ಹರ್ಯಾಣ ಖಾಸಗಿ ಆಸ್ಪತ್ರೆಗಳಲ್ಲಿ ಕಡುಬಡವರಿಗೆ ಉಚಿತ ಚಿಕಿತ್ಸೆ..!

By Kannadaprabha NewsFirst Published Dec 31, 2022, 8:22 AM IST
Highlights

ಹರ್ಯಾಣ ಖಾಸಗಿ ಆಸ್ಪತ್ರೆಗಳಲ್ಲಿ ಕಡುಬಡವರಿಗೆ ಉಚಿತ ಚಿಕಿತ್ಸೆ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದೆ. 5 ಲಕ್ಷದವರೆಗಿನ ಚಿಕಿತ್ಸೆ ಫ್ರೀಯಾಗಿ ಸಿಗಲಿದ್ದು, ಇದಕ್ಕೆ 20% ಹಾಸಿಗೆ ಮೀಸಲಿಡಲಾಗಿದೆ. ರಿಯಾಯ್ತಿ ಸರ್ಕಾರಿ ಜಾಗ ಪಡೆದ ಆಸ್ಪತ್ರೆಗಳಿಗೆ ಇದು ಅನ್ವಯವಾಗಲಿದೆ. 

ಗುರುಗ್ರಾಮ: ಸರ್ಕಾರದಿಂದ (Government) ರಿಯಾಯಿತಿ ದರದಲ್ಲಿ (Concessional Rate) ಭೂಮಿಯನ್ನು ಪಡೆದ ಖಾಸಗಿ ಆಸ್ಪತ್ರೆಗಳು(Private Hospitals) ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 20ರಷ್ಟು ಬೆಡ್‌ಗಳನ್ನು (Bed) ಮೀಸಲಾಗಿಡಬೇಕು ಹಾಗೂ ಅವರಿಗೆ 5 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆಯನ್ನು (Free Treatment) ಒದಗಿಸಬೇಕು ಎಂದು ಹರ್ಯಾಣ (Haryana) ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹರ್ಯಾಣ ಸಹಕಾರಿ ವಿಕಾಸ ಪ್ರಾಧಿಕಾರಣದಿಂದ (Haryana Shehri Vikas Pradhikaran) (ಎಚ್‌ಎಸ್‌ವಿಪಿ) (HSVP) ಮೇದಾಂತ, ಫೋರ್ಟೀಸ್‌, ಆರ್ಟೆಮಿಸ್‌ ಮೊದಲಾದ ಖಾಸಗಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳು ಅಗ್ಗದಲ್ಲಿ ಭೂಮಿಯನ್ನು ಖರೀದಿಸಿದ್ದವು. ಹೀಗಾಗಿ ಇವು ವಾರ್ಷಿಕ 1.8 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳಿಗೆ ಸೇರಿದ ರೋಗಿಗಳಿಗಾಗಿ ಶೇ. 20 ರಷ್ಟು ಹಾಸಿಗೆ ಮೀಸಲಿಡಬೇಕು. ಇದಲ್ಲದೆ ರಿಯಾಯಿತಿ ದರದಲ್ಲಿ ಭೂಮಿ ಖರೀದಿಸಿದ ಇತರೆ ಖಾಸಗಿ ಆಸ್ಪತ್ರೆಗಳು ಶೇ.10 ರಷ್ಟು ಹಾಸಿಗೆಗಳನ್ನು ಆರ್ಥಿಕವಾಗಿ ದುರ್ಬಲವಾಗಿರುವ ಸಮುದಾಯಗಳಿಗೆ ಮೀಸಲಾಗಿಡಬೇಕು ಎಂದು ಸೂಚಿಸಲಾಗಿದೆ.

ಚಿಕಿತ್ಸೆಯ ಶುಲ್ಕ 5 ಲಕ್ಷ ರೂ. ನಿಂದ 10 ಲಕ್ಷ ರೂ. ಒಳಗಿದ್ದರೆ ಬಿಲ್‌ನ ಶೇ.10ರಷ್ಟು ಮೊತ್ತವನ್ನು ಮಾತ್ರ ಬಡ ರೋಗಿಯ ಕುಟುಂಬದವರು ಪಾವತಿಸಬೇಕು. ಬಿಲ್‌ ಮೊತ್ತ 10 ಲಕ್ಷಕ್ಕಿಂತ ಹೆಚ್ಚಾದರೆ ಬಿಲ್‌ನ ಶೇ. 30ರಷ್ಟನ್ನು ರೋಗಿ ಪಾವತಿಸಬೇಕು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಈ ಹಿಂದಿನ ಯೋಜನೆಯಡಿ ಇಂಥ ಆಸ್ಪತ್ರೆಗಳು ಆರ್ಥಿಕವಾಗಿ ಹಿಂದುಳಿದವರಿಗೆ ಸಾಮಾನ್ಯ ಶುಲ್ಕದ ಶೇ.30ರಷ್ಟು ಮತ್ತು ಹೊರರೋಗಿಗಳ ವಿಭಾಗದಲ್ಲಿ ಸಾಮಾನ್ಯ ಶುಲ್ಕದ ಶೇ.20ರಷ್ಟು ಶುಲ್ಕ ವಿಧಿಸಲು ಅವಕಾಶವಿತ್ತು. ಅದನ್ನು ಇದೀಗ ಭಾರೀ ಪ್ರಮಾಣದಲ್ಲಿ ಇಳಿಸಲಾಗಿದೆ.

