
ಹಾಸ್ಟೆಲ್‌ಗೆ ಹೋಗುತ್ತೇನೆಂದು ಮನೆಯಿಂದ ಹೊರಟಿದ್ದ ಗುವಾಹಟಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಹೋಮ್‌ಸ್ಟೇಯಲ್ಲಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿ, ಬಳಿಕ ಇಹಲೋಕ ತ್ಯಜಿಸಿರುವ ದಾರುಣ ಘಟನೆ ಅಸ್ಸಾಂನಲ್ಲಿ ನಡೆದಿದೆ.
ನಿಮಿಷಾ ಠಾಕುರಿಯಾ (22) ಜೀವ ಕಳೆದುಕೊಂಡ ಯುವತಿ. ಈಕೆಯ ನಿರ್ಗಮನದಲ್ಲಿ ಅನುಮಾನವಿದೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಜೊತೆಯಲ್ಲಿದ್ದ ಆಶಿಕ್ ಅಲಿ (26) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಗಳ ಅಗಲಿಕೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ನಿಮಿಷಾ ತಂದೆ ದೀಪ್ ಠಾಕುರಿಯಾ ಆಗ್ರಹಿಸಿದ್ದಾರೆ.
ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ನಿಮಿಷಾ ಹಾಸ್ಟೆಲ್‌ಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದಳು. ರಾತ್ರಿ ಸ್ನೇಹಿತರ ಜೊತೆ ಉಳಿದುಕೊಳ್ಳುವುದಾಗಿ ಆಕೆ ತನ್ನ ತಾಯಿಗೆ ತಿಳಿಸಿದ್ದಳು ಎಂದು ತಂದೆ ದೀಪ್ ಠಾಕುರಿಯಾ ತಿಳಿಸಿದ್ದಾರೆ. ರಾತ್ರಿ 10 ಗಂಟೆ ಸುಮಾರಿಗೆ ಕರೆ ಮಾಡಿದ್ದ ನಿಮಿಷಾ, ಸ್ನೇಹಿತರ ಜೊತೆ ಇರುವುದಾಗಿ ಹೇಳಿದ್ದಳು. ಆದರೆ ಶನಿವಾರ ಮುಂಜಾನೆ 2 ಗಂಟೆ ಸುಮಾರಿಗೆ ತಾಯಿಯ ಫೋನ್‌ಗೆ ನಿಮಿಷಾಳಿಂದ ಅನಿರೀಕ್ಷಿತ ಕರೆ ಬಂದಿದೆ. "ಅಮ್ಮಾ, ಅವರು ನನಗೆ ಹಲ್ಲೆ ಮಾಡಿದರು. ನನ್ನ ಎದೆಗೆ ಗುದ್ದಿ ತೊಂದರೆ ನೀಡಿದ್ದಾರೆ. ನನಗೆ ಪೆಟ್ಟಾಗಿದೆ" ಎಂದು ನಿಮಿಷಾ ಅಳುತ್ತಾ ಹೇಳಿದ್ದಳು. ಆ ನಂತರ ಕುಟುಂಬಸ್ಥರು ಆಕೆಗೆ ಕರೆ ಮಾಡಲು ಪ್ರಯತ್ನಿಸಿದರೂ ಫೋನ್ ಸಂಪರ್ಕಕ್ಕೆ ಸಿಗಲಿಲ್ಲ ಎಂದು ತಂದೆ ವಿವರಿಸಿದ್ದಾರೆ.
ತಕ್ಷಣವೇ ಕುಟುಂಬಸ್ಥರು ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ನೀಡಿದ್ದಾರೆ. ಪೊಲೀಸರು ಹುಡುಕಾಟ ನಡೆಸಿದಾಗ, ಗುವಾಹಟಿ ಹೊರವಲಯದ ಹೋಮ್‌ಸ್ಟೇಯೊಂದರಲ್ಲಿ ಯುವತಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣ ಆಕೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮತ್ತು ಬಳಿಕ ಗುವಾಹಟಿ ಮೆಡಿಕಲ್ ಕಾಲೇಜಿಗೆ ದಾಖಲಿಸಿದರೂ, ಯುವತಿ ಅಷ್ಟರಲ್ಲಾಗಲೇ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ನಿಮಿಷಾ ಮತ್ತು ಆಶಿಕ್ ಇಬ್ಬರೂ ಹೋಮ್‌ಸ್ಟೇಯಲ್ಲಿ ಉಳಿದುಕೊಂಡಿದ್ದರು ಎಂಬುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಈ ತಿಂಗಳಲ್ಲಿ ಇವರಿಬ್ಬರು ಐದು ಬಾರಿ ಇದೇ ಹೋಮ್‌ಸ್ಟೇಗೆ ಬಂದಿದ್ದರು. ಯಾವುದೇ ಸೂಕ್ತ ದಾಖಲೆಗಳನ್ನು ಪರಿಶೀಲಿಸದೆ ಇವರಿಗೆ ರೂಮ್ ನೀಡಲಾಗಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ರಾತ್ರಿ 9:30ರ ಸುಮಾರಿಗೆ ಇಬ್ಬರೂ ಊಟ ಆರ್ಡರ್ ಮಾಡಿದ್ದರು ಎಂದು ಹೋಮ್‌ಸ್ಟೇ ಸಿಬ್ಬಂದಿ ತಿಳಿಸಿದ್ದಾರೆ. ಮುಂಜಾನೆ 3 ಗಂಟೆ ಸುಮಾರಿಗೆ ಯುವಕನ ಅಳುವ ಶಬ್ದ ಕೇಳಿ ಸಿಬ್ಬಂದಿ ಅಲ್ಲಿಗೆ ಧಾವಿಸಿದಾಗ, ಯುವತಿ ನೆಲದ ಮೇಲೆ ಬಿದ್ದಿರುವುದು ಕಂಡುಬಂದಿದೆ.
ಆದರೆ, ನಿಮಿಷಾ ತಾನೇ ವಿಪರೀತ ನಿರ್ಧಾರ ಕೈಗೊಂಡಿದ್ದಾರೆ ಎಂದು ಆಶಿಕ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಈ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ವೈದ್ಯಕೀಯ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಸಿಐಡಿ ಮತ್ತು ವಿಧಿವಿಜ್ಞಾನ (ಫೋರೆನ್ಸಿಕ್) ತಂಡಗಳು ಹೋಮ್‌ಸ್ಟೇಗೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿವೆ. ಘಟನೆಯ ಬಳಿಕ ಸ್ಥಳೀಯರು ಪ್ರತಿಭಟನೆ ನಡೆಸಿದ್ದು, ಕೆಲವರು ಇದು ಬೇರೆ ಆಯಾಮದ ಪ್ರಕರಣ ಎಂದು ಆರೋಪಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ನಿಮಿಷಾ ಅವರ ಪಾರ್ಥಿವ ಶರೀರವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ಶನಿವಾರ ಸಂಜೆ ಅಂತ್ಯಕ್ರಿಯೆ ನೆರವೇರಿದೆ. ಧಾರಾಪುರ ಮೂಲದ ನಿಮಿಷಾ, ಗುವಾಹಟಿ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ (ಸೋಷಿಯಾಲಜಿ) ಅಭ್ಯಾಸ ಮಾಡುತ್ತಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