India Gate: ಮತ್ತೊಂದು ಅಯೋಧ್ಯೆ ಆಗಲಿದೆಯೇ ಕಾಶಿಯ ಗ್ಯಾನ್‌ವಾಪಿ ಮಸೀದಿಯ ವಿವಾದ?

By Suvarna NewsFirst Published May 20, 2022, 12:50 PM IST
Highlights

ಶಿವಪುರಾಣದಲ್ಲಿ ಕಾಶಿಯ ಅವಿರಮುಕ್ತೇಶ್ವರ ಲಿಂಗ ಶಿವನಿಂದಲೇ ಸ್ಥಾಪಿತ ಎಂದು ಹೇಳಲಾಗಿದ್ದರೂ 2000 ವರ್ಷಗಳ ಹಿಂದೆ ವಿಕ್ರಮಾದಿತ್ಯ ಭವ್ಯ ದೇವಾಲಯವನ್ನು ಕಟ್ಟಿದ ಎಂದು ಇತಿಹಾಸಕಾರರು ಹೇಳುತ್ತಾರೆ. 

ಒಳಗಡೆ ಪರಸ್ಪರ ದ್ವೇಷ ಇಟ್ಟುಕೊಂಡು ಸುಳ್ಳುಗಳ ಆಧಾರದ ಮೇಲೆ ಕಟ್ಟಿದ ಭಾವೈಕ್ಯದ ಸೌಧ ಕೆಲ ದಿನ ನೋಡಲು ಚೆಂದ ಅನ್ನಿಸಬಹುದೇ ಹೊರತು ಆ ಇಮಾರತು ಬಹಳ ದಿನ ಉಳಿಯುವುದಿಲ್ಲ. ಬಾಯಿ ಮಾತಿನ ತೋರಿಕೆಯ ಸೆಕ್ಯುಲರಿಸಂಗಾಗಿ ಇಲ್ಲಿನ ಸಂಸ್ಕೃತಿ, ಸಭ್ಯತೆ ಮತ್ತು ಜನರ ಮೇಲೆ ನಡೆದ ದಾಳಿ, ಧರ್ಮಾಂತರ ಹಿಂಸೆ ಮುಜುಗರಗಳನ್ನು ಮುಚ್ಚಿಟ್ಟಪರಿಣಾಮವೇ ಇವತ್ತಿನ ಹಿಂದೂ ಮುಸ್ಲಿಂ ನಡುವಿನ ಕಂದಕ ಕಿರಿದಾಗುವ ಬದಲು ದೊಡ್ಡದಾಗುತ್ತಿದೆ.

500 ವರ್ಷಗಳ ಹಿಂದೆ ಆಳುತ್ತಿದ್ದ ಒಬ್ಬ ಮೊಗಲ ದೊರೆ ಇಲ್ಲಿನ ಜನರ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಕೇತಗಳನ್ನು ಅಳಿಸಿ ಹೊಸಕಿ ಹಾಕಿ ಅಣಕಿಸಲೇನೋ ಎಂಬಂತೆ ತಾನು ನಂಬುವ ಪೂಜಾ ಪದ್ಧತಿಯ ಕಟ್ಟಡವನ್ನು ಬಲವಂತದಿಂದ ಕಟ್ಟಿದರೂ ಕೂಡ ಸತ್ಯವನ್ನು ಮರೆಮಾಚಿ ಭಾವೈಕ್ಯತೆಯ ಕೇಂದ್ರ ಎಂಬಂತೆ ತಲೆಮಾರುಗಳ ಮಸ್ತಿಷ್ಕಗಳಲ್ಲಿ ತುಂಬುತ್ತಿದ್ದುದೇ ಇವತ್ತಿನ ಅತಿರೇಕದ ಪ್ರತಿಕ್ರಿಯೆಗಳಿಗೆ ಮುಖ್ಯ ಕಾರಣ.

Latest Videos

India Gate: ನಾಯಕತ್ವ ಬದಲಿಸಲು ಬಿಜೆಪಿ ಸಿದ್ದವಿಲ್ಲ, ಹೈಕಮಾಂಡ್ ಲೆಕ್ಕಾಚಾರ ಏನು?

