ಲಾಕ್‌ಡೌನ್‌ನಿಂದಾಗಿ ಉಟ,ವಸತಿಯಿಲ್ಲದೇ ಪರದಾಡುತ್ತಿದ್ದ ತಂದೆಯನ್ನು ಸೈಕಲ್‌ನಲ್ಲಿ ಕೂರಿಸಿಕೊಂಡು 15 ವರ್ಷದ ಮಗಳು 1200 ಕಿಲೋ ಮೀಟರ್ ಸೈಕಲ್ ತುಳಿದು ತಂದೆಯನ್ನು ತನ್ನೂರಿಗೆ ಕರೆದುಕೊಂಡು ಬಂದಿದ್ದಾರೆ. ಈ ಕುರಿತಾದ ಒಂದು ಹೃದಯಸ್ಪರ್ಷಿ ಸ್ಟೋರಿ ಇಲ್ಲಿದೆ ನೋಡಿ.
ಪಟನಾ(ಮೇ.22): ಇರಲು ಮನೆ ಇಲ್ಲದೇ, ತಿನ್ನಲು ಆಹಾರವಿಲ್ಲದೇ ಸಂಕಷ್ಟದಲ್ಲಿದ್ದ ತಂದೆಯನ್ನು ಕಾಪಾಡುವ ನಿಟ್ಟಿನಲ್ಲಿ 15 ವರ್ಷದ ಬಾಲಕಿಯೊಬ್ಬಳು, ತಂದೆಯನ್ನು ಕೂರಿಸಿಕೊಂಡು ಗುಡಗಾಂವ್‌ನಿಂದ 1200 ಕಿ.ಮೀ ದೂರದ ಬಿಹಾರಕ್ಕೆ 10 ದಿನಗಳ ಕಾಲ ಸೈಕಲ್ ತುಳಿದುಕೊಂಡೇ ಬಂದ ಅಚ್ಚರಿಯ ಘಟನೆಯೊಂದು ನಡೆದಿದೆ. ಜ್ಯೋತಿ ಕುಮಾರಿ ಎಂಬ ಈ ಬಾಲಕಿಯ ಸಾಹಸಕ್ಕೆ ಇಡೀ ದೇಶವೇ ಬೆರಗಾಗಿದೆ. ಇನ್ನು ಈಕೆಯ ಸಾಮರ್ಥ್ಯಕ್ಕೆ ಅಚ್ಚರಿ ಪಟ್ಟಿರುವ ರಾಷ್ಟ್ರೀಯ ಸೈಕ್ಲಿಂಗ್ ಅಸೋಸಿಯೇಷನ್, ಲಾಕ್‌ಡೌನ್ ಮುಗಿದ ಬಳಿಕ ದೆಹಲಿಗೆ ಕರೆಸಿಕೊಂಡು, ಆಕೆಯ ಸಾಮರ್ಥ್ಯ ಪರೀಕ್ಷೆಗೆ ನಿರ್ಧರಿಸಿದೆ.
ಪ್ರಕರಣ ಹಿನ್ನೆಲೆ: ಬಿಹಾರ ಮೂಲದ ಮೋಹನ್ ಪಾಸ್ವಾನ್ 20 ವರ್ಷದಿಂದ ಗುಡ್‌ಗಾಂವ್‌ನಲ್ಲಿ ರಿಕ್ಷಾ ಓಡಿಸುತ್ತಿದ್ದಾರೆ. ಆದರೆ ಕಳೆದ ಜ.26ರಂದು ಅವರಿಗೆ ಅಪಘಾತವಾಗಿ, ಕಾಲಿಗೆ ಏಟು ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಅವರ ಪತ್ನಿ ಪೂಲೋ ದೇವಿ ಮತ್ತು ಪುತ್ರಿ ಜ್ಯೋತಿ ಜ.31ರಂದು ಗುಡ್‌ಗಾಂವ್‌ಗೆ ಆಗಮಿಸಿದ್ದರು. ಅಲ್ಲಿ ಪತಿಗೆ ಚಿಕಿತ್ಸೆ ಕೊಡಿಸಿದ ಬಳಿಕ ಪೂಲೋ ದೇವಿ, ಮಗಳನ್ನು ಪತಿಯ ಆರೈಕೆಗೆ ಬಿಟ್ಟು ತಾನು ಅಂಗನವಾಡಿ ಕೆಲಸಕ್ಕೆಂದು ಬಿಹಾರಕ್ಕೆ ಮರಳಿದ್ದರು.