ಇದನ್ನು ಓದಿ: ಬಿಪಿಎಲ್‌ ಪಡಿತರ ಕಾರ್ಡ್‌ದಾರರಿಗೆ 5 ಲಕ್ಷವರೆಗೆ ಉಚಿತ ಚಿಕಿತ್ಸೆ

ಈ ನಿಟ್ಟಿನಲ್ಲಿ ಎಚ್‌ಎಸ್‌ವಿಪಿ ಪೋರ್ಟಲ್‌ ರೂಪಿಸಲಾಗಿದ್ದು, ಬಡ ರೋಗಿ ಆಸ್ಪತ್ರೆಗೆ ದಾಖಲಾದಂತೆ ಅವರ ಮಾಹಿತಿಯನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ. ಬಳಿಕ ಬಿಲ್‌ನ ಒಟ್ಟು ಮೊತ್ತವನ್ನೂ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ. ಈ ಸೇವೆಯನ್ನು ಪಡೆಯಲು ಆಧಾರ್‌ ಕಾರ್ಡ್‌, ಬಿಪಿಎಲ್‌ ಕಾರ್ಡ್‌, ಪರಿವಾರ ಪಹಚಾನ್‌ ಪತ್ರ ಹಾಗೂ ಆಯುಷ್ಮಾನ್‌ ಭಾರತ ಕಾರ್ಡ್‌ ಅನ್ನು ಆಸ್ಪತ್ರೆಗೆ ದಾಖಲಾದ 24 ಗಂಟೆಗಳಲ್ಲಿ ತೋರಿಸಬೇಕು ಎಂದು ಗುರುಗ್ರಾಮದ ಮುಖ್ಯ ವೈದ್ಯಾಧಿಕಾರಿ ತಿಳಿಸಿದ್ದಾರೆ. ಇಲ್ಲದೇ ಬಡ ರೋಗಿಗಳಿಗಾಗಿ ಆಸ್ಪತ್ರೆಯಲ್ಲಿ ಅಗ್ಗದ ಬೆಲೆಯ ಜೆನೆರಿಕ್‌ ಔಷಧಿಯನ್ನು ಒದಗಿಸುವ ಪ್ರತ್ಯೇಕ ಔಷಧಾಲಯ ನಿರ್ಮಾಣ ಮಾಡಬೇಕು ಎಂದು ರಾಜ್ಯ ಸರ್ಕಾರ ಸೂಚಿಸಿದೆ.

ಮಾದರಿ ನಿರ್ಧಾರ
- ವಾರ್ಷಿಕ 1.8 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವ ಜನರಿಗೆ ಇದು ಅನ್ವಯ
- ಚಿಕಿತ್ಸಾ ಶುಲ್ಕ 5 ಲಕ್ಷದಿಂದ 10 ಲಕ್ಷ ರೂ. ಒಳಗಿದ್ದರೆ ಬಿಲ್‌ನ 10% ಹಣ ಪಡೆಯಬೇಕು
- ಬಿಲ್‌ ಮೊತ್ತ 10 ಲಕ್ಷಕ್ಕಿಂತ ಹೆಚ್ಚಾದರೆ ಬಡ ರೋಗಿಯಿಂದ 30% ಮಾತ್ರ ಸ್ವೀಕರಿಸಬೇಕು
- ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಶೇ. 20, ಉಳಿಕೆ ಆಸ್ಪತ್ರೆಗಳಲ್ಲಿ ಶೇ.10 ಬೆಡ್‌ ಬಡವರಿಗೆ
- ರಿಯಾಯಿತಿ ದರದಲ್ಲಿ ಸರ್ಕಾರಿ ಜಾಗ ಪಡೆದ ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರ ಆದೇಶ

ಇದನ್ನೂ ಓದಿ: Tumakur : ನಯಾ ಪೈಸೆ ಪಡೆಯದೆ ಬಡವರಿಗೆ ನೇತ್ರ ಚಿಕಿತ್ಸೆ

click me!