ಮೊಹಮ್ಮದ್‌ ಘೋರಿಯಿಂದ ಹಿಡಿದು ಬಾಬರ್‌, ಔರಂಗಜೇಬ್ ಇವರೆಲ್ಲ ಲೂಟಿಕೋರರು, ಅಷ್ಟೇ ಅಲ್ಲ ಇಲ್ಲಿನ ಸಾಂಸ್ಕೃತಿಕ ಆಸ್ತಿತ್ವವನ್ನೇ ಬುಡಮೇಲು ಮಾಡಲು ನೋಡಿದ ವಿದೇಶಿ ಆಕ್ರಮಣಕಾರರು ಎಂದು ಇರುವ ಸತ್ಯವನ್ನು ಹೇಳಿದ್ದರೆ ಅಕ್ಕಪಕ್ಕದಲ್ಲಿರುವ ಮಂದಿರ ಮಸೀದಿಗಳನ್ನು ಶುದ್ಧ ಇತಿಹಾಸದ ದೃಷ್ಟಿಯಿಂದ ನೋಡಲು ಸಾಧ್ಯವಿತ್ತು. ಯಾವುದನ್ನು ದುರುದ್ದೇಶಪೂರ್ವಕವಾಗಿ ಮರೆಮಾಚುವ ಪ್ರಯತ್ನ ನಡೆಯುತ್ತದೋ ಸತ್ಯ ಗೊತ್ತಾದಾಗ ಭಾವನೆಗಳ ವೈಪರೀತ್ಯಕ್ಕೆ ಕಾರಣವಾಗುತ್ತದೆ ಎನ್ನುವುದು ಸುಳ್ಳು ಕಥೆಗಳನ್ನು ಹೆಣೆದವರಿಗೆ ಈಗಲಾದರೂ ಅರ್ಥವಾಗಬೇಕು.

ಇತಿಹಾಸದಲ್ಲಿ ನಿಜಕ್ಕೂ ಏನಾಗಿತ್ತು?

ಶಿವಪುರಾಣದಲ್ಲಿ ಕಾಶಿಯ ಅವಿರಮುಕ್ತೇಶ್ವರ ಲಿಂಗ ಶಿವನಿಂದಲೇ ಸ್ಥಾಪಿತ ಎಂದು ಹೇಳಲಾಗಿದ್ದರೂ 2000 ವರ್ಷಗಳ ಹಿಂದೆ ವಿಕ್ರಮಾದಿತ್ಯ ಭವ್ಯ ದೇವಾಲಯವನ್ನು ಕಟ್ಟಿದ ಎಂದು ಇತಿಹಾಸಕಾರರು ಹೇಳುತ್ತಾರೆ. ಆದರೆ ಕಾಶಿಯ ಮೇಲೆ ಮೊದಲ ದಾಳಿ ನಡೆದಿದ್ದು 1035ರಲ್ಲಿ ಇವತ್ತಿನ ಅಷ್ಘಾನಿಸ್ತಾನದಿಂದ ಬಂದ ಲೂಟಿಕೋರ ಮೊಹಮ್ಮದ ಘಜನಿ ಪುತ್ರ ನಿಯಾಲಟಗಿನ್‌ನಿಂದ. ಕೆಲವೇ ಗಂಟೆಗಳ ಕಾಲ ಗಂಗಾ ನದಿ ದಾಟಿ ಇಲ್ಲಿಗೆ ಬಂದಿದ್ದ ಘಜನಿ ಪುತ್ರ ಮಂದಿರ ಹಾನಿಗೊಳಿಸಿ ಖಜಾನೆ ಲೂಟಿ ಮಾಡಿ ಹೊರಟುಹೋದ.

ನಂತರ ಇನ್ನೊಮ್ಮೆ ಘಜನಿ ತಂಗಿಯ ಮಗ ಸಯ್ಯದ್‌ ಸರ್ಲಾ ಮಸೂದ್‌ನ ದಾಳಿ ವಿಫಲವಾಗಿತ್ತು. ಅದಾದ ಮೇಲೆ 1100ರಲ್ಲಿ ಪಟ್ಟಏರಿದ ಚಂದ್ರದೇವ ಈ ಮಂದಿರದ ಜೀರ್ಣೋದ್ಧಾರ ಮಾಡಿ ಮಂದಿರವನ್ನು ಮುತ್ತುರತ್ನಗಳಿಂದ ತುಂಬಿಸಿದ. ಮುಂದೆ 1194ರಲ್ಲಿ ಇಲ್ಲಿಗೆ ಬಂದ ಇನ್ನೊಬ್ಬ ಲೂಟಿಕೊರ ಮೊಹಮ್ಮದ್‌ ಘೋರಿಯ ಗುಲಾಂ ಸೇನಾಧಿಪತಿ ಕುತುಬುದ್ದೀನ್‌ ಐಬಕ್‌ ಇಲ್ಲಿನ 1000 ಮಂದಿರ ಕೆಡವಿ ಬಲವಂತದಿಂದ ಸಾವಿರಾರು ಹಿಂದೂಗಳ ಮತಾಂತರ ಮಾಡಿಸಿ ಒಟ್ಟು 1400 ಒಂಟೆಗಳ ಮೇಲೆ ಇಲ್ಲಿಂದ ಲೂಟಿ ಹೊಡೆದ ಬೆಳ್ಳಿ ಬಂಗಾರ ಮುತ್ತು ವಜ್ರ ದಿಲ್ಲಿಗೆ ಒಯ್ದ.

