ಎರಡು ವಿಚಿತ್ರ ಮದುವೆ ಪ್ರಕರಣಗಳು ನಡೆದಿದ್ದು, ವರನ ವರ್ತನೆ ಕಂಡು ವಧು ಮಂಟಪದಿಂದ ಹೊರ ಬಂದಿದ್ದಾಳೆ. ಒಂದು ಮದುವೆಯಲ್ಲಿ ವರ ಮದ್ಯಪಾನ ಮಾಡಿ ಗೆಳತಿಯರೊಂದಿಗೆ ಇದ್ದರೆ, ಮತ್ತೊಂದು ಮದುವೆಯಲ್ಲಿ ವರ ಪದೇ ಪದೇ ಬಾತ್‌ರೂಮ್‌ಗೆ ಹೋಗಿ ಮದ್ಯ ಸೇವಿಸುತ್ತಿದ್ದ.
ನವದೆಹಲಿ/ಕಾನ್ಪುರ: ಮದುವೆಯ ಸಂದರ್ಭದಲ್ಲಿ ಸಣ್ಣಪುಟ್ಟ ಗಲಾಟೆಗಳು ಉಂಟಾಗುತ್ತವೆ. ಕೆಲವೊಮ್ಮೆ ಕೊನೆ ಕ್ಷಣದಲ್ಲಿ ಮದುವೆ ನಿಂತು ಹೋಗಿರುತ್ತವೆ. ಇತ್ತೀಚೆಗೆ ಉತ್ತರ ಭಾರತದಲ್ಲಿ ಎರಡು ವಿಚಿತ್ರ ಮದುವೆ ಪ್ರಕರಣಗಳು ನಡೆದಿದ್ದು, ವರನ ವರ್ತನೆ ಕಂಡು ವಧು ಮಂಟಪದಿಂದ ಹೊರ ಬಂದಿದ್ದಾಳೆ. ಈ ಎರಡೂ ಮದುವೆಗಳಲ್ಲಿ ಇನ್ನೇನು ಮಾಂಗಲ್ಯಧಾರಣೆ ನಡೆಯಬೇಕು ಅನ್ನೋವಷ್ಟರಲ್ಲಿ ಮದುವೆ ನಿಂತಿದೆ. ಒಂದು ಮದುವೆ ದೆಹಲಿಯ ಸಾಹಿಬಾದ್, ಮತ್ತೊಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಗೆಳತಿಯರೊಂದಿಗೆ ಕುಡಿಯುತ್ತಾ ಹೊಗೆ ಬಿಡ್ತಿದ್ದ ವರ
ಉತ್ತರ ಪ್ರದೇಶದ ಕಾನ್ಪುರದಲ್ಲಿ ಹಿಮಾಂಶು ಎಂಬವನ ಮದುವೆ ನಿಶ್ಚಯವಾಗಿತ್ತು. ಬ್ಯಾಂಕ್ ಉದ್ಯೋಗಿಯಾಗಿದ್ದ ಹಿಮಾಂಶು ಮದುವೆ ದಿನ ಮದ್ಯ ಸೇವಿಸಿ ತನ್ನಿಬ್ಬರು ಗೆಳತಿಯರ ಜೊತೆ ಸಿಗರೇಟ್ ಸೇದುತ್ತಿದ್ದನು. ಮದುವೆ ಮುನ್ನದ ಶಾಸ್ತ್ರಗಳ ಬಳಿಕ ಹಿಮಾಂಶು ಬಟ್ಟೆ ಬದಲಿಸಲು ತನ್ನ ಕೋಣೆಗೆ ಹೋಗಿದ್ದನು. ಈ ವೇಳೆ ತನ್ನ ಇಬ್ಬರು ಗೆಳತಿಯರೊಂದಿಗೆ ಹಿಮಾಂಶು ಮದ್ಯ ಸೇವಿಸುತ್ತಾ ಧೂಮಪಾನ ಮಾಡುತ್ತಿರೋದನ್ನು ವಧುವಿನ ಸೋದರ ಗಮನಿಸಿ ಪೋಷಕರಿಗೆ ತಿಳಿಸಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ವಧು ಮದುವೆಯಾಗಲ್ಲ ಎಂದು ಮಂಟಪದಿಂದ ಹೊರ ಬಂದಿದ್ದಾಳೆ.
