ಈ ಮಹಿಳೆಯ ಕತೆ ಯಾವ ಸಿನಿಮಾದ ರೋಚಕತೆಗೂ ಕಮ್ಮಿ ಇಲ್ಲ. 45 ವರ್ಷದ ಮಹಿಳೆಯೊಬ್ಬರು 11 ವರ್ಷಗಳ ಬಳಿಕ ಕೋಮಾದಿಂದ ಎಚ್ಚೆತ್ತಿದ್ದು, ತಮ್ಮ ಕುಟುಂಬವನ್ನು ಸೇರಿಕೊಂಡಿದ್ದಾರೆ.
ಚಲನಚಿತ್ರವನ್ನು ಹೋಲುವ ಕಥಾವಸ್ತುವಿನಲ್ಲಿ, 45 ವರ್ಷದ ಮಹಿಳೆಯೊಬ್ಬರು ಕೋಲ್ಕತ್ತಾದಲ್ಲಿ ಬರೋಬ್ಬರಿ 11 ವರ್ಷಗಳ ಕೋಮಾ ಬಳಿಕ ಎಚ್ಚರಗೊಂಡು, ದೂರದ ಗುಜರಾತ್‌ನಲ್ಲಿದ್ದ ತನ್ನ ಕುಟುಂಬವನ್ನು ಸೇರಿಕೊಂಡಿದ್ದಾರೆ.
2013ರಲ್ಲಿ ಗುಜರಾತ್‌ನ ಗೋಧ್ರಾ ತಾಲೂಕಿನ ದೂರದ ಭಾಮಯ್ಯ ಗ್ರಾಮದ ನಿವಾಸಿ ಗೀತಾ ಬರಿಯಾ ನಾಪತ್ತೆಯಾಗಿದ್ದರು. ಅವರನ್ನು ಹುಡುಕೀ ಹುಡುಕಿ ಸಿಗದೆ ಹೋದ ಮೇಲೆ ಕುಟುಂಬವು ಆಕೆಯನ್ನು ಮತ್ತೆ ನೋಡುವ ಭರವಸೆ ಕೈ ಬಿಟ್ಟಿತ್ತು. ಆದರೆ, ಆಗಿನಿಂದ ಆಕೆ ಕೋಲ್ಕತ್ತಾದಲ್ಲಿ ಕೋಮಾದಲ್ಲಿದ್ದರು ಎಂದು ತಿಳಿದು ಬಂದಿದೆ.
ಈ 11 ವರ್ಷಗಳ ಕಾಲ ಗೀತಾ ಕೋಲ್ಕತ್ತಾದ ಮಾನಸಿಕ ಆರೋಗ್ಯ ಸಂಸ್ಥೆಯಲ್ಲಿ ಕೋಮಾ ಸ್ಥಿತಿಯಲ್ಲಿದ್ದರು. ಅವರು ಆ ಸ್ಥಿತಿಯಿಂದ ಹೊರ ಬರುತ್ತಿದ್ದಂತೆ, ಸಂಸ್ಥೆಯು ಮಹಿಳೆಯ ವಿವರಗಳನ್ನು ಆಕೆಯಿಂದಲೇ ಕೇಳಿದೆ. ಬಳಿಕ ಕುಟುಂಬಕ್ಕೆ ಕರೆ ಮಾಡಿ ವಿಷಯ ವಿವರಿಸಿದೆ.
'ಜಿಲ್ಲಾ ಪೊಲೀಸ್ ಸಿಬ್ಬಂದಿಯೊಂದಿಗೆ ಕುಟುಂಬವು ಗುರುವಾರ ಕೋಲ್ಕತ್ತಾಗೆ ರೈಲಿನಲ್ಲಿ ಪ್ರಯಾಣಿಸಲಿದೆ. ಜಿಲ್ಲಾಡಳಿತವು ಮಾನವೀಯ ನೆಲೆಯಲ್ಲಿ ಅವರ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದೆ. ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ಅವರ ಗ್ರಾಮಕ್ಕೆ ಮಹಿಳೆಯನ್ನು ಮರಳಿ ಕರೆದುಕೊಂಡು ಹೋಗುತ್ತಾರೆ' ಎಂದು ಕೋಲ್ಕತಾ ಇನ್ಸ್‌ಪೆಕ್ಟರ್ ಪ್ರವೀಣ್ ಅಶೋಕ ತಿಳಿಸಿದ್ದಾರೆ.
ಪೋಲೀಸರು ಕುಟುಂಬ ವಿವರಗಳನ್ನು ಪರಿಶೀಲಿಸಿದ್ದಾರೆ. ಈ ಮಧ್ಯೆ ವೈದ್ಯರು ಗೀತಾ ಕುಟುಂಬಕ್ಕೆ ವಿಡಿಯೋ ಕಾಲ್ ಮಾಡಿದ್ದಾರೆ. ಕುಟುಂಬ ಹಾಗೂ ಗೀತಾ ಇಬ್ಬರೂ ಪರಸ್ಪರ ಗುರುತಿಸಿಕೊಂಡಿದ್ದಾರೆ.
ಗೀತಾ - ಇಬ್ಬರು ಗಂಡು ಮತ್ತು ಓರ್ವ ಮಗಳನ್ನು ಹೊಂದಿದ್ದಾರೆ. ಈಗ 11 ವರ್ಷಗಳ ನಂತರ ತನ್ನ ಕುಟುಂಬದೊಂದಿಗೆ ಮತ್ತೆ ಸೇರಿಕೊಳ್ಳುತ್ತಿದ್ದಾರೆ. ಹದಿಹರೆಯದಲ್ಲಿರುವ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ಕಳೆದುಕೊಂಡ ತಾಯಿಯ ಬಗ್ಗೆ ಅಷ್ಟಾಗಿ ನೆನಪಿಲ್ಲ. ದುರದೃಷ್ಟವೆಂದರೆ ತಂದೆಯೂ ಕೆಲ ವರ್ಷದ ಹಿಂದೆ ಮರಣ ಹೊಂದಿದ್ದಾರೆ. ನೆಂಟರಿಷ್ಟರು ಮಕ್ಕಳ ಆಹಾರವನ್ನು ನೋಡಿಕೊಂಡರೂ, ಶಾಲೆಯನ್ನು ಅವರು ಮುಂದುವರಿಸಲಾಗಿಲ್ಲ.
ಆಕೆಯ ಅನುಪಸ್ಥಿತಿಯಿಂದ ಉಲ್ಬಣಗೊಂಡ ಆರ್ಥಿಕ ಸಂಕಷ್ಟಗಳೊಂದಿಗೆ ಕುಟುಂಬವು ಹೆಣಗಾಡುತ್ತಿದೆ, ಅವಳ ಮರಳುವಿಕೆಗಾಗಿ ಕುಟುಂಬವು ಕುತೂಹಲದಿಂದ ಕಾಯುತ್ತಿದೆ.