ಖುಷಿಯಾದ ಘೋರಿ ತನ್ನ ಗುಲಾಂ ಕುತುಬುದ್ದೀನ್‌ ಐಬಕ್‌ನನ್ನೇ ದಿಲ್ಲಿ ಸಿಂಹಾಸನದ ಮೇಲೆ ಕೂರಿಸಿ ಹೊರಟುಹೋದ. ಅಲ್ಲಿಂದ ಮುಂದೆ ಹಿಂದೂ ರಾಜರು ಪುನರಪಿ ಮಂದಿರ ಕಟ್ಟಿಸುವುದು, ಮುಸ್ಲಿಂ ದಾಳಿಕೋರರಾದ ರಜಿಯಾ ಸುಲ್ತಾನಾ, ಇಬ್ರಾಹಿಂ ಲೋಧಿ ಮಂದಿರ ಕೆಡವುವುದು, ಕೈಗೆ ಸಿಕ್ಕಿದ್ದನ್ನು ದೋಚುವುದು ನಡೆದೇ ಇತ್ತು. ಆದರೆ 1669ರಲ್ಲಿ ಕಾಶಿಯ ಮಂದಿರ ಕೆಡವಲು ತನ್ನ ಸುಬೇದಾರನನ್ನು ಕಳುಹಿಸಿದ ಮೊಗಲ್ ದೊರೆ ಔರಂಗಜೇಬ್‌ ಮಂದಿರ ಕೆಡವಿ ಅದೇ ಮಂದಿರದ ಅವಶೇಷಗಳ ಮೇಲೆ ಮಸೀದಿ ಕಟ್ಟಿಸಿದ. ಘಜನಿ, ಘೋರಿ ಇವರೆಲ್ಲ ಲೂಟಿಕೋರರು. ಅವರ ಉದ್ದೇಶ ಮುಖ್ಯವಾಗಿ ಬೆಳ್ಳಿ-ಬಂಗಾರ ಲೂಟಿ ಮಾಡುವುದಾಗಿತ್ತು.

ಕಾಂಗ್ರೆಸ್ ಮತ್ತು ಪ್ರಶಾಂತ್ ಕಿಶೋರ್ ನಡುವಿನ ಮಾತುಕತೆ ಮುರಿದು ಬೀಳಲು ನಿಜವಾದ ಕಾರಣ ಏನು?

ಆದರೆ ಬಾಬರ್‌ ಮತ್ತು ಔರಂಗಜೇಬನ ಉದ್ದೇಶ ಬರೀ ಲೂಟಿ ಆಗಿರಲಿಲ್ಲ, ಇಲ್ಲಿನ ಹಿಂದೂಗಳನ್ನು ಮತಾಂತರ ಮಾಡಿ ಇಸ್ಲಾಂ ಬಾಹುಳ್ಯ ರಾಷ್ಟ್ರವನ್ನಾಗಿ ಮಾಡುವುದಾಗಿತ್ತು. ಹೀಗಾಗಿ ಗಂಗೆಯ ತಟದಲ್ಲೇ ಇದ್ದ ಬಿಂದುಮಾಧವ ದೇವಸ್ಥಾನ ಕೆಡವಿ ಧಾರಾಹರ ಮಸೀದಿ ಮತ್ತು ಕೃತಿವಾಸವೇಶ್ವರ ದೇವಾಲಯ ಕೆಡವಿ ತನ್ನ ಹೆಸರಿನ ಅಲಂಗೀರ ಮಸೀದಿ ಕಟ್ಟಿಸಿದ ಮೇಲೂ ನಿಲ್ಲದ ಔರಂಗಜೇಬ…, ಕಾಶಿಗೆ ಮೊಹಮ್ಮದ್‌ಪುರ ಎಂದು ಹೆಸರು ಕೊಟ್ಟು ನಾಣ್ಯಗಳನ್ನು ಹೊರಡಿಸಿದ. ಆತನ ದಾಳಿಯ ಕ್ರೌರ್ಯತೆ ಎಷ್ಟಿತ್ತು ಎಂದರೆ 1669ರ ದಾಳಿಯ 125 ವರ್ಷಗಳ ನಂತರದವರೆಗೆ ಕಾಶಿಯಲ್ಲಿ ಬಾಬಾ ವಿಶ್ವೇಶ್ವರ ದೇವಸ್ಥಾನ ಇರಲಿಲ್ಲ.