ವಧು ಮದುವೆ ನಿರಾಕರಿಸಿದ್ದರಿಂದ ಕಲ್ಯಾಣಮಂಟಪದಲ್ಲಿ ಕೋಲಾಹಲವೇ ಸೃಷ್ಟಿಯಾಗಿತ್ತು. ನಂತರ ಎರಡೂ ಕಡೆಯವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಮದುವೆ ಕೊನೆ ಕ್ಷಣದಲ್ಲಿ ನಿಂತಿದ್ದರಿಂದ ಎರಡು ಕಡೆಯವರು ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದ್ದು, ಯಾರೂ ರಾಜಿಗೆ ಒಪ್ಪಿಕೊಳ್ಳುತ್ತಿಲ್ಲ. ಡಿಸೆಂಬರ್ 6ರಂದು ಮತ್ತೊಮ್ಮೆ ಠಾಣೆಗೆ ಬರುವಂತೆ ಸೂಚಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಶೂ ಕದ್ದ ಯುವತಿಯರಿಗೆ 2.5 ಕೋಟಿ ವರದಕ್ಷಿಣೆ ತಗೊಂಡ ವರ ಕೊಟ್ಟ ಹಣವೆಷ್ಟು?
ಪದೇ ಪದೇ ಬಾತ್‌ರೂಮ್‌ಗೆ ಹೋಗ್ತಿದ್ದ ವರ
ಇನ್ನು ದೆಹಲಿಯ ಸಾಹಿಬಾದ್‌ನ ಮದುವೆಯಲ್ಲಿ ವರ ಪದೇ ಪದೇ ಬಾತ್‌ರೂಮ್‌ಗೆ ಹೋಗುತ್ತಿದ್ದನು. ಆರತಕ್ಷತೆ ಬಳಿಕ ವಧು-ವರ ಮಂಟಪದಲ್ಲಿ ಹೂವಿನ ಮಾಲೆ ಧರಿಸಿ ಕುಳಿತಿದ್ದರು. ಈ ವೇಳೆಯೂ ಸಹ ವರ ಬಾತ್‌ರೂಮ್‌ಗೆ ಹೋಗುತ್ತಿರೋದಾಗಿ ಹೇಳಿ ತೆರಳುತ್ತಿದ್ದನು. ಅನುಮಾನ ಬಂದು ವಧುವಿನ ಪೋಷಕರು ಹಿಂಬಾಲಿಸಿದಾಗ ವರ ಮದ್ಯ ಕುಡಿಯುತ್ತಿರೋದು ಕಂಡು ಬಂದಿದೆ.
ಅತಿಯಾಗಿ ಮದ್ಯ ಸೇವನೆ ಮಾಡಿದ್ದರಿಂದ ವರನಿಗೆ ನಡೆಯಲು ಸಹ ಆಗುತ್ತಿರಲಿಲ್ಲ. ತೂರಾಡುತ್ತಾ ಮಂಟಪಕ್ಕೆ ವರ ಬಂದಿರೋದನ್ನು ನೋಡಿದ ವಧು, ಮದುವೆಯಾಗಲು ನಿರಾಕರಿಸಿದ್ದಾಳೆ. ವಧುವಿನ ಬೆಂಬಲಕ್ಕೆ ಆಕೆಯ ಪೋಷಕರು ನಿಂತಿದ್ದಾರೆ. ಮದ್ಯಪಾನ ಮಾಡೋ ವಿಷಯ ಬಚ್ಚಿಟ್ಟು ಮೋಸ ಮಾಡಲಾಗಿದೆ ಎಂದು ಆರೋಪಿಸಿರುವ ವಧುವಿನ ಪೋಷಕರು 10 ಲಕ್ಷ ರೂಪಾಯಿ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಹೆಂಡ್ತಿ ಸತ್ತ ಮೇಲೆ ಮರು ಮದುವೆ ಆಗೋದು ಹೇಗೆ ಅಂತ ಸರ್ಚ್ ಮಾಡಿದವ ಅರೆಸ್ಟ್