ಗುಟ್ಕಾ ಕಂಪನಿಯಿಂದ 832 ಕೋಟಿ ರೂ. ತೆರಿಗೆ ವಂಚನೆ!

By Suvarna NewsFirst Published Jan 4, 2021, 7:19 AM IST
Highlights

ಗುಟ್ಕಾ ಕಂಪನಿಯಿಂದ .832 ಕೋಟಿ ತೆರಿಗೆ ವಂಚನೆ| ದಿಲ್ಲಿಯಲ್ಲಿ ಭಾರೀಅಕ್ರಮ ಬೆಳಕಿಗೆ|ಓರ್ವನ ಬಂಧನ| ಕಂಪನಿ ನೋಂದಣಿ ಮಾಡದೆ ಗುಟ್ಕಾ ತಯಾರಿಸಿ ಮಾರಾಟ| ವಿವಿಧ ರಾಜ್ಯಗಳಲ್ಲಿ ರಹಸ್ಯವಾಗಿ ಮಾರಾಟ| 4 ಕೋಟಿ ಮೌಲ್ಯದ ಕಚ್ಚಾ ಪದಾರ್ಥ ವಶಕ್ಕೆ

ನವದೆಹಲಿ(ಜ.04): ಗುಟ್ಕಾ, ಪಾನ್‌ ಮಸಾಲಾ ಹಾಗೂ ತಂಬಾಕು ಉತ್ಪನ್ನಗಳನ್ನು ಅಕ್ರಮವಾಗಿ ಉತ್ಪಾದಿಸಿ, ರಹಸ್ಯವಾಗಿ ದೇಶವ್ಯಾಪಿ ತಲುಪಿಸುವ ಮೂಲಕ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚಿಸುತ್ತಿದ್ದ ಜಾಲವೊಂದನ್ನು ಜಿಎಸ್‌ಟಿ ಅಧಿಕಾರಿಗಳು ಬಯಲಿಗೆ ಎಳೆದಿದ್ದಾರೆ. ಈ ಪ್ರಕರಣದಲ್ಲಿ ಒಟ್ಟಾರೆ 831.72 ಕೋಟಿ ರು. ತೆರಿಗೆ ವಂಚನೆಯಾಗಿರುವುದು ದೃಢಪಟ್ಟಿದೆ.

ಜಿಎಸ್‌ಟಿ ಅಡಿ ನೋಂದಣಿ ಮಾಡಿಕೊಳ್ಳದೆ, ಯಾವುದೇ ಸುಂಕವನ್ನೂ ಪಾವತಿಸದೆ ತಂಬಾಕು ಉತ್ಪನ್ನಗಳ ಘಟಕವನ್ನು ನಡೆಸಲಾಗುತ್ತಿತ್ತು. ಈ ಸಂಬಂಧ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಆತನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ವಂಚನೆಯ ರೂವಾರಿಗಳನ್ನು ಪತ್ತೆ ಹಚ್ಚಿ ತೆರಿಗೆ ವಂಚನೆ ವಸೂಲಿ ಮಾಡಲು ತನಿಖೆ ಮುಂದುವರಿದಿದೆ ಎಂದು ಹಣಕಾಸು ಸಚಿವಾಲಯ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ.

ವಶಪಡಿಸಿಕೊಳ್ಳಲಾದ ದಾಖಲೆಗಳು, ಜಪ್ತಿ ಮಾಡಲಾದ ಸರಕು, ಬಂಧಿತನ ತಪ್ಪೊಪ್ಪಿಗೆಯ ಆಧಾರದಲ್ಲಿ 831.72 ಕೋಟಿ ರು. ವಂಚನೆಯಾಗಿರುವುದು ಬೆಳಕಿಗೆ ಬಂದಿದೆ. ತನಿಖೆ ನಡೆಯುತ್ತಿದೆ. ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿದಾಗ ಅಕ್ರಮವಾಗಿ ಗುಟ್ಕಾ/ಪಾನ್‌ ಮಸಾಲಾ/ತಂಬಾಕು ಉತ್ಪನ್ನಗಳ ಉತ್ಪಾದನೆ ನಡೆಯುತ್ತಿರುವುದು ಕಂಡುಬಂದಿದೆ. ಆ ಅಕ್ರಮ ಕಾರ್ಖಾನೆಯಲ್ಲಿ 65 ಕಾರ್ಮಿಕರು ದುಡಿಯುತ್ತಿದ್ದರು. ಗುಟ್ಕಾ ತಯಾರಾದ ಬಳಿಕ ರಹಸ್ಯವಾಗಿ ಅದನ್ನು ವಿವಿಧ ರಾಜ್ಯಗಳಿಗೆ ಸಾಗಿಸಲಾಗುತ್ತಿತ್ತು. ಅಕ್ರಮ ಘಟಕದಿಂದ ಮಾರಾಟಕ್ಕೆ ಸಿದ್ಧವಾಗಿದ್ದ ಗುಟ್ಕಾ ಹಾಗೂ ಸುಣ್ಣ, ಸಾದಾ ಕತ್ಥಾ, ತಂಬಾಕು ಎಲೆ ಮತ್ತಿತರ ಕಚ್ಚಾ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ 4.14 ಕೋಟಿ ರು. ಎಂಬ ಅಂದಾಜಿದೆ ಎಂದು ಸಚಿವಾಲಯ ತಿಳಿಸಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ದೆಹಲಿಯ ಜಿಎಸ್‌ಟಿ ವಲಯ 4327 ಕೋಟಿ ರು. ಜಿಎಸ್‌ಟಿ ವಂಚನೆಯನ್ನು ಪತ್ತೆ ಹಚ್ಚಿದ್ದು, 15 ಮಂದಿಯನ್ನು ಬಂಧಿಸಿದೆ.

click me!