ನಂತರ ಮರಾಠಾ ರಾಣಿ ಅಹಿಲ್ಯಾಬಾಯಿ ಹೋಳ್ಕರ ಔರಂಗಜೇಬ್ ಕಟ್ಟಿದ್ದ ಮಸೀದಿಯ ಪಕ್ಕದಲ್ಲಿ ಕಟ್ಟಿಸಿದ್ದೇ ಈಗಿರುವ ದೇವಾಲಯ. ಹೀಗಾಗಿ ನಂದಿಯ ಮುಖ ಮಸೀದಿ ಕಡೆಗೆ ಇದೆಯೇ ಹೊರತು ಈಗಿನ ಮಂದಿರದ ಕಡೆ ಇಲ್ಲ. ಈ ರಕ್ತಸಿಕ್ತ ಇತಿಹಾಸವನ್ನು ಭಾವೈಕ್ಯತೆ ಎಂಬ ಸಂಗಮವರಿ ಕಲ್ಲು ಹಾಕಿ ಮುಚ್ಚಿಲಾಗಿತ್ತು. ಅದು ಈಗ ಹೊರಬರುತ್ತಿದೆ ಅಷ್ಟೆ. 2022ರಲ್ಲಿ ಕುಳಿತುಕೊಂಡು 1669ರಲ್ಲಿ ನಡೆದ ಎಲ್ಲ ತಪ್ಪುಗಳನ್ನು ಹಳೆಯ ರೂಪದಲ್ಲಿ ಸರಿ ಮಾಡುವುದು ಕಷ್ಟ. ಆದರೆ ನಮ್ಮ ಪೂರ್ವಜರ ಮೇಲೆ, ನಮ್ಮ ಸಂಸ್ಕೃತಿಯ ಮೇಲೆ, ನಮ್ಮ ಜೀವನ ಪದ್ಧತಿಯ ಮೇಲೆ ಹೊರಗಿನಿಂದ ಬಂದವರಿಂದ ಧರ್ಮದ ಹೆಸರಿನಲ್ಲಿ ಯಾವ ರೀತಿಯ ಅನಾಗರಿಕ ಅಮಾನುಷ ದಾಳಿಗಳು ನಡೆದವು ಎಂಬುದು ವರ್ತಮಾನಕ್ಕೆ ಗೊತ್ತಾಗಬೇಕು.

ಬ್ರಿಟಿಷ್‌ ಕಾಲದಲ್ಲಿ ಏನು ನಡೆದಿತ್ತು?

ಮಾಳವ ಪ್ರಾಂತ್ಯದ ರಾಣಿ ಅಹಿಲ್ಯಾಬಾಯಿ ಹೋಳ್ಕರ್‌ 1780ರಲ್ಲಿ ಹೊಸ ವಿಶ್ವೇಶ್ವರ ಮಂದಿರವನ್ನು ಕಟ್ಟಿಸಿದ ನಂತರ 1809ರಲ್ಲಿ ಕಾಶಿಯಲ್ಲಿ ಹಿಂದೂ ಮುಸ್ಲಿಮರ ನಡುವೆ ಜೋರು ಜಗಳ ನಡೆದು ಹಿಂದೂಗಳು ಮಸೀದಿ ಇರುವ ಜಾಗೆಯನ್ನು ವಶಕ್ಕೆ ತೆಗೆದುಕೊಂಡರು. ಆಗ ಬಂಗಾಳದ ಬ್ರಿಟಿಷ್‌ ಗವರ್ನರ್‌, ವಾರಾಣಸಿಯ ದಂಡಾಧಿಕಾರಿ ಆಗಿದ್ದ ವಾಟ್ಸನ್‌ಗೆ ವರದಿ ನೀಡುವಂತೆ ಹೇಳುತ್ತಾರೆ. ಪೂರ್ತಿ ಜಾಗೆಯ ಸರ್ವೇ ನಡೆಸಿದ ವಾಟ್ಸನ್‌ ಸಾಹೇಬ ಅಲ್ಲಿ ಮೊದಲು ಮಂದಿರ ಇತ್ತು ಎನ್ನಲು ಸಾಕಷ್ಟುಪುರಾವೆಗಳಿವೆ.