ಮುಂದಿನ ಒಂದೂವರೆ ತಿಂಗಳಲ್ಲಿ ಇನ್ನೇನು ಮೋಹನ್ ಚೇತರಿಕೊಳ್ಳುವ ಹಂತದಲ್ಲಿ ದೇಶಾದ್ಯಂತ ಲಾಕ್‌ಡೌನ್ ಘೋಷಣೆ ಆಯಿತು. ಹೀಗಾಗಿ ಮೋಹನ್‌ಗೆ ಕೆಲಸವಿಲ್ಲದಂತಾಯಿತು. ಮತ್ತೊಂದೆಡೆ ಹಣ ಕೊಡದ್ದಕ್ಕೆ ಮನೆ ಮಾಲೀಕ ಮನೆಯಿಂದ ಹೊರಗೆ ಹಾಕುವ ಬೆದರಿಕೆ ಹಾಕಿದೆ. ಮತ್ತೊಂದೆಡೆ ತಿನ್ನಲು ಆಹಾರವೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಯಿತು.
ಲಾಕ್‌ಡೌನ್ ಸಡಿಲಿಕೆ: ಏರಿಕೆ ಕಾಣದ ವಹಿವಾಟಿನ ಗ್ರಾಫ್, ವ್ಯಾಪಾರಿಗಳಲ್ಲಿ ಕಾಣದ ಉತ್ಸಾಹ
ಜ್ಯೋತಿ ಧೈರ್ಯ:
ಈ ಸಂದರ್ಭದಲ್ಲಿ ಗಟ್ಟಿ ನಿಲುವು ತಳೆದ ಜ್ಯೋತಿ, ಗಾಯಾಳು ತಂದೆಯನ್ನು ಸೈಕಲ್‌ನಲ್ಲಿ ಕೂರಿಸಿಕೊಂಡು ತವರಿಗೆ ಪ್ರಯಾಣಿಸುವ ನಿರ್ಧಾರ ಕೈಗೊಂಡಳು. ಒಂದಿಷ್ಟು ಆಹಾರ, ನೀರು, ಬಟ್ಟೆ ಇಟ್ಟುಕೊಂಡ ಜ್ಯೋತಿ, ತಂದೆಯನ್ನು ಹಿಂದೆ ಕೂರಿಸಿಕೊಂಡು ಮೇ 7ರಂದು ಗುಡಗಾಂವ್‌ನಿಂದ ಪ್ರಯಾಣ ಆರಂಭಿಸಿದಳು. ಪ್ರಯಾಣದ ವೇಳೆ ಅಲ್ಲಲ್ಲಿ ವಿಶ್ರಾಂತಿ ಪಡೆದು, ಅವರಿವರು ನೀಡಿದ ಆಹಾರ ಸೇವಿಸಿಕೊಂಡೇ 10 ದಿನಗಳಲ್ಲಿ ಅಂದರೆ ಮೇ 17 ರಂದು ಬಿಹಾರದ ತವರೂರಿಗೆ ಆಗಮಿಸಿದ್ದಾಳೆ. ನಡುವೆ ಸ್ವಲ್ಪ ದೂರದವರೆಗೆ ಲಾರಿ ಚಾಲಕರೊಬ್ಬರು, ನಮ್ಮನ್ನು ಹತ್ತಿಕೊಂಡು ಕರೆದೊಯ್ದಿದ್ದು ಬಿಟ್ಟರೆ ಉಳಿದೆಲ್ಲಾ ದಾರಿಯನ್ನು ತಾವು ಸೈಕಲ್‌ನಲ್ಲೇ ಕ್ರಮಿಸಿದ್ದಾಗಿ ಜ್ಯೋತಿ ಹೇಳಿದ್ದಾರೆ. ಇಂಥ ಸಾಹಸ ಮಾಡಿ ತಂದೆಯನ್ನು ಊರಿಗೆ ಕರೆತಂದ ಜ್ಯೋತಿಯನ್ನು ಇದೀಗ ಶ್ರವಣಕುಮಾರಿ ಎಂದೇ ಗ್ರಾಮಸ್ಥರು ಬಣ್ಣಿಸಿದ್ದಾರೆ.
ಹಿಂದೆಲ್ಲಾ ತಂದೆ ಊರಿಗೆ ಬಂದಾಗ ಅವರನ್ನು ಕೂರಿಸಿಕೊಂಡು, ಹಳ್ಳಿ ಸುತ್ತುಸುತ್ತಿದ್ದೆ. ಆ ಅನುಭವವೇ ನನಗೆ ಇಷ್ಟು ದೂರ ಕ್ರಮಿಸಲು ಭರವಸೆ ನೀಡಿತು ಎಂದು ಜ್ಯೋತಿ ಹೇಳಿದ್ದಾಳೆ.