ದಿಬ್ಬಣ ಅರ್ಧಕ್ಕೆ ನಿಲ್ಲಿಸಿ ರೈತ ಪ್ರತಿಭಟನೆಯಲ್ಲಿ ಪಾಲ್ಗೊಂಡ ಮದುಮಗ; ಮದುವೆ ಕತೆ ಏನು?

By Suvarna NewsFirst Published Jan 10, 2021, 5:52 PM IST
Highlights

ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದರ ನಡುವೆ ಹಲವು ಕ್ರೀಡಾಪಟುಗಳು, ಸೆಲೆಬ್ರೆಟಿಗಳು ರೈತರಿಗೆ ಬೆಂಬಲ ನೀಡಿದ್ದಾರೆ. ಇದೀಗ ಮದುವೆಗೆ ಹೊರಟ್ಟಿದ್ದ ಮದುಮಗ ಹಾಗೂ ಕುಟುಂಬಸ್ಥರು, ದಿಬ್ಬಣ ಅರ್ಧಕ್ಕೆ ಬಿಟ್ಟು ರೈತರ ಪ್ರತಿಭಟನೆ ಪಾಲ್ಗೊಂಡ ಘಟನೆ ನಡೆದಿದೆ. ಹಾಗಾದ್ರೆ ಮದುವೆ ಕತೆ ಏನಾಯ್ತು?

ಬರ್ನಾಲ(ಜ.10):  ಮದುವೆಯಾಗಿ ಹನಿಮೂನ್ ಹೋಗುವ ಬದಲು ರೈತ ಪ್ರತಿಭಟನೆಯಲ್ಲಿ ಪಾಲ್ಗೊಂಡ ನವ ಜೋಡಿಗಳು ಸೇರಿದಂತೆ ಹಲವು ಘಟನೆಗಳು ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ನಡೆದಿದೆ. ಇದೀಗ ಮದುವೆ ಹೊರಟ್ಟಿದ್ದ ಮದುಮಗ ಸೇರಿದಂತೆ ಇಡೀ ದಿಬ್ಬಣವೇ, ರೈತ ಪ್ರತಿಭಟನೆಯಲ್ಲಿ ಪಾಲ್ಗೊಂಡ ಘಟನೆ ಪಂಜಾಬ್‌ನ ಬರ್ನಾಲ ಜಿಲ್ಲೆಯಲ್ಲಿ ನಡೆದಿದೆ.

ಪ್ರತಿಭಟನಾಕಾರರಿಗೆ ನೆರವಾಗಲು ಕಂಟೈನರ್ ಟ್ರಕ್‌ನ್ನು ಮನೆಯಾಗಿ ಪರಿವರ್ತಿಸಿದ ರೈತ!.

ಮೆಹೆಲ್ ಖಲನ್ ಟೋಲ್ ಪ್ಲಾಜಾದಲ್ಲಿ ರೈತರ ಪ್ರತಿಭಟನೆ 101 ದಿನಕ್ಕೆ ಕಾಲಿಟ್ಟಿದೆ. ಕೇಂದ್ರ ಕೃಷಿ ಮಸೂದೆ ಹಿಂಪಡೆಯುವ ವರೆಗೂ ಪ್ರತಿಭಟನೆ ನಡೆಸುವುದಾಗಿ ರೈತರು ಹೇಳಿದ್ದಾರೆ. ಇದೇ ದಾರಿಯಲ್ಲಿ ಮದುವೆಗೆ ಹೊರಟ್ಟಿದ್ದ 30 ವರ್ಷದ ಜಗದೀಪ್ ಸಿಂಗ್ ಹಾಗೂ ಕುಟಂಬಸ್ಥರು, ಟೋಲ್ ಪ್ಲಾಝಾ ಬಳಿ ವಾಹನ ನಿಲ್ಲಿಸಿದ್ದಾರೆ. ಬಳಿಕ ಪ್ರತಿಭಟನೆ ನಡೆಸುತ್ತಿದ್ದ ರೈತರ ಜೊತೆ ಸೇರಿ ಕೇಂದ್ರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಭಾರತೀಯ ಕಿಸಾನ್ ಯೂನಿಯನ್ ನಡೆಸುತ್ತಿದ್ದ ರೈತ ಪ್ರತಿಭಟನೆಯಲ್ಲಿ ಪಾಲ್ಗೊಂಡ ಮದುಮಗ ಹಾಗು ಕುಟುಂಬಸ್ಥರು, ತಮ್ಮ ಮದುವೆ ವಿಳಂಬವಾದರೂ ಚಿಂತೆಯಿಲ್ಲ ಎಂದು ಹೋರಾಟ ಮಾಡಿದ್ದಾರೆ. ನನ್ನ ತಂದೆ ಸೇನೆಯಿಂದ ನಿವೃತ್ತರಾದ ಯೋಧ. ನಮಗೆ 5 ಎಕರೆ ಜಮೀನಿದೆ. ಇದರಲ್ಲಿ ಕೃಷಿ ಮಾಡುತ್ತಿದ್ದೇವೆ. ರೈತರ ನೋವು ನಮಗೆ ಚೆನ್ನಾಗಿ ತಿಳಿದಿದೆ. ಹೀಗಾಗಿ ಮದುವೆ ದಿಬ್ಬಣ ಸಮೇತ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೇವೆ ಎಂದು ಮದುಮಗ ಜಗದೀಪ್ ಸಿಂಗ್ ಹೇಳಿದ್ದಾರೆ.

11 ಗಂಟೆಯಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.  ಸಮಾರು 2 ಗಂಟೆಗಳ ಕಾಲ ಪ್ರತಿಭಟನೆಯಲ್ಲಿ ನಿರತ ಮದುವೆ ಕುಟುಂಬ, ಬಳಿಕ ಪ್ರತಿಭಟನಾ ನಿರತ ರೈತರಿಗೆ 11,000 ರೂಪಾಯಿ ನೀಡಿ, ನಮ್ಮ ಬೆಂಬಲ ಸದಾ ನಿಮಗಿರಲಿದೆ ಎಂದು ಮದುವೆಗೆ ತೆರಳಿದ್ದಾರೆ. ಮಂಟಪಕ್ಕೆ ಲೇಟಾಗಿ ತಲುಪಿದರೂ, ಜಗದೀಪ್ ಸಿಂಗ್ ಮದುವೆ ಶಾಸ್ತ್ರೋಕ್ತವಾಗಿ ನಡೆದಿದೆ.

click me!