India Gate: ಟಿಕೆಟ್ ಹಂಚಿಕೆ, ರಣತಂತ್ರಗಳನ್ನು ಹೆಣೆಯುವುದರಲ್ಲಿ ಫ್ರೀ ಹ್ಯಾಂಡ್ ಕೊಡಿ ಅಂದ ಡಿಕೆಶಿ

ಅಕ್ಕಪಕ್ಕದಲ್ಲಿ 1008 ಮಂದಿರಗಳಿರುವಾಗ ಮಧ್ಯದಲ್ಲಿ ಮಸೀದಿ ಹೇಗೆ ಉದ್ಭವ ಆಗಲು ಸಾಧ್ಯ? ಪೂರ್ತಿ ಜಾಗೆ ಹಿಂದೂಗಳಿಗೆ ಬಿಟ್ಟುಕೊಡುವುದೇ ಸೂಕ್ತ ಎಂದು ವರದಿ ಸಲ್ಲಿಸಿದ. ಆದರೆ ಬ್ರಿಟಿಷ್‌ ಸರ್ಕಾರ ಇದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಅದಾದ 222 ವರ್ಷದ ಬಳಿಕವೂ ಅದೇ ವಾದ ಮುಂದಿಟ್ಟುಕೊಂಡು ಹಿಂದೂಗಳು ಮತ್ತು ಮುಸ್ಲಿಮರು ನ್ಯಾಯಾಲಯದ ಮುಂದೆ ಇದ್ದಾರೆ.

ನ್ಯಾಯಾಲಯದ ನಿಷ್ಕರ್ಷೆಯ ನಂತರ

ಮಸೀದಿಯ ಆಡಳಿತ ಮಂಡಳಿ ಸರ್ವೇಗೆ ತಡೆಯಾಜ್ಞೆ ನೀಡುವಂತೆ ಸುಪ್ರೀಂಕೋರ್ಚ್‌ ಮೆಟ್ಟಿಲು ಏರಿದ್ದರೂ ಕೂಡ ಈಗಾಗಲೇ ಸರ್ವೇ ಆಗಿ ವರದಿ ಕೂಡ ಕೆಳ ನ್ಯಾಯಾಲಯದಲ್ಲಿದೆ. ಇವತ್ತಿನ ಸುಪ್ರೀಂಕೋರ್ಚ್‌ ವಿಚಾರಣೆ ಕಾರಣದಿಂದ ಕೆಳ ನ್ಯಾಯಾಲಯದ ಆದೇಶ ಬರುವುದು ತಡವಾಗಬಹುದಷ್ಟೆ. ಆದರೆ 1809ರ ವಾಟ್ಸನ್‌ ಸಾಹೇಬನ ಪರಿಶೀಲನೆಯ ನಂತರ ಈಗ ಕೋರ್ಚ್‌ ಆದೇಶದ ಮೇರೆಗೆ ನಡೆದಿರುವ ಪರಿಶೀಲನೆಯ ಆಧಾರದ ಮೇಲೆ ಬರುವ ಕೆಳ ನ್ಯಾಯಾಲಯದ ಆದೇಶ ಇಡೀ ವಿವಾದದ ದೃಷ್ಟಿಯಿಂದ ಮಹತ್ವಪೂರ್ಣ.

