್ಯಂತ ಉಷ್ಣ ಪ್ರದೇಶದಲ್ಲಿ 10 ದಿನ ಪರೀಕ್ಷಾರ್ಥ ಪ್ರಯೋಗಕ್ಕೆ ಒಳಪಡಿಸಲಾಗಿತ್ತು. ಅತ್ಯಂತ ವಿಷಮ ಪರಿಸ್ಥಿತಿಯಲ್ಲಿ ಹೆಲಿಕಾಪ್ಟರ್‌ ಯಶಸ್ವಿ ಕಾರ್ಯಾಚರಣೆ ನಡೆಸಿದೆ ಎಂದು ಎಚ್‌ಎಎಲ್‌ ತಿಳಿಸಿದೆ.

ಪರೀಕ್ಷೆ ಹೇಗಿತ್ತು?

ಲೇಹ್‌ನಲ್ಲಿ 3.3 ಕಿ.ಮೀ. ಎತ್ತರ ಹಾಗೂ +320 ಡಿಗ್ರಿ ಸೆಲ್ಷಿಯಸ್‌ ತಾಪಮನದಲ್ಲಿ ಹೆಲಿಕಾಪ್ಟರ್‌ ಅನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಲೇಹ್‌ನಿಂದ ಹಾರಾಟ ಕೈಗೊಂಡ ಹೆಲಿಕಾಪ್ಟರ್‌ ಸಮುದ್ರ ಮಟ್ಟದಿಂದ 5 ಕಿ.ಮೀ. ಎತ್ತರದಲ್ಲಿ ಇರುವ ದೌಲತ್‌ ಬೇಗ್‌ ಓಲ್ಡಿಯಲ್ಲಿ ಹಾರಾಟ ನಡೆಸುವ ಮೂಲಕ ಕಾರ್ಯ ಕ್ಷಮತೆಯನ್ನು ಸಾಬೀತುಪಡಿಸಿದೆ.

ಅಲ್ಲದೇ ಸಿಯಾಚಿನ್‌ ಮಂಜುಗಡ್ಡೆ ಪ್ರದೇಶದ ಎತ್ತರ ಪ್ರದೇಶದಲ್ಲೂ ಹೆಲಿಕಾಪ್ಟರ್‌ ಪೇಲೋಡ್‌ನೊಂದಿಗೆ ಹಾರಾಟ ಪ್ರದರ್ಶನ ನೀಡಿದೆ. ವಿಶ್ವದ ಅತಿ ಎತ್ತರ ಹೆಲಿಪ್ಯಾಡ್‌ಗಳಾದ ಅಮರ್‌ ಮತ್ತು ಸೊನಂನಲ್ಲಿ ಪೈಲಟ್‌ಗಳು ಹೆಲಿಕಾಪ್ಟರ್‌ಅನ್ನು ಇಳಿಸಿದ್ದಾರೆ.

click me!