ಒಂದು ವೇಳೆ ಐವರು ಮಹಿಳೆಯರು ಮನವಿ ಮಾಡಿರುವಂತೆ ಕೆಳ ನ್ಯಾಯಾಲಯ ವರ್ಷಪೂರ್ತಿ ಪೂಜೆ ಹಾಗೂ ದರ್ಶನಕ್ಕೆ ಅವಕಾಶ ಕೊಟ್ಟರೆ, ಕಾಶಿ ಮಂದಿರ-ಮಸೀದಿ ವಿವಾದ ಕೂಡ ಅಯೋಧ್ಯೆಯ ಹಾದಿ ಹಿಡಿಯಲಿದೆ. ಆದರೆ ಇದರಲ್ಲಿ ಎರಡು ಗಮನಿಸಬೇಕಾದ ಅಂಶಗಳಿವೆ. 1.ಬಾಬರಿ ಮಸೀದಿಯಲ್ಲಿ ಮುಸ್ಲಿಮರು ನಮಾಜ್‌ ಸಲ್ಲಿಸುತ್ತಿರಲಿಲ್ಲ. ಆದರೆ ಜ್ಞಾನವಾಪಿಯಲ್ಲಿ ನಮಾಜ್‌ ನಡೆಯುತ್ತದೆ. 2.1991ರಲ್ಲಿ ಪಿ.ವಿ.ನರಸಿಂಹರಾವ್‌ ಸರ್ಕಾರ ಅಯೋಧ್ಯೆ ಒಂದನ್ನು ಬಿಟ್ಟು ಉಳಿದೆಲ್ಲ ಪ್ರಾರ್ಥನಾ ಸ್ಥಳಗಳು 1947ರ ಮೊದಲಿನ ಯಥಾಸ್ಥಿತಿ ಪಾಲಿಸಬೇಕು ಎಂದು ತಂದಿರುವ ಕಾನೂನು.

News Hour ಗ್ಯಾನವಾಪಿ ಮಸೀದಿಯೊಳಗೆ ಹಿಂದೂ ವಿಗ್ರಹ, 19 ಪುಟಗಳ ಕೋರ್ಟ್ ವರದಿಯ ಸಂಪೂರ್ಣ ಮಾಹಿತಿ!

ಹಗಿಯಾ ಸೋಫಿಯಾ ಕಥೆ

ಕ್ರಿಸ್ತಶಕ 537ರಿಂದ 900 ವರ್ಷಗಳವರೆಗೆ ಟರ್ಕಿಯ ಇಸ್ತಾನ್‌ಬುಲ್‌ನಲ್ಲಿದ್ದ ಹಗಿಯಾ ಸೋಫಿಯಾ ಚಚ್‌ರ್‍ ಕ್ರಿಶ್ಚಿಯನ್ನರ ವಶದಲ್ಲಿತ್ತು. ಯಾವಾಗ 1453ರಲ್ಲಿ ಎರಡನೇ ಮಹಮೂದ್‌ ಆಗಿನ ಕಾನ್‌ಸ್ಟಾಂಟಿನೋಪಲ್‌ ಅನ್ನು ವಶಪಡಿಸಿಕೊಂಡನೋ ಆ ಭವ್ಯ ಚರ್ಚ್ ಮಸೀದಿ ಆಯಿತು. 1931ರಲ್ಲಿ ಟರ್ಕಿಯಲ್ಲಿ ಅಧಿಕಾರಕ್ಕೆ ಬಂದ ಕಮಾಲ್ ಅತಾ  ತುರ್ಕ್, ಹಗಿಯಾ ಸೋಫಿಯಾವನ್ನು ಕ್ರೈಸ್ತ ಮತ್ತು ಇಸ್ಲಾಮಿಕ್‌ ವಸ್ತು ಸಂಗ್ರಹಾಲಯವಾಗಿ ಮಾರ್ಪಾಟು ಮಾಡಿದ. ಆದರೆ 2020ರಲ್ಲಿ ಟರ್ಕಿಯ ಕೋರ್ಚ್‌ ಹಗಿಯಾ ಸೋಫಿಯಾ ಮಸೀದಿ ಆಗಬೇಕು ಎಂದು ತೀರ್ಪು ನೀಡಿತು. ಪೂರ್ತಿ ಮುಸ್ಲಿಂ ಜಗತ್ತು ಈ ಸಂಭ್ರಮದಲ್ಲಿ ಭಾಗಿಯಾಗಿತ್ತು. ತರ್ಕ ಮತ್ತು ನ್ಯಾಯ ಒಂದೇ ರೀತಿ ಆಗಿರಬೇಕು. ಹಗಿಯಾ ಸೋಫಿಯಾಕ್ಕೊಂದು ನ್ಯಾಯ ಜ್ಞಾನವಾಪಿಗೊಂದು ನ್ಯಾಯ ಹೇಗೆ ಮತ್ತು ಏಕೆ ಆಗಲು ಸಾಧ್ಯ?

ಜರ್ಮನ್ನರ ಉದಾಹರಣೆ

ಆರೇಳು ವರ್ಷದ ಹಿಂದೆ ಯುರೋಪ್‌ ಪ್ರವಾಸಕ್ಕೆ ಹೋದಾಗ ಮ್ಯೂನಿಕ್‌ ಬಳಿ ಇರುವ ಆಡಾಲ್‌್ಫ ಹಿಟ್ಲರ್‌ನ ಮೊದಲ ಚಿತ್ರಹಿಂಸಾ ಶಿಬಿರ (್ಚಟ್ಞ್ಚಛ್ಞಿಠ್ಟಿaಠಿಜಿಟ್ಞ ್ಚaಞp) ಡಕಾವೋಗೆ ಹೋಗಿದ್ದೆ. ಯಹೂದಿಗಳು, ಕಮ್ಯುನಿಸ್ಟರು, ಪಕ್ಷದೊಳಗಿನ ವಿರೋಧಿಗಳನ್ನು ಹಿಟ್ಲರ್‌ ಹೇಗೆ ಸತಾಯಿಸಿ ಕೊಲ್ಲಿಸುತ್ತಿದ್ದ ಎಂದು ಜರ್ಮನ್ನರು ಹಾಗೆಯೇ ಯಥಾವತ್‌ ತೋರಿಸುತ್ತಾರೆ. ಇತಿಹಾಸವನ್ನು ಇತಿಹಾಸವಾಗಿಯೇ ತೋರಿಸುತ್ತಾರೆ. ಆದರೆ ಹಿಟ್ಲರ್‌ ಬಗ್ಗೆ ಕೇಳಿದಾಗ ಆತ ನಮ್ಮ ದೇಶದವನು, ಒಬ್ಬ ಜರ್ಮನ್‌ ಆಗಿದ್ದ ಎಂದು ಹೇಳಲು ನಾಚಿಕೆ ಆಗುತ್ತದೆ ಎಂದು ಬೇಸರದಿಂದ ಹೇಳುತ್ತಾರೆ.

ಜರ್ಮನ್ನರ ಈ ನಿಲುವಿನಿಂದಾಗಿಯೇ ಶತಮಾನಗಳ ಕಾಲ ಕಾದಾಡಿದ ಜರ್ಮನ್ನರು ಮತ್ತು ಫ್ರೆಂಚರು ಇವತ್ತು ಒಟ್ಟಿಗಿದ್ದಾರೆ. ಅದೇ ರೀತಿ ಶತಮಾನಗಳ ಹಿಂದೆ ಘಜನಿ, ಘೋರಿ, ಔರಂಗಜೇಬ್‌ ನಡೆಸಿದ ಕ್ರೌರ್ಯಕ್ಕೂ ಇವತ್ತಿನ ಭಾರತೀಯ ಮುಸಲ್ಮಾನರಿಗೂ ಸಂಬಂಧವಿಲ್ಲ. ಆದರೆ ಅತಿಯಾದ ತುಷ್ಟೀಕರಣದಿಂದ ಇವತ್ತಿನ ಮುಸ್ಲಿಮರು ಔರಂಗಜೇಬನ ಕಾಲದ ವಾರಸುದಾರಿಕೆಯನ್ನು ಕೂಡ ನಿರಾಕರಿಸುತ್ತಿಲ್ಲ. ಜೊತೆಗೆ 70 ವರ್ಷದ ಸ್ವತಂತ್ರ ಭಾರತದ ರಾಜಕಾರಣ ಆ ಮನಸ್ಥಿತಿಯಿಂದ ಮುಸ್ಲಿಮರನ್ನು ಹೊರಗೆ ತರಲು ಬಿಡುತ್ತಿಲ್ಲ. ಆದರೆ ಆ ವಾರಸುದಾರಿಕೆಯ ನಿರಾಕರಣೆ ಮಾತ್ರವೇ ಹಿಂದೂ-ಮುಸ್ಲಿಂ ನಡುವಿನ ಕಂದಕ ಮುಚ್ಚಬಹುದೇ ಹೊರತು ಉಳಿದ ಮಾರ್ಗದಿಂದ ಸಾಧ್ಯವಿದೆ ಎಂದು ಸದ್ಯಕ್ಕಂತೂ ಅನ್ನಿಸುತ್ತಿಲ್ಲ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

click me!